Advertisement

123 ಮರಣೋತ್ತರ ಪರೀಕ್ಷೆ ನಡೆಸಿರುವ ರಾಜಮ್ಮ

12:31 PM Apr 10, 2017 | |

ಎಚ್‌.ಡಿ.ಕೋಟೆ: ಹೆಣ ಅಂದ್ರೆ ಯಾರಗೆ ಭಯವಿಲ್ಲ ಹೇಳಿ ? ಅದರಲ್ಲೂ ಕೊಳೆತ ಹೆಣ ಅಂದ್ರೆ ಕೇಳುವುದೇ ಬೇಡ ಗಂಡಸರೇ ಹೆಣ ನೋಡಲು ಭಯ ಬೀಳುತ್ತಾರೆ. ಆದರೆ ಇಲ್ಲೊಬ್ಬ ಮಹಿಳೆ ಹೆಣಗಳು ಕೊಳೆತು ದುರ್ವಾಸನೆ ಬೀರುತ್ತಿದ್ದರೂ ಮೃತದೇಹದ ಮರಣೋತ್ತರ ಪರೀಕ್ಷೆ ಅಂಜಿಕೆ ಅಳುಕಿಲ್ಲದೇ ನೆರರವೇರಿಸುತ್ತಾರೆ ಅಂದ್ರೆ? ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಗುತ್ತಿಗೆ ಆಧಾರದ ಮೇಲೆ ನಿಯೋಜನೆಗೊಂಡಿರುವ ರಾಜಮ್ಮ ಮೂಲತಃ ನಂಜನಗೂಡು ತಾಲೂಕಿನ ಹುರ ಗ್ರಾಮದವರು.  ಈಕೆಗೆ 1 ಹೆಣ್ಣು ಮಗುವಿದ್ದು ಪತಿ ಈಕೆಯಿಂದ ದೂರವಿದ್ದಾರೆ.

Advertisement

ಹೀಗಿರುವಾಗ ಜೀವನ ನಿರ್ವಹಣೆಗೆ ಅನ್ಯ ಮಾರ್ಗ ಕಾಣದೆ ಹುಲ್ಲಹಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ದಿನಗೂಲಿ ಆಧಾರದ ಮೇಲೆ ಕಳೆದ ಸುಮಾರು 7 ವರ್ಷದ ಹಿಂದೆ ಆಸ್ಪತ್ರೆಗೆ ಶುಚಿತ್ವದ ಕೆಲಸಕ್ಕೆ ಸೇರಿಕೊಂಡ ರಾಜಮ್ಮ ಶುಚಿತ್ವ ಕೆಲಸಕ್ಕಷ್ಟೇ ಸೀಮಿತವಾಗಿದ್ದರೆ ಇಂದು ಹೆಸರಾಗುತ್ತಿರಲಿಲ್ಲ. ಒಮ್ಮೆ ಹುಲ್ಲಹಳ್ಳಿ ಆಸ್ಪತ್ರೆಯಲ್ಲಿ ಮೃತದೇಹವೊಂದರ ಮರಣೋತ್ತರ ಪರೀಕ್ಷೆ ನೆರವೇರಿಸಬೇಕಿತ್ತು. ಸಹಾಯಕರಿಲ್ಲದ ಕಾರಣ ಅಲ್ಲಿನ ವೈದ್ಯ ಡಾ.ರವಿಕುಮಾರ್‌ ರಾಜಮ್ಮ ಅವರಿಂದ ಮೃತದೇಹದ ಮರಣೋತ್ತರ ಪರೀಕ್ಷೆಗೆ ಸಹಾಯ ಮಾಡುವಂತೆ ಕೇಳಿ ಕೊಂಡಿದ್ದಾರೆ. ಇದಕ್ಕೆ ಸ್ಪಂದಿಸಿದ ರಾಜಮ್ಮ ಮೃತದೇಹದ ಮರಣೋತ್ತರ ಪರೀಕ್ಷೆಗೆ ಸಿದ್ಧರಾಗಿದ್ದಾರೆ.

