Advertisement
ಉತ್ತರ ಪ್ರದೇಶದಲ್ಲಿನ ಆಡಳಿತಾರೂಢ ಸಮಾಜವಾದಿ ಪಕ್ಷದಲ್ಲಿ ಗುಪ್ತಗಾಮಿನಿಯಾಗಿ ಹರಿಯುತ್ತಿದ್ದ ಆಕ್ರೋಶ, ಸಿಟ್ಟು-ಸೆಡವುಗಳು ಈಗ ಬಹಿರಂಗವಾಗಿದೆ. ಆದರೆ ಇದು ಎಷ್ಟು ಪ್ರಮಾಣದಲ್ಲಿ ನಿಜ ಅಥವಾ ಸುಳ್ಳು ಎನ್ನುವುದನ್ನು ಮುಖ್ಯಮಂತ್ರಿ ಅಖೀಲೇಶ್ ಯಾದವ್, ಸಮಾಜವಾದಿ ಪಕ್ಷದ ಸಂಸ್ಥಾಪಕ ಮುಲಾಯಂ ಸಿಂಗ್ ಯಾದವ್ ಅವರೇ ಹೇಳಬೇಕಾಗಿದೆ. ಆ ಪಕ್ಷದಲ್ಲಿ ಹಿಂದಿನ ಸಂದರ್ಭಗಳಲ್ಲಿ ಉಂಟಾಗಿದ್ದ ಗದ್ದಲ – ಗೊಂದಲಗಳು ಮೊದಲ 4-5 ದಿನಗಳಲ್ಲಿ ಭಾರಿ ಪ್ರಮಾಣದಲ್ಲಿ ಸುದ್ದಿಯಾಗಿ ಅನಂತರದ ದಿನಗಳಲ್ಲಿ ತೀರಾ ತಣ್ಣಗಾಗಿ ಹೋಗಿದ್ದವು. ಸದ್ಯ ಉಂಟಾಗಿರುವ ಕಲಹವೆನ್ನುವುದು ಕೂಡ ಅದೇ ರೀತಿ ಏಕೆ ಇರಬಾರದು ಎಂಬ ಪ್ರಶ್ನೆಯೂ ಸಹಜವಾಗಿಯೇ ಏಳುತ್ತದೆ.
Related Articles
ಇಪ್ಪತ್ತೈದು ವರ್ಷಗಳ ಹಿಂದೆ ಸಮಾಜವಾದಿ ಪಕ್ಷ ಸ್ಥಾಪಿಸಿದ ಆರಂಭದಲ್ಲಿ ಹಾಲಿ ದಿನಮಾನಗಳಲ್ಲಿ ಹೀಗಾಗುತ್ತದೆಯೋ ಇಲ್ಲವೋ ಎಂಬ ವಿಚಾರಗಳು ಮುಲಾಯಂ ಸಿಂಗ್ ಯಾದವ್‌ರಿಗೆ ಗೊತ್ತಿತ್ತೋ ಇಲ್ಲವೋ ಎನ್ನುವುದು ಪ್ರಶ್ನೆಯಲ್ಲ. ಆದರೆ ಸದ್ಯ ಪರಿಸ್ಥಿತಿಯಲ್ಲಿ ಪಕ್ಷದಲ್ಲಿ ಅವರ ಮಾತುಗಳಿಗೆ ಹೆಚ್ಚಿನ ಬೆಲೆಯಿಲ್ಲ ಎನ್ನುವ ವಿಚಾರವಂತೂ ಸ್ಪಷ್ಟ. ಜತೆಗೆ ಮಾಧ್ಯಮಗಳಲ್ಲಿ ವರದಿಯಾಗಿರುವ ಪ್ರಕಾರ ಸಮಾಜವಾದಿ ಪಕ್ಷದ ಗದ್ದಲ-ಗೊಂದಲಗಳು ಆರಂಭದಲ್ಲಿ ರಂಪ -ರಾಮಾಯಣ ನಡೆದ ಮೇಲೆ ಮುಲಾಯಂ ಸಿಂಗ್ ರಂಗಪ್ರವೇಶವಾಗುತ್ತದೆ. ಎರಡರಿಂದ ಮೂರು ಗಂಟೆಗಳ ಕಾಲ ಬಿರುಸಿನ ಸಮಾಲೋಚನೆ ನಡೆದು, ಎಲ್ಲವೂ ಮುಕ್ತಾಯವಾಗಿದೆ ಎಂಬ ಘೋಷಣೆಯೊಂದಿಗೆ ಅದಕ್ಕೆ ಮುಂದಿನ ಹಂತದ ವರೆಗೆ ಪೂರ್ಣ ವಿರಾಮ ಬೀಳುತ್ತದೆ. ಹಾಲಿ ಉಂಟಾಗಿರುವ ಬೆಳವಣಿಗೆ ಬಗ್ಗೆ ಮುಲಾಯಂ ಅವರು ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದೂ ಅದೇ.
