ತರಕಾರಿ ಮಾರ್ಕೆಟ್‌ನಲ್ಲಿ ತನ್ನ ಅಜ್ಜಿಯ ಜೊತೆಗೆ ಕೆಲಸ ಮಾಡಿಕೊಂಡಿರುತ್ತಿದ್ದ ಮೊಮ್ಮಗ ರಾಜ, ಅಲ್ಲಿನ ಸುತ್ತಮುತ್ತಲಿನ ಜನರಿಗೆ ಅಚ್ಚುಮೆಚ್ಚಿನ ಹುಡುಗ. ಇಂಥ ಹುಡುಗನ ಜೀವನದಲ್ಲಿ ಅನಿರೀಕ್ಷಿತವಾಗಿ ಎದುರಾಗುವ ಒಂದಷ್ಟು ಘಟನೆಗಳು, ಆತನಿಗೆ ತನ್ನ ಹಿನ್ನೆಲೆಯನ್ನು ಹುಡುಕಿಕೊಂಡು ಹೋಗುವಂತೆ ಮಾಡುತ್ತದೆ.
ಅಂತಿಮವಾಗಿ ರಾಜ ಎಂಬ ಹುಡುಗ ಯಾರು? ಅವನ ಹಿನ್ನೆಲೆಯೇನು? ಎಂಬುದೇ “ರಾಜಮಾರ್ತಾಂಡ’ ಸಿನಿಮಾದ ಕಥೆಯ ಒಂದು ಎಳೆ. ಅದು ಹೇಗಿದೆ ಎಂಬುದನ್ನು ಸಂಪೂರ್ಣವಾಗಿ ತಿಳಿದುಕೊಳ್ಳಬೇಕೆಂದರೆ, ಈ ವಾರ ತೆರೆಗೆ ಬಂದಿರುವ “ರಾಜ ಮಾರ್ತಾಂಡ’ನನ್ನು ಥಿಯೇಟರ್‌ನಲ್ಲಿ ನೋಡಲು ಮನಸ್ಸು ಮಾಡಬಹುದು.
ಬಿಡುಗಡೆಗೂ ಮೊದಲೇ ಚಿತ್ರತಂಡ ಹೇಳಿರುವಂತೆ “ರಾಜಮಾರ್ತಾಂಡ’ ಔಟ್ ಆ್ಯಂಡ್ ಔಟ್ ಆ್ಯಕ್ಷನ್ ಎಂಟರ್‌ಟೈನ್ಮೆಂಟ್ ಸಿನಿಮಾ. ಸಿನಿಮಾದ ಪ್ರತಿ ದೃಶ್ಯದಲ್ಲೂ ಒಂದಷ್ಟು ಪಂಚಿಂಗ್ ಡೈಲಾಗ್ಸ್, ಅಲ್ಲಲ್ಲಿ ಭರ್ಜರಿ ಆ್ಯಕ್ಷನ್ಸ್, ನಡುವೆ ಲವ್, ಕಾಮಿಡಿ, ಸೆಂಟಿಮೆಂಟ್, ಎಮೋಶನ್ಸ್, ಸಾಂಗ್ಸ್ ಎಲ್ಲವನ್ನೂ ಸೇರಿಸಿ ಮಾಸ್ ಆಡಿಯನ್ಸ್‌ಗೆ ಇಷ್ಟವಾಗುವಂತೆ “ರಾಜಮಾರ್ತಾಂಡ’ನನ್ನು ತೆರೆಗೆ ತಂದಿದೆ ಚಿತ್ರತಂಡ.
ತಮ್ಮ ಕೊನೆ ಸಿನಿಮಾವಾಗಿರುವ “ರಾಜಮಾರ್ತಾಂಡ’ದ ಪ್ರತಿದೃಶ್ಯದಲ್ಲೂ ನಾಯಕ ನಟ ಚಿರಂಜೀವಿ ಸರ್ಜಾ ಲವಲವಿಕೆಯ ಅಭಿನಯ ನೀಡಿದ್ದಾರೆ. ತೆರೆಮೇಲೆ ಚಿರು ಇರುವಷ್ಟು ಹೊತ್ತು ಮಾಸ್ ಆಡಿಯನ್ಸ್‌ಗೆ ಇಷ್ಟವಾಗುತ್ತಾರೆ. ಚಿರು ಪಾತ್ರಕ್ಕೆ ಧ್ರುವ ಸರ್ಜಾ ನೀಡಿರುವ ಧ್ವನಿ ಕೂಡ ಅಚ್ಚುಕಟ್ಟಾಗಿ ಮೂಡಿಬಂದಿದ್ದು, ಪಾತ್ರಕ್ಕೆ ಒಪ್ಪುವಂತಿದೆ.
ಇನ್ನು ಮೊದಲೇ ಹೇಳಿದಂತೆ, “ರಾಜಮಾರ್ತಾಂಡ’ ಔಟ್ ಆ್ಯಂಡ್ ಔಟ್ ಆ್ಯಕ್ಷನ್ ಎಂಟರ್‌ಟೈನ್ಮೆಂಟ್ ಸಿನಿಮಾವಾಗಿದ್ದರಿಂದ, ಮೂವರು ಹೀರೋಯಿನ್ಸ್, ಹತ್ತಾರು ಸಹ ಕಲಾವಿದರ ದಂಡೇ ಸಿನಿಮಾದಲ್ಲಿದೆ. ಒಂದು ಕಮರ್ಷಿಯಲ್ ಆ್ಯಕ್ಷನ್ ಎಂಟರ್‌ಟೈನ್ಮೆಂಟ್ ಸಿನಿಮಾದಲ್ಲಿ ಏನೆಲ್ಲ ನಿರೀಕ್ಷಿಸಬಹುದೋ, ಅದೆಲ್ಲವನ್ನೂ ತನ್ನಲ್ಲಿ ಇಟ್ಟುಕೊಂಡು ಆ್ಯಕ್ಷನ್ ಅಖಾಡಕ್ಕೆ ಇಳಿದಿದ್ದಾನೆ “ರಾಜಮಾರ್ತಾಂಡ”
ಜಿ.ಎಸ್.ಕಾರ್ತಿಕ ಸುಧನ್