ಕಲಬುರಗಿ: ಭೂಕಂಪಕ್ಕೆ ಒಳಗಾಗುತ್ತಿರುವ ಗಡಿಕೇಶ್ವಾರ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಾಸಕ್ಕೆ ಯೋಗ್ಯವಲ್ಲದ ಅಂದರೆ ಹಳೆ ಮನೆಗಳ ಸಮೀಕ್ಷೆ ಕಾರ್ಯ ಭರದಿಂದ ಸಾಗಿದೆ ಎಂದು ಸೇಡಂ ಕ್ಷೇತ್ರದ ಶಾಸಕ ರಾಜಕುಮಾರ ಪಾಟೀಲ ಹೇಳಿದರು.
ಭೂಕಂಪ ಪೀಡಿತ ಗಡಿಕೇಶ್ವಾರ ಗ್ರಾಮದಲ್ಲಿ ವಾಸ್ತವ್ಯ ಹೂಡಿ, ಗ್ರಾಮಸ್ಥರನ್ನು ಉದ್ದೇಶಿಸಿ ಮಾತನಾಡಿದ ಅವರು, ಈಗಾಗಲೇ ಮೂರು ಅಧ್ಯಯನ ತಂಡಗಳು ಈಗಾಗಲೇ ಆಗಮಿಸಿವೆ. ವರದಿಗಳ ಆಧಾರದ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು. ಈಗ ಇರುವ ಜಾಗದಲ್ಲೇ ಹೊಸ ಮನೆಗಳನ್ನು ನಿರ್ಮಿಸಲಾಗುವುದು. ಇಲ್ಲದಿದ್ದರೆ ಗ್ರಾಮದ ಹೊರಗಡೆ ಜಾಗದಲ್ಲಿ ಎಲ್ಲರಿಗೂ ಹೊಸದಾಗಿ ಮನೆಗಳನ್ನು ನಿರ್ಮಿಸಲಾಗುವುದು ಎಂದು ಭರವಸೆ ನೀಡಿದರು.
ಕಲಬುರಗಿ ಸಂಸದ ಡಾ| ಉಮೇಶ ಜಾಧವ ಮಾತನಾಡಿ, ಸೋಮವಾರ ಕಂದಾಯ ಸಚಿವ ಆರ್. ಅಶೋಕ ಆಗಮಿಸುತ್ತಿದ್ದಾರೆ. ನಾವು ಹಾಗೂ ಶಾಸಕರು ಗಡಿಕೇಶ್ವಾರದಲ್ಲೇ ವಾರಗಟ್ಟಲೇ ಇದ್ದು ಎಲ್ಲ ಬೇಡಿಕೆಗಳನ್ನು ಆಲಿಸಿ ಪಟ್ಟಿ ಮಾಡಿ, ಸರ್ಕಾರದ ಮಟ್ಟದಲ್ಲಿ ಬಗೆಹರಿಸಲಾಗುವುದು ಎಂದರು.
ಗಡಿಕೇಶ್ವಾರ (ಚಿಂಚೋಳಿ): ಗ್ರಾಮದಲ್ಲಿ ಬೆಳಗ್ಗೆ 11:25ಕ್ಕೆ ಮತ್ತೆ ಭೂಮಿ ಕಂಪಿಸಿದ್ದು, ಯಾವ ಶಬ್ದ ಕೇಳಿದರೂ ಗ್ರಾಮಸ್ಥರು ಭೂಕಂಪ ಆಯಿತೇನೋ ಎಂದು ಬೆಚ್ಚಿ ಬೀಳುವಂತೆ ಆಗಿದೆ. ಸತತ ಮಳೆ ನಡುವೆ ಭೂಕಂಪವಾದರೆ ಎಲ್ಲಿಗೆ ಹೋಗಬೇಕು? ಏನು ಮಾಡ ಬೇಕೆಂಬುದೇ ತೋಚುತ್ತಿಲ್ಲ. ಈಗಾಗಲೇ ಅರ್ಧ ಜನ ಗ್ರಾಮವನ್ನೇ ಬಿಟ್ಟು ಹೋಗಿದ್ದಾರೆ.
ಈಗ ಉಳಿದಿರುವ ಅರ್ಧ ಜನರಿಗೆ ಏನು ಮಾಡಬೇಕೆಂಬುದೇ ತೋಚುತ್ತಿಲ್ಲ. ವಾಸ್ತವ್ಯಕ್ಕೆ ಸಿದ್ಧತೆ: ಸಂಸದ ಡಾ| ಉಮೇಶ ಜಾಧವ, ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ಶನಿವಾರ ರಾತ್ರಿ ಗ್ರಾಮ ವಾಸ್ತವ್ಯ ಹೂಡಲು ಸಕಲ ಸಿದ್ಧತೆಯೂ ನಡೆದಿತ್ತು. ಜತೆಯಲ್ಲಿ ಜಿಟಿಜಿಟಿ ಮಳೆ ಸುರಿಯುತ್ತಿತ್ತು. ಹೀಗಾಗಿ ಗ್ರಾಮಸ್ಥರು ತಮ್ಮ ಮನೆ ಎದುರು ಹಾಕಿರುವ ಪ್ಲಾಸ್ಟಿಕ್ ಶೆಡ್‌ನಲ್ಲಿ ಆಶ್ರಯ ಪಡೆಯುತ್ತಿರುವುದು ಕಂಡು ಬಂತು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಗೌತಮ ಪಾಟೀಲ, ಪ್ರಮುಖರಾದ ಶರಣು ಮೆಡಿಕಲ್, ಮುಕುಂದ ದೇಶಪಾಂಡೆ, ತಹಶೀಲ್ದಾರ್ ಅಂಜುಮ್ ತಬಸುಮ್, ತಾಪಂ ಇಒ ಅನಿಲಕುಮಾರ ಈ ಸಂದರ್ಭದಲ್ಲಿ ಇದ್ದರು.