Advertisement
‘ಸದ್ಯ ಎಲ್ಲವೂ ಸರಿಯಾಗಿದೆ. ಪುತ್ರ ಕೈಗೊಂಡ ನಿರ್ಧಾರಗಳು ಸರಿಯಾಗಿಯೇ ಇದೆ,’ ಎಂದು ಹೇಳಿದ್ದಾರೆ. ಹೇಳಿ ಕೇಳಿ ಸಹೋದರ, ಮಾಜಿ ಸಚಿವ ಶಿವಪಾಲ್ ಯಾದವ್ ಬಗ್ಗೆ ಮುಲಾಯಂಗೆ ಒಲವು ಏನೂ ಇಲ್ಲವೇ ಎಂಬ ಪ್ರಶ್ನೆಗಳೂ ಉಂಟಾಗುತ್ತವೆ. ಪುತ್ರ ವ್ಯಾಮೋಹದ ಮುಂದೆ ಸಹೋದರ ವಾತ್ಸಲ್ಯ ಸೋತು ಹೋಗುವುದು ಸರಿ ತಾನೆ? ಐದು ವರ್ಷಗಳ ಹಿಂದೆ ಸಮಾಜವಾದಿ ಪಕ್ಷ ಉತ್ತರ ಪ್ರದೇಶದಲ್ಲಿ ವಿಧಾನಸಭೆ ಚುನಾವಣೆ ಗೆದ್ದ ಸಂದರ್ಭದಲ್ಲಿ ಮುಖ್ಯಮಂತ್ರಿ ಯಾರಾಗಬೇಕೆನ್ನುವುದು ಪಕ್ಷದ ಮತ್ತು ಕುಟುಂಬ ವಲಯದಲ್ಲಿ ಚರ್ಚೆಯಾಗಿತ್ತು.
ಮಾಜಿ ಸಚಿವ ಶಿವಪಾಲ್ ಯಾದವ್‌ಗೆ ಮುಖ್ಯಮಂತ್ರಿಯಾಗಬೇಕೆಂಬ ಆಸೆ ಇತ್ತು. ಅದಕ್ಕೆ ಹೆಚ್ಚೇನೂ ಮಹತ್ವ ಕೊಡದ ಮುಲಾಯಂ ಸಿಂಗ್ ಪುತ್ರನನ್ನೇ ತಂದು ಕೂರಿಸಿದರು. ಹೀಗಿದ್ದಾಗಿಯೂ ಅಖೀಲೇಶ್ ಸರ್ಕಾರದಲ್ಲಿ ಶಿವಪಾಲ್ ಯಾದವ್‌ರದ್ದೇ ಮಾತು ನಡೆಯುತ್ತಿತ್ತು. ಎಲ್ಲಿಯವರೆಗೆ ಎಂದರೆ ಮುಖ್ಯ ಕಾರ್ಯದರ್ಶಿ ಕೂಡ ಅವರ ನಿಷ್ಠರೇ ಆಗಿದ್ದರು. ಹಾಲಿ ಬಿಕ್ಕಟ್ಟು ಮತ್ತೂಮ್ಮೆ ಸ್ಫೋಟಗೊಳ್ಳಲು ಶ್ರೀಕಾರವಾದದ್ದೇ 1982ನೇ ಬ್ಯಾಚಿನ ಐಎಎಸ್ ಅಧಿಕಾರಿ ದೀಪಕ್ ಸಿಂಘಲ್ ಅವರನ್ನು 2016ರ ಸೆಪ್ಟೆಂಬರ್‌ನಲ್ಲಿ ಮುಖ್ಯ ಕಾರ್ಯದರ್ಶಿ ಸ್ಥಾನದಿಂದ ವಜಾಗೊಳಿಸಿದ ಬಳಿಕ, ಆ ಮೇಲೆ ಸರಕಾರದಲ್ಲಿ ಮತ್ತು ಪಕ್ಷದಲ್ಲಿನ ಆಂತರಿಕ ಗುದ್ದಾಟ ಮುಸುಕಿನಲ್ಲಿದ್ದದ್ದು ಬಯಲಿಗೆ ಬಂದಿತು. ಸಿಂಘಲ್ ಸ್ಥಾನಕ್ಕೆ ಅವರ ಕಿರಿಯ ಅಧಿಕಾರಿ 1983ನೇ ಬ್ಯಾಚಿನ ಐಎಎಸ್ ಅಧಿಕಾರಿ ರಾಹುಲ್ ಪ್ರಸಾದ್ ಭಟ್ನಾಗರ್‌ರನ್ನು ನೇಮಕ ಮಾಡಿದ್ದರು. ಕುತೂಹಲಕಾರಿ ಅಂಶವೆಂದರೆ ವಜಾಗೊಂಡ ಮುಖ್ಯ ಕಾರ್ಯದರ್ಶಿ ದೀಪಕ್ ಸಿಂಘಲ್ ಕೇವಲ ಎರಡು ತಿಂಗಳ ಹಿಂದಷ್ಟೇ ಅಂದರೆ 2016ರ ಜುಲೈನಲ್ಲಿ ಹುದ್ದೆಗೆ ನೇಮಕಗೊಂಡಿದ್ದರು. ಆಡಳಿತಾರೂಡ ಪಕ್ಷದಲ್ಲಿನ ನಾಯಕರ ಗುದ್ದಾಟಕ್ಕೆ ಅಧಿಕಾರಿಗಳು ಯಾವ ರೀತಿ ತುತ್ತಾಗುತ್ತಾರೆ ಎನ್ನುವುದಕ್ಕೆ ಇದೊಂದು ಉತ್ತಮ ನಿದರ್ಶನ.
