ಕೆಲವು ಹೀರೋಗಳಿಗೆ ತಮ್ಮ ಮೊದಲ ಸಿನಿಮಾ ಬಿಡುಗಡೆಗೆ ಮೊದಲೇ ಬಿರುದುಗಳು ಸಿಕ್ಕಿರುತ್ತೆ. ಅದು ಹೊಸ ವಿಷಯವೇನಲ್ಲ. ಆದರೆ, ಇಲ್ಲೊಂದು ಚಿತ್ರ ಬಿಡುಗಡೆಗೆ ಮೊದಲೇ ಒಂದಷ್ಟು ಅಭಿಮಾನಿಗಳನ್ನು ಪಡೆದುಕೊಂಡಿದೆ. ಹಾಗಂತ, ಇಲ್ಲಿ ನಾಯಕನಿಗಾಗಲಿ, ನಾಯಕಿಗಾಲಿ ಅಭಿಮಾನಿಗಳು ಹುಟ್ಟುಕೊಂಡಿಲ್ಲ. ಸಿನಿಮಾಗೇ ಅಭಿಮಾನಿ ವರ್ಗವಿದೆಯಂತೆ. ಹಾಗಂತ, ಹೇಳಿಕೊಂಡಿದ್ದು ನಿರ್ಮಾಪಕ ಎಸ್.ಕೆ.ಮೋಹನ್‌ಕುಮಾರ್.
ಅವರು ಹಾಗೆ ಹೇಳಿದ್ದು, ತಮ್ಮ ನಿರ್ಮಾಣದ “ರಾಜಲಕ್ಷ್ಮಿ’ ಚಿತ್ರದ ಬಗ್ಗೆ. ಹೌದು, ಈ ಚಿತ್ರಕ್ಕೆ ಈಗಾಗಲೇ ಅಭಿಮಾನಿಗಳು ಹುಟ್ಟುಕೊಂಡಿದ್ದು, ಸಿನಿಮಾ ಬಿಡುಗಡೆಗೆ ಕಾಯುತ್ತಿದ್ದಾರಂತೆ. ಆ ಬಗ್ಗೆ ಹೇಳುವ ಮೋಹನ್ ಕುಮಾರ್, “ಚಿತ್ರ ನ.22 ರಂದು ಬಿಡುಗಡೆಯಾಗುತ್ತಿದೆ. ಈಗಾಗಲೇ ಚಿತ್ರದ ಟ್ರೇಲರ್, ಹಾಡುಗಳಿಗೆ
ಎಲ್ಲೆಡೆಯಿಂದಲೂ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಇದೊಂದು ಹಳ್ಳಿ ಸೊಗಡಿನ ಕಥೆ. ಲವ್ ಇದೆ. ಮಾಸ್ ಫೀಲೂ ಇದೆ. ಜೊತೆಗೆ ಹಾಸ್ಯವೂ ಇದೆ. ಇವಿಷ್ಟೂ ಜಾನರ್ ಬೆರೆತ ಚಿತ್ರವಿದು. ಬಹುತೇಕ ಹೊಸಬರೇ ಸೇರಿ ಮಾಡಿದ ಚಿತ್ರವಿದು. ಬಿಡುಗಡೆ ಮೊದಲೇ, ಒಳ್ಳೆಯ ಮೊತ್ತಕ್ಕೆ ಮಾರಾಟದ ಮಾತುಕತೆ ನಡೆಯುತ್ತಿದೆ. ಅದರಲ್ಲೂ ರಾಜ್ಯಾದ್ಯಂತ ಪ್ರವಾಸ ಮಾಡಿದ ಚಿತ್ರತಂಡಕ್ಕೂ ಉತ್ತಮ ಬೆಂಬಲ ಸಿಕ್ಕಿದೆ. ರಿಲೀಸ್ ಮುನ್ನವೇ ಅಭಿಮಾನಿಗಳು ಸಿಕ್ಕಿದ್ದಾರೆ. ನಿಮ್ಮೆಲ್ಲರ ಸಹಕಾರ, ಪ್ರೋತ್ಸಾಹ ಬೇಕು’ ಎಂದರು ಮೋಹನ್ ಕುಮಾರ್.
ನಿರ್ದೇಶಕ ಕಾಂತರಾಜ್‌ಗೌಡ ಅವರಿಗೆ ಇದು ಮೊದಲ ಚಿತ್ರ. ವೃತ್ತಿಯಲ್ಲಿ ಅವರು ವಕೀಲರು. ಸಿನಿಮಾ ಪ್ರೀತಿ ಇದ್ದುದರಿಂದ “ರಾಜಲಕ್ಷ್ಮಿ’ ಚಿತ್ರ ಮಾಡಿದ್ದಾರೆ. “ಈ ಚಿತ್ರಕ್ಕೆ “ರಾಜಲಕ್ಷ್ಮಿ’ ಶೀರ್ಷಿಕೆ ಇಟ್ಟಾಗ, ನಿರ್ಮಾಪಕರು ಖುಷಿಯಾಗಿ, ಇದನ್ನೇ ಫಿಕ್ಸ್ ಮಾಡಿ ಅಂದರು. ಆಮೇಲೆ ಗೊತ್ತಾಯ್ತು. ಇದು ಅವರ ತಂದೆ-ತಾಯಿ ಹೆಸರು ಅಂತ. ಪಕ್ಕಾ ಲವ್‌ಸ್ಟೋರಿ ಇರುವ ಈ ಕಥೆ ನೈಜ ಘಟನೆ ಹೊಂದಿದೆ. ಗ್ರಾಮೀಣ ಭಾಗದಲ್ಲೇ ನಡೆಯುವ ರಾಜಕೀಯ ಚಟುವಟಿಕೆಗಳನ್ನು ತೋರಿಸುವ ಪ್ರಯತ್ನ ಇಲ್ಲಿದೆ. ಬಹುತೇಕ ಮಂಡ್ಯ ಸುತ್ತಮುತ್ತಲ ಗ್ರಾಮಗಳಲ್ಲಿ ಚಿತ್ರೀಕರಿಸಲಾಗಿದೆ. ರಾಜಕೀಯ ವಿಷಯಗಳಿಂದ ಹೇಗೆ ಸಂಬಂಧಗಳು ಹಾಳಾಗುತ್ತವೆ. ಅದರ ಕೊರತೆ ಹೇಗೆಲ್ಲಾ ಇರುತ್ತೆ ಎಂಬುದನ್ನು ಹೇಳಿದ್ದೇವೆ’ ಎನ್ನುತ್ತಾರೆ ನಿರ್ದೇಶಕ ಕಾಂತರಾಜ್ ಗೌಡ.
