Advertisement

ರಾಧೆಯ ಜಪದಲ್ಲಿ ರಾಜ!

12:45 PM May 07, 2018 | Team Udayavani |

ವಿಜಯ್‌ ರಾಘವೇಂದ್ರ ಸದ್ದಿಲ್ಲದೆಯೇ ಒಂದಷ್ಟು ಸಿನಿಮಾಗಳನ್ನು ಮಾಡುತ್ತಿದ್ದಾರೆ. ಅವರ ಅಭಿನಯದ ಕೆಲವು ಸಿನಿಮಾಗಳು ಪೂರ್ಣಗೊಂಡು ಬಿಡುಗಡೆಗೂ ಸಜ್ಜಾಗಿವೆ. ಆ ಸಾಲಿನಲ್ಲಿ ಮೊದಲು ಕಾಣುವುದು “ರಾಜ ಲವ್ಸ್‌ ರಾಧೆ’. ಮೇ.18 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿರುವ ಈ ಚಿತ್ರದ ಬಗ್ಗೆ ವಿಜಯ ರಾಘವೇಂದ್ರ ಅವರಿಗೆ ಖುಷಿ ಇದೆ.

Advertisement

ಅದಕ್ಕೆ ಕಾರಣ, ಇದೇ ಮೊದಲ ಬಾರಿಗೆ ಅವರು ಈ ರೀತಿಯ ಶೀರ್ಷಿಕೆಯುಳ್ಳ ಚಿತ್ರದಲ್ಲಿ ನಟಿಸಿರುವುದು. ಅಷ್ಟೇ ಅಲ್ಲ, ಒಂದು ರೊಮ್ಯಾಂಟಿಕ್‌ ಲವ್‌ಸ್ಟೋರಿ ಇರುವ ಚಿತ್ರದಲ್ಲಿ ಭರಪೂರ ಮನರಂಜನೆ ಹೊಂದಿರುವುದು ಅವರಿಗೆ ಇನ್ನಿಲ್ಲದ ಖುಷಿ. ಆ ಕುರಿತು ಸ್ವತಃ ವಿಜಯ ರಾಘವೇಂದ್ರ, “ಉದಯವಾಣಿ’ಯ “ಚಿಟ್‌ಚಾಟ್‌’ನಲ್ಲಿ ಮಾತನಾಡಿದ್ದಾರೆ.

* ರಾಜನ ಲವ್‌ ಬಲು ಜೋರಂತೆ?
ಹಾಗೆ ಹೇಳುವುದಾದರೆ, “ರಾಜ ಲವ್ಸ್‌ ರಾಧೆ’ ಈ ರೀತಿಯ ಶೀರ್ಷಿಕೆಯಡಿ ಮೊದಲ ಸಲ ಕೆಲಸ ಮಾಡಿದ್ದೇನೆ. “ರಾಧೆ’ ಅಂದಾಕ್ಷಣ, ಎಲ್ಲರಿಗೂ “ಕೃಷ್ಣ’ನ ನೆನಪಾಗುತ್ತೆ. ಆದರೆ, ಇಲ್ಲಿ ರಾಧೆಯೊಂದಿಗೆ ರಾಜ ಇದ್ದಾನೆ. ಅದೇ ಸ್ಪೆಷಲ್ಲು. ರಾಜ ಮತ್ತು ರಾಧೆ ಹೇಗೆ ತಮ್ಮ ಲವ್‌ಸ್ಟೋರಿಯನ್ನು ಹೇಳುತ್ತಾರೆಂಬುದೇ ಚಿತ್ರದ ಹೈಲೆಟ್‌. ರಾಜ ಅಂದರೆ, ಅದೊಂದು ಗಾಂಭೀರ್ಯದಿಂದಿರುವ ಹೆಸರು. ಅದಕ್ಕೆ ತಕ್ಕಂತಹ ಪಾತ್ರವೂ ಇದೆ. ಇಲ್ಲಿ ರಾಜ, ರಾಧೆಯನ್ನ ಸಿಕ್ಕಾಪಟ್ಟೆ ಲವ್‌ ಮಾಡ್ತಾನೆ. ಅದು ಹೇಗೆ ಅನ್ನೋದನ್ನ ತೆರೆಯ ಮೇಲೆ ನೋಡಿ.