ಅಖೀಲೇಶ್ ಯಾದವ್ ಬಣ ಆಯೋಜಿಸಿದ್ದ ವಿಶೇಷ ಕಾರ್ಯಕಾರಿಣಿಯಲ್ಲಿ ಸಮಾಜವಾದಿ ಪಕ್ಷದ ಅಧ್ಯಕ್ಷರಾಗಿದ್ದ ಮುಲಾಯಂ ಸಿಂಗ್ ಯಾದವ್‌ರನ್ನು ವಜಾಗೊಳಿಸಿ ಮುಖ್ಯಮಂತ್ರಿಯನ್ನು ನೇಮಿಸಿದ್ದಲ್ಲ. ಈ ಬಗ್ಗೆ ನಿರ್ಣಯವನ್ನು ಅಂಗೀಕರಿಸಿ, ಮುಲಾಯಂ ಸಿಂಗ್‌ರನ್ನು ಸಂಸ್ಥಾಪಕ ಅಧ್ಯಕ್ಷ ಅಥವಾ ಮಾರ್ಗದರ್ಶಕರನ್ನಾಗಿ ಮಾಡುವ ಬಗ್ಗೆಯೂ ಘೋಷಣೆ ಮಾಡಲಾಗಿತ್ತು. ಈ ಅಂಶವನ್ನು ಹಾಲಿ ರಾಷ್ಟ್ರೀಯ ಅಧ್ಯಕ್ಷ ಅಖೀಲೇಶ್ ಯಾದವ್ ಕೂಡ ತಮ್ಮ ಭಾಷಣದಲ್ಲಿ ಉಲ್ಲೇಖೀಸಿದ್ದರು. ಹೀಗಾಗಿ, ಬೆಳ್ಳಿಹಬ್ಬದ ಸಂಭ್ರಮದಲ್ಲಿರುವ ಪಕ್ಷದ ಸಂಸ್ಥಾಪಕರಿಗೆ ಕೂಡ ಇಂಥ ಒಂದು ಬೆಳವಣಿಗೆ ಬಗ್ಗೆ ಅರಿವು ಇದೆ ಎನ್ನುವುದು ಹಗಲಿನಷ್ಟೇ ಸತ್ಯ. ಆದರೆ ಅದು ಎಲ್ಲಿಯೂ ಉಲ್ಲೇಖವಾಗಿಲ್ಲ ಎನ್ನುವುದೂ ಸತ್ಯ.