ಮೀಸೆ ಮೂರ್ತಿ ಅವರಿಗೆ ಇಲ್ಲಿ ಖಳನಟನ ಪಾತ್ರ ಸಿಕ್ಕಿದೆಯಂತೆ. ನರಸಿಂಹೇಗೌಡ ಪಾತ್ರದಲ್ಲಿ ಅವರು ಕಾಣಿಸಿಕೊಂಡಿದ್ದು, ನಾಯಕಿಯ ತಂದೆ ಪಾತ್ರ ಮಾಡಿದ್ದಾಗಿ ಹೇಳಿಕೊಂಡರು.
ಚಿತ್ರಕ್ಕೆ ನವೀನ್ ತೀರ್ಥಹಳ್ಳಿ ಹೀರೋ. ಅವರು ಅಂದು ಗೈರು ಇದ್ದರು. ಆ ಬಗ್ಗೆ ನಿರ್ಮಾಪಕರನ್ನು ಪತ್ರಕರ್ತರು ಪ್ರಶ್ನಿಸಿದ್ದಕ್ಕೆ, “ಅವರು ಈಗ ದೊಡ್ಡವರಾಗಿದ್ದಾರೆ’ ಎಂದರು. ಏನಾದರೂ ಸಮಸ್ಯೆ ಆಗಿದೆಯಾ ಅಂದಿದ್ದಕ್ಕೆ, “ಹೌದು ಸರ್, ಅವರು ಪ್ರಚಾರಕ್ಕೆ ಬರುತ್ತಿಲ್ಲ. ಕರೆದರೂ ಕಡೆಗಣಿಸುತ್ತಿದ್ದಾರೆ. ಹಾಗಾಗಿ, ನಮ್ಮ ಚಿತ್ರತಂಡದ ಜೊತೆ ಪ್ರಚಾರಕ್ಕೆ ಮುಂದಾಗುತ್ತಿದ್ದೇನೆಷ್ಟೇ ಎಂದರು.
ನಾಯಕಿ ರಶ್ಮಿ ಗೌಡ ಅವರಿಗೆ ಇದು ಮೂರನೇ ಚಿತ್ರ. ಸಾಫ್ಟ್ ವೇರ್ ಕ್ಷೇತ್ರದಿಂದ ಬಂದ ಅವರಿಗೆ ತಮ್ಮ ಆಸೆ ಈಡೇರುತ್ತಿರುವ ಖುಷಿ ಇದೆಯಂತೆ. ಇಲ್ಲಿ ಅವರು ಬಜಾರಿ ಹುಡುಗಿಯ ಪಾತ್ರ ಮಾಡಿದ್ದಾರಂತೆ. ಸಣ್ಣ ಹಳ್ಳಿಯೊಂದರಲ್ಲಿ ನಡೆದ ಕಥೆ ಎಲ್ಲರಿಗೂ ಇಷ್ಟವಾಗಲಿದೆ’ ಎಂದರು ರಶ್ಮಿ. ಟೆನ್ನಿಸ್ ಕೃಷ್ಣ ಅವರೂ ಇಲ್ಲೊಂದು ಪಾತ್ರ ಮಾಡಿದ್ದು, ಹೊಸ ತಂಡ ಎಂಬ ಭಾವನೆ ಬರಲಿಲ್ಲವಂತೆ. ಕಾರಣ, ಎಲ್ಲರೂ ಅಚ್ಚುಕಟ್ಟಾಗಿ ಕೆಲಸ ಮಾಡಿದ್ದಾರೆ. ಇದೊಂದು ಹಳ್ಳಿ ಸೊಗಡಿನ ಚಿತ್ರ ಎಂದರು ಟೆನ್ನಿಸ್ ಕೃಷ್ಣ.
ಚಿತ್ರಕ್ಕೆ ಎ.ಟಿ.ರವೀಶ್ ಸಂಗೀತವಿದೆ. ಮಾಗಡಿ ಯತೀಶ್ ಸಂಭಾಷಣೆ ಇದೆ. ಡಿ.ಕೆ.ದಿನೇಶ್ ಅವರ ಛಾಯಾಗ್ರಹಣವಿದೆ. ನಾಗರಾಜ್.ಎಸ್.ಮೂರ್ತಿ, ನೃತ್ಯವಿದೆ. ಚಿತ್ರದಲ್ಲಿ ಹೊನ್ನವಳ್ಳಿ ಕೃಷ್ಣ, ಸೀತಾರಾಮು ಇತರರು ನಟಿಸಿದ್ದಾರೆ.