* ನಿಮ್ಮ ರಾಧೆ ಬಗ್ಗೆ ಹೇಳುವುದಾದರೆ?
ಸಾಮಾನ್ಯವಾಗಿ ನಾನು ಮಾಡಿರುವ ಕಮರ್ಷಿಯಲ್‌ ಚಿತ್ರಗಳಿಗೆ ಹೋಲಿಸಿದರೆ, ಇಲ್ಲಿ ಹೆಚ್ಚು ಮಸಾಲ ಇದೆ. ಪಕ್ಕಾ ಕಮರ್ಷಿಯಲ್‌ ಚಿತ್ರ ಅನ್ನೋಕೆ ಯಾವುದೇ ಅಡ್ಡಿ ಇಲ್ಲ. ತಾಯಿ ಸೆಂಟಿಮೆಂಟ್‌ ಇದೆ. ಭರ್ಜರಿ ಆ್ಯಕ್ಷನ್‌ ಇದೆ. ಎಲ್ಲಕ್ಕಿಂತಲೂ ಹೆಚ್ಚಾಗಿ ಕಾಮಿಡಿ ಪ್ಯಾಕೇಜ್‌ ಇದೆ. ಎಲ್ಲಾ ವರ್ಗಕ್ಕೂ ಇಷ್ಟವಾಗುವ ಹಾಡುಗಳನ್ನು ಸಂಗೀತ ನಿರ್ದೇಶಕ ವೀರ್‌ಸಮರ್ಥ್ ಕಟ್ಟಿಕೊಟ್ಟಿದ್ದಾರೆ. ರಾಜನ ರಾಧೆ ಒಂದರ್ಥದಲ್ಲಿ ಎಲ್ಲರಿಗೂ ಇಷ್ಟವಾಗುತ್ತಾಳೆ. ಆರಂಭದಿಂದ ಅಂತ್ಯದವರೆಗೂ ಮನರಂಜನೆಯಲ್ಲೇ ಚಿತ್ರ ಸಾಗುತ್ತೆ. ಬಹಳ ದಿನಗಳ ಬಳಿಕ ಫ‌ುಲ್‌ ಮನರಂಜನೆ ಚಿತ್ರ ಮಾಡಿದ್ದೇನೆ.

* ಕಥೆ ಬಗ್ಗೆ ಹೇಳಬಹುದಾ?
ಇಲ್ಲೇ ಎಲ್ಲವನ್ನೂ ಹೇಳುವುದಕ್ಕಾಗಲ್ಲ. ನಾಯಕ ಒಬ್ಬ ಪ್ರಾಮಾಣಿಕ ಪ್ರೇಮಿ. ತನ್ನ ಪ್ರೀತಿಗಾಗಿ ಏನೆಲ್ಲಾ ತ್ಯಾಗ ಮಾಡ್ತಾನೆ ಅನ್ನೋದೇ ಕಥೆ. ಇಲ್ಲಿ ಹಾಸ್ಯವೇ ಪ್ರಧಾನ. ಅದರ ಮೂಲಕ ಒಂದು ನವಿರಾದ ಪ್ರೇಮಕಥೆ ಹೇಳಲಾಗಿದೆ.

