ಯಾದಗಿರಿ: ಶಾಸಕ ದಿ.ರಾಜಾ ವೆಂಕಟ್ಟಪ್ಪ ನಾಯಕ ಅವರ ನಿಧನದಿಂದ ನಡೆದ ಸುರಪುರ ವಿಧಾನಸಭೆ ಉಪಚುನಾವಣೆಯಲ್ಲಿ ರಾಜಾ ವೆಂಕಟಪ್ಪ ನಾಯಕ ಅವರ ಸುಪುತ್ರ, ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ರಾಜಾ ವೇಣುಗೋಪಾಲ ನಾಯಕ ಅವರು ಗೆಲುವು ಸಾಧಿಸಿದ್ದಾರೆ.
ಒಟ್ಟು 1,14,886 ಮತಗಳನ್ನು ಪಡೆದು ಕಾಂಗ್ರೆಸ್ ಅಭ್ಯರ್ಥಿ ರಾಜಾ ವೇಣುಗೋಪಾಲ ನಾಯಕ ಅವರು ಜಯಭೇರಿ ಬಾರಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ರಾಜೂಗೌಡ ಒಟ್ಟು 96,566 ಮತಗಳನ್ನು ಪಡೆದುಕೊಂಡು ಪರಾಭವಗೊಂಡಿದ್ದಾರೆ.
ರಾಜ್ಯ ಸರ್ಕಾರದ ಪ್ರಭಾವ ಹಾಗೂ ಅನುಕಂಪದ ಅಲೆಯಲ್ಲಿ ರಾಜಾ ವೇಣುಗೋಪಾಲ ನಾಯಕ ಅವರು ಗೆಲುವಾಗಿದ್ದು, 2023ರ ವಿಧಾನಸಭೆ ಚುನಾವಣೆಯಲ್ಲಿ ಶಾಸಕ ದಿ.ರಾಜಾ ವೆಂಕಟ್ಟಪ್ಪ ನಾಯಕ ಅವರು 25 ಸಾವಿರ ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದರು. ತಂದೆಯ ಅಕಾಲಿಕ ಮರಣದಿಂದ ಜನರಲ್ಲಿ ಅನುಕಂಪದ ಸೂಕ್ಷ್ಮ ಭಾವನೆ ಮತವಾಗಿ ಬದಲಾಗಿವೆ.
2024ರ ಲೋಕಸಭೆ ಚುನಾವಣೆಯ ಮತದಾನದ ಜೊತೆಗೆ ಮೇ.7ರಂದು ಸುರಪುರ ಉಪಚುನಾವಣೆಯ ಮತದಾನವು ಸಹ ನಡೆದಿತ್ತು. ಬಿಜೆಪಿಯಿಂದ ಮಾಜಿ ಸಚಿವ ರಾಜೂಗೌಡ ಅವರು ಕಣಕ್ಕೆ ಇಳಿದಿದ್ದರೆ, ತಂದೆ ಸಾವಿನ ನಂತರ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ರಾಜಾ ವೇಣುಗೋಪಾಲ ನಾಯಕ ಅವರು ಸ್ಪರ್ಧೆಗೆ ಇಳಿದಿದ್ದರು.
ಮಂಗಳವಾರ ನಗರದ ಬಾಲಕಿಯರ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಬೆಳಿಗ್ಗೆ 8 ಗಂಟೆಗೆ ಆರಂಭವಾದ ಮತ ಎಣಿಕೆ ಕಾರ್ಯವು, ಒಟ್ಟು 14 ಟೇಬಲ್‌ಗಳಲ್ಲಿ ಹಾಗೂ 23 ಸುತ್ತುಗಳಲ್ಲಿ ಮತ ಎಣಿಕೆ ಪ್ರಕ್ರಿಯೆ ನಡೆಯಿತು.
ಮೊದಲ ಸುತ್ತಿನಲ್ಲಿ ಬಿಜೆಪಿ ಅಭ್ಯರ್ಥಿ ರಾಜೂಗೌಡ 14 ಮತಗಳ ಮುನ್ನಡೆ ಸಾಧಿಸಿದ್ದು ಬಿಟ್ಟರೆ, ಉಳಿದ 22 ಸುತ್ತುಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಜಾ ವೇಣುಗೋಪಾಲ ನಾಯಕ ಅವರು ಮುನ್ನಡೆ ಕಾಯ್ದುಕೊಂಡಿದ್ದರು.