Advertisement

ರಾಜಾ ಬಾಗ ಸವಾರ್‌ ದರ್ಗಾ ಉರುಸ್‌

12:10 PM Jul 10, 2018 | |

ಬಸವಕಲ್ಯಾಣ: ನಗರದ ಸುಪ್ರಸಿದ್ಧ ರಾಜಾ ಬಾಗ ಸವಾರ್‌ ದರ್ಗಾದಲ್ಲಿ ಹಜರತ್‌ ಶೇರ್‌ ಎ ಸವಾರ್‌ ರಾಜಾ ಬಾಗ ಸವಾರ್‌ (ರಹ) ಅವರ 640ನೇ ಉರುಸ್‌ ನಿಮಿತ್ತ ರವಿವಾರ ರಾತ್ರಿ ನಾಗಪುರದ ಅಬ್ದುಲ್‌ ಹಬೀಬ್‌ ಆಜಮೀರಿ ಹಾಗೂ ತಂಡದಿಂದ ಕವ್ವಾಲಿ ಕಾರ್ಯಕ್ರಮ ಜರುಗಿತು.

Advertisement

ತಡ ರಾತ್ರಿ 11ರ ಸುಮಾರು ಆರಂಭವಾಗಿ ಬೆಳಗಿನ ಜಾವದ ವರೆಗೆ ನಡೆದ ಕಾರ್ಯಕ್ರಮದಲ್ಲಿ ನಗರ ಸೇರಿದಂತೆ, ರಾಜ್ಯ, ಹೊರ ರಾಜ್ಯಗಳಿಂದ ಆಗಮಿಸಿದ ಸಾವಿರಾರು ಜನರು ಪಾಲ್ಗೊಂಡಿದ್ದರು.

ದರ್ಗಾದ ಸಜ್ಜಾದ ನಶೀನ್‌ ವ ಮುತವಲ್ಲಿ ಹಜರತ್‌ ಖಾಜಾ ಜಿಯಾ ಉಲ್‌ ಹಸನ್‌ ಜಾಗೀರದಾರ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕ ಬಿ.ನಾರಾಯಣರಾವ್‌, ನಗರಸಭೆ ಅಧ್ಯಕ್ಷ ಮೀರ ಅಜರಲಿ ನವರಂಗ, ಖಾಜಾ ಮೈನೋದ್ದಿನ್‌ಸಾಬ ಇಂಜಿನಿಯರ್‌, ಸೈಯದ್‌ ಜಾವೀದ ನಿಜಾಮಿ, ತಾಜೋದ್ದಿನ್‌ ಸಾಬ್‌ ನಿಜಾಮಿ, ಮುದಸ್ಸಿರ ನಿಜಾಮಿ, ಸೈಯದ ಅಕ್ಸರ್‌ ನಿಜಾಮಿ, ಡಾ|ಖದೀರೋದ್ದಿನ್‌
ಹಾಗೂ ಇನ್ನಿತರರು ಭಾಗವಹಿಸಿದ್ದರು.

ಶುಕ್ರವಾರ ರಾತ್ರಿ ಸಂದಲ್‌ (ಗಂಧದ) ಮೆರವಣಿಗೆ ನಡೆದರೆ, ಶನಿವಾರ ಕೋಟೆಯಿಂದ ಮುಖ್ಯ ರಸ್ತೆಯ ಮಾರ್ಗವಾಗಿ ದರ್ಗಾದ ವರೆಗೆ ಝೇಲಾ ಮೆರವಣಿಗೆ ಅದ್ಧೂರಿಯಾಗಿ ಜರುಗಿತು. ಮಧ್ಯ ರಾತ್ರಿಯಿಂದ ಬೆಳಗಿನ ವರೆಗೆ ನಡೆದ ಮೆರವಣಿಗೆಯಲ್ಲಿ ಯುವಕರಿಂದ ನಡೆದ ನೃತ್ಯ ಗಮನ ಸೆಳೆಯಿತು.

ಮೆರವಣಿಗೆಗ ಚಾಲನೆ: ಕೋಟೆಯ ಬಳಿ ಮೆರವಣಿಗೆಗೆ ಚಾಲನೆ ನೀಡಿದ ಶಾಸಕ ಬಿ.ನಾರಾಯಣರಾವ್‌ ಮಾತನಾಡಿ, ಪರಸ್ಪರ ವಿಶ್ವಾಸ, ಶಾಂತಿ-ಸೌಹಾರ್ದತೆ ನೆಲೆಸಬೇಕು ಎನ್ನುವುದೇ ತಮ್ಮ ಆಶಯವಾಗಿದೆ ಎಂದರು. 

Advertisement

ನಗರದ ರಸ್ತೆಗಳು ಹದಗೆಟ್ಟಿವೆ. ನಡೆಯಲು ಬಾರದ ಸ್ಥಿತಿ ಹಲವೆಡೆ ನಿರ್ಮಾಣವಾಗಿದೆ. ಇದೆಲ್ಲವೂ ತಮ್ಮ ಗಮನದಲ್ಲಿದೆ. ರಸ್ತೆ ನಿರ್ಮಾಣ, ಶುದ್ಧವಾದ ಕುಡಿಯುವ ನೀರು ಸೇರಿದಂತೆ ಎಲ್ಲ ಕೆಲಸಗಳನ್ನು ಒಂದು ವರ್ಷದ ಅವಧಿಯಲ್ಲಿ ಪೂರ್ಣಗೊಳಿಸಲು ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿದರು. 

ನಗರದ ಕೋಟೆ ಪ್ರದೇಶದಲ್ಲಿ ಹೆರಿಗೆ ಆಸ್ಪತ್ರೆ ನಿರ್ಮಾಣ ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಝೇಲಾ ಕಮೀಟಿಯಿಂದ ಸಲ್ಲಿಸಿದ ಮನವಿಗೆ ಸ್ಪಂದಿಸಿದ ಶಾಸಕರು, ಆಸ್ಪತ್ರೆ ನಿರ್ಮಾಣಕ್ಕಾಗಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು, ಝೇಲಾ ಕಮೀಟಿ ಕಚೇರಿ ನಿರ್ಮಾಣಕ್ಕೆ ಅಗತ್ಯ ಅನುದಾನ
ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು. ಝೇಲಾ ಕಮೀಟಿ ಅಧ್ಯಕ್ಷ ಆಶೀಫ್‌ ಹಾಜಿ ಸೇರಿದಂತೆ ಪ್ರಮುಖರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next