123 ಮೃತದೇಹಗಳ ಮರಣೋತ್ತರ ಪರೀಕ್ಷೆ ನೆರವೇರಿಸಿರುವ ರಾಜಮ್ಮ: ಬಳಿಕ ಒಂದಾದ ಮೇಲೊಂದರಂತೆ ಸಹಾಯಕರಿರಲಿ ಇಲ್ಲದಿರಲಿ ಹುಲ್ಲಹಳ್ಳಿ ಆಸ್ಪತ್ರೆಯೊಂದರಲ್ಲೇ 115 ಮೃತದೇಹಗಳ ಮರಣೋತ್ತರ ಪರೀಕ್ಷೆ ನೆರವೇರಿಸಿದ ರಾಜಮ್ಮರಿಗೆ ಈಗಲೂ ಮೃತದೇಹದ ಮರಣೋತ್ತರ ಪರೀಕ್ಷೆ ನೆರವೇರಿಸುವುದು ಅಂದ್ರೆ ಯಾವುದೇ ಅಂಜಿಕೆ ಅಳುಕಿಲ್ಲವಂತೆ. ಮೃತದೇಹ ಎಷ್ಟೇ ಕೊಳೆತು ನಾರುತ್ತಾ ಹುಳುಗಳ ಬಂದಿದ್ದರೂ ಮರಣೋತ್ತರ ಪರೀಕ್ಷೆ ನೆರವೇರಿಸುವುದರಲ್ಲಿ ರಾಜಮ್ಮ ಮುಂದಿದ್ದಾರೆ.

ಭಯ ಬೀಳುವ ಮಂದಿಯೇ ಹೆಚ್ಚು: ಎಷ್ಟೇ ಧೈರ್ಯ ಶಾಲಿ ಗಂಡಸರೇ ಆದ್ರೂ ಹೆಣ ಅಂದ್ರೆ ಭಯಬೀಳುವವರೇ ಹೆಚ್ಚು. ಅದರಲ್ಲೂ ಅಪಘಾತವಾಗಿ ವಿಚಿತ್ರವಾಗಿ ಮೃತಪಟ್ಟ ಮೃತದೇಹಗಳು, ನೀರಿನಲ್ಲಿ ಬಿದ್ದು ಕೊಳೆತು ನಾರು ಮೃತದೇಹಗಳು, ಕಾನೂನು ಬಾಹಿರವಾಗಿ ಮಣ್ಣು ಮಾಡದ ಮೃತದೇಹಗಳನ್ನು ಹಲವು ದಿನಗಳ ಬಳಿಕ ಮಣ್ಣಿನಿಂದ ಹೊರತೆಗೆಯುವ ಮೃತದೇಹಗಳು ಅಷ್ಟೇ ಅಲ್ಲದೇ ಬೆಂಕಿ ಅವಘಡದಲ್ಲಿ ಬೆಂದು ಭಯ ಹುಟ್ಟಿಸುವಂತಿರುವ ಮೃತದೇಹಗಳ ಮರಣೋತ್ತರ ಪರೀಕ್ಷೆ ಮಾಡುವುದು ಹಾಗಿರಲಿ ನೋಡಲು ಭಯ ಬೀಳುವ ಮಂದಿಯೇ ಹೆಚ್ಚಾಗಿರುವಾಗ ಯಾವುದೇ ಭಯವಿಲ್ಲದೇ ಒಬ್ಬ ಹೆಣ್ಣು ಮಗಳು ಇಂತಹ ಕಾರ್ಯದಲ್ಲಿ ತೊಡಗಿಸಿಕೊಂಡಿರುವುದು ನಿಜಕ್ಕೂ ಶ್ಲಾಘನೀಯ.

ಎಲ್ಲಾ ಕ್ಷೇತ್ರದಲ್ಲೂ ಹೆಣ್ಣು ಸರಿಸಮಾನಳು: ಹೆಣ್ಣು ಎಲ್ಲಾ ಕ್ಷೇತ್ರಗಳಲ್ಲಿಯೂ ಮುಂದೆ ಬರಬೇಕು. ಹೆಣ್ಣು ಗಂಡಿಗೆ ಸರಿಸಮಾನಳಾಗಿರಬೇಕು ಅನ್ನುವ ಹಲವಾರು ಮಾತುಗಳನ್ನು ಕೇಳಿದ್ದೇವೆ. ಆದರೆ ಮೃತದೇಹಗಳ ಮರಣೋತ್ತರ ಪರೀಕ್ಷೆ ನೆರವೇರಿಸಲು ಪುರುಷರೇ ಹಿಂದೆ ಬೀಳುವಾಗ ಅದೆಂತಹ ಮೃತದೇಹವೇ ಆಗಿರಲಿ ನಾನೊಬ್ಬಳೇ ಮೃತದೇಹದ ಮರಣೋತ್ತರ ಪರೀಕ್ಷೆ ನೆರವೇರಿಸಬಲ್ಲೆ ಅನ್ನುವ ರಾಜಮ್ಮ ಎಚ್‌.ಡಿ.ಕೋಟೆ ಸಾರ್ವಜನಿಕ ಆಸ್ಪತ್ರೆಗೆ ನಿಯೋಜನೆಗೊಂಡ 1 ತಿಂಗಳಲ್ಲಿ 8 ಮೃತದೇಹಗಳ ಮರಣೋತ್ತರ ಪರೀಕ್ಷೆ ನೆರವೇರಿಸಿರುವುದು ನಿಜಕ್ಕೂ ಮೆಚ್ಚುವಂತಹದ್ದು.