Advertisement

* ನಿಮ್ಮ ಪ್ರಕಾರ ಈ ರಾಜ ಪಕ್ಕಾ ಕಮರ್ಷಿಯಲ್‌ ಅನ್ನಿ?
ಹೌದು, ನಿರ್ದೇಶಕರು ಮೊದಲ ಸಲ ಕಥೆ ಹೇಳಿದಾಗ, ಪಕ್ಕಾ ತಯಾರಿಯೊಂದಿಗೆ ಬಂದಿದ್ದರು. ಕೆಲವರು ಸಿಂಪಲ್‌ ಕಥೆ ಹೇಳಿ, ನಿಧಾನವಾಗಿ ಚಿತ್ರದಲ್ಲಿ ಕಮರ್ಷಿಯಲ್‌ ಅಂಶ ಸೇರಿಸುತ್ತಾರೆ. ಆದರೆ, “ರಾಜ ಲವ್ಸ್‌ ರಾಧೆ’ ಚಿತ್ರದಲ್ಲಿ ನಿರ್ದೇಶಕರು ಕಥೆಯಲ್ಲೇ ಕಮರ್ಷಿಯಲ್‌ ಅಂಶ ಇಟ್ಟುಕೊಂಡು ಸಿನಿಮಾ ಮಾಡಿದ್ದಾರೆ. ಇಲ್ಲಿ ಕಮರ್ಷಿಯಲ್‌ ಕಥೆ ಹೊರತಾಗಿ ಬೇರೇನೂ ಇಲ್ಲ.

* ಇನ್ನೇನು ವಿಶೇಷತೆ ಇದೆ?
ಮೊದಲ ಸಲ ರವಿಶಂಕರ್‌ ಜೊತೆ ನಟಿಸಿದ್ದೇನೆ ಅದು ವಿಶೇಷ. ಬಿಟ್ಟರೆ, ಕಾಮಿಡಿ ಕಲಾವಿದರ ದಂಡೇ ಇಲ್ಲಿದೆ. ಅದು ಇನ್ನೊಂದು ವಿಶೇಷ. ತಬಲಾ ನಾಣಿ, ಮಿತ್ರ, ಕುರಿ ಪ್ರತಾಪ್‌, ಪವನ್‌ ಕುಮಾರ್‌, ಶೋಭರಾಜ್‌, ಪೆಟ್ರೋಲ್‌ ಪ್ರಸನ್ನ, ಡ್ಯಾನಿ ಕುಟ್ಟಪ್ಪ, ಮೋಹನ್‌ ಜುನೇಜಾ, ಮೂಗು ಸುರೇಶ್‌, ಕುರಿ ಸುನೀಲ್‌ ಎಲ್ಲಕ್ಕಿಂತ ಹೆಚ್ಚಾಗಿ, ರಾಕೇಶ್‌ ಅಡಿಗ ವಿಶೇಷ ಪಾತ್ರದಲ್ಲಿ ಕಾಣಸಿಗುತ್ತಾರೆ. ಶುಭ ಪೂಂಜಾ ಅವರದೂ ಇಲ್ಲೊಂದು ವಿಶೇಷ ಪಾತ್ರವಿದೆ. ಭವ್ಯ ಅವರಿಲ್ಲಿ ತಾಯಿ ಪಾತ್ರ ನಿರ್ವಹಿಸಿದ್ದಾರೆ ಅದೂ ಚಿತ್ರದ ಇನ್ನೊಂದು ವಿಶೇಷ. ಪೂರ್ಣ ಸಿನಿಮಾವೇ ಒಂದು ಸ್ಪೆಷಲ್‌ ಪ್ಯಾಕೇಜ್‌ ಅಂದರೆ ತಪ್ಪಿಲ್ಲ.

* ರವಿಶಂಕರ್‌ ಜೊತೆಗೆ ಮೊದಲ ನಟನೆ ಅನುಭವ ಹೇಗಿತ್ತು?
ಸಾಮಾನ್ಯವಾಗಿ ರವಿಶಂಕರ್‌ ಅಂದರೆ, ಎಲ್ಲರಿಗೂ ನೆಗೆಟಿವ್‌ ರೋಲ್‌ ಅನಿಸುತ್ತೆ. ಇಲ್ಲಿ ಕಂಪ್ಲೀಟ್‌ ಹೊಸ ಬಗೆಯ ಪಾತ್ರ ಮಾಡಿದ್ದಾರೆ. ಸಿನಿಮಾ ನೋಡಿ ಹೊರಬಂದವರಿಗೆ, ರವಿಶಂಕರ್‌ ತ್ಯಾಗಮಯಿಯಾಗಿ, ಪ್ರೋತ್ಸಾಹಿಸುವ ವ್ಯಕ್ತಿಯಾಗಿ ಕಾಣುತ್ತಾರೆ. ಪ್ರೇಮಿಗಳನ್ನು ಒಂದು ಮಾಡಲು ಏನೆಲ್ಲಾ ಮಾಡಬೇಕೋ ಅದೆಲ್ಲವನ್ನೂ ಮಾಡುವ ಮೂಲಕ ಪ್ರೀತ್ಸೋ ಮಂದಿಗೆ ಇಷ್ಟವಾಗುತ್ತಾರೆ.