ಇನ್ನು ಸಮಾಜವಾದಿ ಪಕ್ಷದಂಥ ರಾಜಕೀಯ ಪಕ್ಷಗಳಲ್ಲಿನ ಸಮಸ್ಯೆಯೇನೆಂದರೆ ಚಿಕ್ಕಪ್ಪ – ದೊಡ್ಡಪ್ಪಂದಿರದ್ದು. ವಿಶಾಲ ಹೃದಯಿಗಳಾಗಿರುವ ಚಿಕ್ಕಪ್ಪ-ದೊಡ್ಡಪ್ಪಂದಿರಾದರೆ ಸಮಸ್ಯೆ-ಸವಾಲುಗಳು ಕಾಣಿಸದು. ಅಧಿಕಾರ-ಪ್ರಭಾವಕ್ಕಿಂತ ಸಾಹೋದರ್ಯ ಸಂಬಂಧವೇ ಆದ್ಯತೆ ಎಂದಾದರೆ ಬಿಕ್ಕಟ್ಟು ಪರಿಹರಿಸಲು ಮುಂದಾಗುತ್ತಾರೆ. ಆದರೆ ಇಲ್ಲಿ ಶಿವಪಾಲ್ ಯಾದವ್ ಮತ್ತು ರಾಮ್‌ಗೊàಪಾಲ್ ಯಾದವ್ ಭಿನ್ನ ನಿಲುವುಗಳನ್ನು ಕೈಗೊಂಡಿದ್ದಾರೆ. ಮಾಜಿ ಸಚಿವ ಶಿವಪಾಲ್ ಯಾದವ್ ಅಧಿಕಾರಕ್ಕೇ ಹಾತೊರೆದು ಪಕ್ಷದಲ್ಲಿ ತಮ್ಮ ಪ್ರಭಾವಳಿ ಬೆಳೆಸಿಕೊಳ್ಳಲು ಮುಂದಾದರು. ಆದರೆ ಮುಲಾಯಂರ ಸೋದರ ಸಂಬಂಧಿ, ರಾಜ್ಯಸಭಾ ಸದಸ್ಯ ರಾಮ್‌ಗೋಪಾಲ್ ಯಾದವ್ ಪಕ್ಷವೇ ದೊಡ್ಡದು ಎಂಬ ರೀತಿಯಲ್ಲಿ ಮುಖ್ಯಮಂತ್ರಿ ಅಖೀಲೇಶ್ ಯಾದವ್ ಪರವಾಗಿ ಇದ್ದಾರೆನ್ನುವುದು ಹೊರ ನೋಟಕ್ಕೆ ಕಾಣುತ್ತಿರುವ ವಿಚಾರ.
ಈಗ ಹೇಗಿದ್ದರೂ ಚುನಾವಣಾ ವೇಳಾಪಟ್ಟಿ ಪ್ರಕಟವಾಗಿದೆ. ಈಗ ಸ್ಥಾನ ಹಂಚಿಕೆಯ ಗುದ್ದಾಟಗಳು ನಡೆದಿವೆ. ಬಿಹಾರ ಮಾದರಿಯಲ್ಲಿ ಮಹಾ ಮೈತ್ರಿಕೂಟ ನಡೆಸಬೇಕೆಂಬ ಮಾತುಕತೆಯಾಗಿ ಕಾಂಗ್ರೆಸ್-ಸಮಾಜವಾದಿ ಪಕ್ಷದ ನಡುವೆ ಮೈತ್ರಿ ಘೋಷಣೆ ಹೊರಬಿದ್ದಿತ್ತು. ಆದರೆ ಅದರ ಬೆನ್ನಲ್ಲೇ ಭಿನ್ನಾಭಿಪ್ರಾಯದ ಮಾತುಗಳೂ ವ್ಯಕ್ತವಾಗಿದ್ದವು. ಆರಂಭಿಕ ಹಂತದ ಮಾತುಗಳ ಪ್ರಕಾರ ಕಾಂಗ್ರೆಸ್‌ಗೆ 100 ಸ್ಥಾನಗಳನ್ನು ನೀಡಲು ಮುಖ್ಯಮಂತ್ರಿ ಅಖೀಲೇಶ್ ಯಾದವ್ ಒಪ್ಪಿ, ನಂತರ ಅಳೆದು ತೂಗಿದ್ದರು. ಅಲ್ಲದೆ ಆರ್‌ಎಲ್‌ಡಿಯನ್ನೂ ತಮ್ಮೊಂದಿಗೆ ಕರೆದುಕೊಂಡು ಹೋಗುವ ಮಾತುಗಳನ್ನಾಡಿ ಅದನ್ನೂ ಕೈಬಿಟ್ಟರು. ಇದೆಲ್ಲ ಆದ ಮೇಲೆ ಶುಕ್ರವಾರ ಮತ್ತು ಶನಿವಾರ ಮೈತ್ರಿಯ ಹಗ್ಗ ಜಗ್ಗಾಟ ನಡೆದು ಭಾನುವಾರದ ಹೊತ್ತಿಗೆ ಮೈತ್ರಿ ಕಾಯಂ ಆಗಿದೆ. ಕಾಂಗ್ರೆಸ್‌ನ ಬೇಡಿಕೆಯನ್ನು ಕೊಂಚ ಸಡಿಲಿಸಿ 105 ಸ್ಥಾನ ನೀಡಿದ್ದಾರೆ. ಆದರೆ ಇದನ್ನು ಒಪ್ಪಿಕೊಳ್ಳುವ ಮೊದಲು ಮಾಡಿದ ಗುದ್ದಾಟ, ಗೊಂದಲಗಳು ಯಾರನ್ನು ಒಪ್ಪಿಸಲು ಅಖೀಲೇಶ್ ಮಾಡಿಕೊಂಡರು ಎಂಬುದೇ ಯಕ್ಷಪ್ರಶ್ನೆಯಾಗಿದೆ.
– ಸದಾಶಿವ ಖಂಡಿಗೆ