ಚೆನ್ನೈ: ಕಳೆದ ಕೆಲ ದಿನಗಳಿಂದ ತಮಿಳುನಾಡು ಸೇರಿದಂತೆ ರಾಷ್ಟ್ರಾದ್ಯಂತ ತೀವ್ರ ಕುತೂಹಲ ಕೆರಳಿಸಿದ್ದ ಸೂಪರ್‌ಸ್ಟಾರ್ ರಜನಿಕಾಂತ್ ಅವರ ರಾಜಕೀಯ ರಂಗ ಪಾದಾರ್ಪಣೆ ಭಾನುವಾರ ಖಚಿತಗೊಂಡಿದ್ದು ಹೊಸ ಪಕ್ಷ ಕಟ್ಟುತ್ತಿರುವುದಾಗಿ ಘೋಷಣೆ ಮಾಡಿದ್ದಾರೆ.
ಕಳೆದ 6 ದಿನಗಳಿಂದ ರಾಘವೇಂದ್ರ ಹಾಲ್‌ನಲ್ಲಿ ಅಭಿಮಾನಿಗಳೊಂದಿಗೆ ಸಂವಾದ ನಡೆಸುತ್ತಿರುವ ರಜನಿಕಾಂತ್ ವರ್ಷಾಂತ್ಯಕ್ಕೆ ಕೋಟ್ಯಂತರ ಅಭಿಮಾನಿಗಳ ಕುತೂಹಲಕ್ಕೆ ತೆರೆ ಎಳೆದಿದ್ದಾರೆ.
ಅಭಿಮಾನಿಗಳನ್ನುದ್ದೇಶಿಸಿ ಮಾತನಾಡಿದ ರಜನಿಕಾಂತ್ ‘ನಾನು ರಾಜಕೀಯಕ್ಕೆ ಪ್ರವೇಶ ಮಾಡುತ್ತಿದ್ದೇನೆ. ರಾಜಕೀಯ ಕ್ಷೇತ್ರ ಬಹಳಷ್ಟು ಹದಗೆಟ್ಟಿದೆ. ದೇಶದಲ್ಲಿ ಪ್ರಜಾಪ್ರಭುತ್ವಕ್ಕಾಗಿ ಹೋರಾಡಬೇಕಾಗಿದೆ. ಜಾತಿ,ಮತ ಭೇಧವಿಲ್ಲದ ಹೊಸ ಪಕ್ಷ ಕಟ್ಟುತ್ತಿದ್ದೇನೆ’ ಎಂದರು.
ತಮಿಳುನಾಡಿನ ಜನತೆಗಾಗಿ,ಅಭಿವೃದ್ಧಿಗಾಗಿ ಹೋರಾಟ ಮಾಡುವುದಾಗಿ ಘೋಷಣೆ ಮಾಡಿದರು.
‘ಕಮರ್ಣ್ಯೇ ವಾದಿಕಾರಸ್ತೇ ಮಾಫಲೇಶು ಕದಾಚನ, ಎಂದು ಭಗವಾನ್ ಶ್ರೀಕೃಷ್ಣ ಭಗವದ್ಗೀತೆಯಲ್ಲಿ ಹೇಳಿದ್ದಾನೆ. ಅಂದರೆ ನಿನ್ನ ಕೆಲಸವನ್ನು ನೀನು ಶ್ರದ್ಧೆಯಿಂದ ಮಾಡು, ಪ್ರತಿಫಲವನ್ನು ಅಪೇಕ್ಷಿಸಬೇಡ. ಯುದ್ಧ ಕ್ಷೇತ್ರದಲ್ಲಿ ಹೋರಾಟ ಮಾಡಬೇಕಿದೆ. ಮಡಿದರೆ ವೀರ ಸ್ವರ್ಗ. ನಾನು ಯುದ್ಧಕ್ಕೆ ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದೇನೆ ಇನ್ನು ಅಂಬನ್ನು (ಬಾಣಗಳು) ಬಿಡುವುದು ಮಾತ್ರ ಬಾಕಿ’ ಎಂದು ತಮ್ಮದೇ ಶೈಲಿಯಲ್ಲಿ ಡೈಲಾಗ್ ಹೊಡೆದರು.
‘ಮುಂದಿನ ಲೋಕಸಭಾ ಚುನಾವಣೆಯ ಒಳಗೆ ಪಕ್ಷದ ಕುರಿತಾಗಿನ ಸಂಪೂರ್ಣ ವಿವರ ನೀಡುತ್ತೇನೆ. ನಾವು ತಮಿಳುನಾಡಿನ ಎಲ್ಲಾ 235 ಕ್ಷೇತ್ರಗಳಲ್ಲೂ ಸ್ಪರ್ಧೆ ಮಾಡುತ್ತೇವೆ’ ಎಂದರು.
ನನ್ನದು ಬಿಲ್ಡಪ್ ಜಾಸ್ತಿ ಆಯೀತೆ?
ತಮ್ಮಮಾತಿನ ವೇಳೆ ನನ್ನುದು ಸ್ವಲ್ಪ ಬಿಲ್ಡಪ್ ಜಾಸ್ತಿ ಆಯೀತೆ ಎಂದರು. ಈ ವೇಳೆ ಅಭಿಮಾನಿಗಳು ಕೇಕೆ ಹಾಕಿ ಸಂಭ್ರಮಿಸಿದರು.
ರಜನಿಕಾಂತ್ ರಾಜಕೀಯ ಎಂಟ್ರಿಯಾಗುತ್ತಿದ್ದಂತೆ ಚೆನ್ನೈ ಸೇರಿದಂತೆ ತಮಿಳುನಾಡಿನಾದ್ಯಂತ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿ ಕೇಕೆ ಹಾಕುತ್ತಿದ್ದಾರೆ.