Advertisement

ಮರಣೋತ್ತರ ಪರೀಕ್ಷಕರ ಹುದ್ದೆ ಎಚ್‌.ಡಿ. ಕೋಟೆ ತಾಲೂಕು ಕೇಂದ್ರ ಸ್ಥಾನದ ಸಾರ್ವಜನಿಕ ಆಸ್ಪತ್ರೆಯಲ್ಲಿ ಖಾಲಿ ಇದ್ದು ನಿವೃತ್ತ ಸಿಬ್ಬಂದಿಯೊಬ್ಬರಿಂದ ಮೃತದೇಹದ ಮರಣೋತ್ತರ ಪರೀಕ್ಷೆ ನೆರವೇರಿಸಲು ಕೇಳಿದಷ್ಟು ಹಣ ನೀಡಬೇಕಿತ್ತು. ಆದರೂ ನಿಗದಿತ ಸಮಯದಲ್ಲಿ ಮರಣೋತ್ತರ ಪರೀಕ್ಷೆ ನೆರವೇರಿಸುತ್ತಿರಲಿಲ್ಲ. ಹಾಗಾಗಿ ರಾಜಮ್ಮರನ್ನು ಎಚ್‌.ಡಿ. ಕೋಟೆ ಸಾರ್ವಜನಿಕ ಆಸ್ಪತ್ರೆಗೆ ನಿಯೋಜನೆ ಮಾಡಲಾಗಿದೆ. ರಾಜಮ್ಮ ಸಕಾಲದಲ್ಲಿ ಮರಣೋತ್ತರ ಪರೀಕ್ಷೆ ನೆರವೇರಿಸುವ ಮೂಲಕ ಸಂಕಷ್ಟದಲ್ಲಿ ಸಿಲುಕುವ ಮೃತರ ಕುಟುಂಬಗಳಿಗೆ ಪರೋಕ್ಷವಾಗಿ ಸಹಕಾರಿಯಾಗಿದ್ದಾರೆ.

ನಾನು ಮೃತದೇಹಗಳ ಮರಣೋತ್ತರ ಪರೀಕ್ಷೆ ನೆರವೇರಿಸಲು ಡಾ. ರವಿಕುಮಾರ್‌ ಮುಖ್ಯಕಾರಣ. ಒಮ್ಮೆ ತುರ್ತಾಗಿ 1 ಮೃತದೇಹದ ಮರಣೋತ್ತರ ಪರೀಕ್ಷೆ ನೆರವೇರಿಸಲು ನನ್ನ ಸಹಾಯ ಪಡೆದು ಕೊಂಡರು. ಬಳಿಕ ನನಗೆ ಧೈರ್ಯ ತುಂಬಿ ಮರಣೋತ್ತರ ಪರೀಕ್ಷೆಗೆ ಸಜ್ಜಗೊಳಿಸಿದ ಹಿನ್ನೆಲೆ ಇಲ್ಲಿಯ ತನಕ ನಾನು ಒಟ್ಟು 123 ಮೃತದೇಹಗಳ ಮರಣೋತ್ತರ ಪರೀಕ್ಷೆ ನೆರವೇರಿಸಿದ್ದೇನೆ.
-ರಾಜಮ್ಮ, ಮಾದರಿ ಮಹಿಳೆ

* ಎಚ್‌.ಬಿ.ಬಸವರಾಜು

Advertisement

Udayavani is now on Telegram. Click here to join our channel and stay updated with the latest news.

Next