* ಪ್ರೊಡಕ್ಷನ್‌ ಬಗ್ಗೆ ಹೇಳುವುದಾದರೆ?
ಇಲ್ಲಿ ಎಲ್ಲರೂ ಒಂದೇ ಫ್ಯಾಮಿಲಿಯಂತೆ ಕೆಲಸ ಮಾಡಿದ್ದಾರೆ. ಅಂತಹ ಪೂರಕ ವಾತಾವರಣಕ್ಕೆ ಕಾರಣವಾಗಿದ್ದು, ನಿರ್ಮಾಪಕ ಎಚ್‌ಎಲ್‌ಎನ್‌ ರಾಜ್‌. ಸಿನಿಮಾಗೆ ಎಲ್ಲವನ್ನೂ ಒದಗಿಸಿದ್ದರಿಂದ ಚಿತ್ರ ಮನರಂಜನೆಯಿಂದ ಕೂಡಿದೆ. ಚಿತ್ರಕ್ಕೆ ಎಲ್ಲೂ ಕಡಿಮೆ ಮಾಡಿಲ್ಲ. ಇರುವ ಫೈಟ್‌ ಕೂಡ ಭರ್ಜರಿಯಾಗಿವೆ. ಕ್ಲೈಮ್ಯಾಕ್ಸ್‌ ಫೈಟ್‌ಗೆ ಕಾಮಿಡಿ ಟಚ್‌ ಕೊಡಲಾಗಿದೆ. ಹಾಡುಗಳನ್ನೂ ಅಷ್ಟೇ ರಿಚ್‌ ಆಗಿ ತೋರಿಸಲಾಗಿದೆ. ಸಿನಿಮಾ ಶುರುವಾಗಿದ್ದು, ಮುಗಿದಿದ್ದು ಗೊತ್ತೇ ಆಗಲಿಲ್ಲ. ಅಷ್ಟು ನೀಟ್‌ ಆಗಿ ಕೆಲಸ ನಡೆದಿದೆ.

* ನಿಮ್ಮ ನಿರ್ದೇಶನದ “ಕಿಸ್ಮತ್‌’ ಯಾವಾಗ?
ಅದೀಗ ರಿಲೀಸ್‌ಗೆ ರೆಡಿಯಾಗಿದೆ. ‘ರಾಜ ಲವ್ಸ್‌ ರಾಧೆ’ ಬಿಡುಗಡೆ ಬಳಿಕ ತೆರೆಗೆ ತರುತ್ತೇನೆ. ಉಳಿದಂತೆ “ಧರ್ಮಸ್ಯ’ ಚಿತ್ರ ರಿಲೀಸ್‌ಗೆ ತಯಾರಾಗಿದೆ. “ಪರದೇಸಿ ಕೇರ್‌ ಆಫ್ ಲಂಡನ್‌’ ಕೂಡ ಮುಗಿದಿದ್ದು, ಹಾಡುಗಳು ಬಾಕಿ ಇದೆ. ಈ ಮಧ್ಯೆ ವಾಹಿನಿಯೊಂದರ ಜೊತೆ ರಿಯಾಲಿಟಿ ಶೋ ನಡೆಸಿಕೊಡುವ ಕುರಿತು ಮಾತುಕತೆ ನಡೆಯುತ್ತಿದೆ. ಇನ್ನಷ್ಟು ಕಥೆಗಳನ್ನು ಕೇಳುತ್ತಿದ್ದೇನಷ್ಟೇ.

Advertisement

Udayavani is now on Telegram. Click here to join our channel and stay updated with the latest news.

Next