ಪುಣೆ: ಎನ್ ಸಿಪಿ ವರಿಷ್ಠ ಶರದ್ ಪವಾರ್ ಅವರ ಕೃಪಾಕಟಾಕ್ಷದಿಂದಲೇ ಮಹಾರಾಷ್ಟ್ರದ ರಾಜಕೀಯ ಬೆಳವಣಿಗೆ ನಡೆದಿರುವುದಾಗಿ ಮಹಾರಾಷ್ಟ್ರ ನವನಿರ್ಮಾಣ್ ಸೇನಾ(MNS) ಮುಖ್ಯಸ್ಥ ರಾಜ್ ಠಾಕ್ರೆ ಆರೋಪಿಸಿದ್ದಾರೆ.
ಇದನ್ನೂ ಓದಿ:Missing Case: ಮುಸ್ಲಿಂ ಶಿಕ್ಷಕಿಯೊಂದಿಗೆ ಓಡಿಹೋದ ಅಪ್ರಾಪ್ತೆ; ಮತಾಂತರ ಆರೋಪ
ಭಾನುವಾರ ಶರದ್ ಪವಾರ್ ನೇತೃತ್ವದ ಎನ್ ಸಿಪಿಯ ಮುಖಂಡ ಅಜಿತ್ ಪವಾರ್ ಮತ್ತು ಇತರ 8 ಮಂದಿ ಶಾಸಕರು ಶಿಂಧೆ ನಾಯಕತ್ವದ ಶಿವಸೇನಾ-ಬಿಜೆಪಿ ಸರ್ಕಾರದ ಜೊತೆ ಕೈಜೋಡಿಸಿರುವ ಘಟನೆ ಕುರಿತು ಠಾಕ್ರೆ ಸುದ್ದಿಗಾರರ ಜತೆ ಮಾತನಾಡಿದರು.
ರಾಜ್ಯದಲ್ಲಿ ನಡೆದಿರುವುದು ಅಸಹ್ಯಕರ ಬೆಳವಣಿಗೆ. ಇದು ರಾಜ್ಯದ ಮತದಾರರಿಗೆ ಮಾಡಿದ ಘೋರ ಅಪಮಾನವಾಗಿದೆ ಎಂದು ರಾಜ್ ಠಾಕ್ರೆ ವಾಗ್ದಾಳಿ ನಡೆಸಿದರು.
ಮಹಾರಾಷ್ಟ್ರ ರಾಜಕೀಯದಲ್ಲಿ ಈ ಎಲ್ಲಾ ಅಸಹ್ಯ ಬೆಳವಣಿಗೆಯನ್ನು ಮೊದಲು ಆರಂಭಿಸಿದವರು ಶರದ್ ಪವಾರ್. 1978ರಲ್ಲಿ ಕಾಂಗ್ರೆಸ್ ನ 38 ಶಾಸಕರೊಂದಿಗೆ ಪಕ್ಷ ಬಿಟ್ಟು ಜನತಾ ಪಕ್ಷದ ಜೊತೆ ಕೈಜೋಡಿಸಿ ಮುಖ್ಯಮಂತ್ರಿಗಾದಿಗೆ ಏರಿದ್ದರು. ಮಹಾರಾಷ್ಟ್ರ ರಾಜಕೀಯ ಇಂತಹ ಸ್ಥಿತಿಯನ್ನು ಯಾವತ್ತೂ ಕಂಡಿರಲಿಲ್ಲವಾಗಿತ್ತು. ಈ ಎಲ್ಲಾ ಅಸಹ್ಯ ಪ್ರಾರಂಭಿಸಿದವರು ಪವಾರ್, ಅದನ್ನು ಕೊನೆಗೊಳಿಸಿದವರು ಕೂಡಾ ಪವಾರ್ ಎಂದು ಠಾಕ್ರೆ ವ್ಯಂಗ್ಯವಾಡಿದ್ದಾರೆ.
ಮಹಾರಾಷ್ಟ್ರದಲ್ಲಿನ ಇತ್ತೀಚೆಗಿನ ರಾಜಕೀಯ ಬೆಳವಣಿಗೆ ಹಿಂದಿರುವುದು ಶರದ್ ಪವಾರ್ ಎಂದು ರಾಜ್ ಠಾಕ್ರೆ ದೂರಿದ್ದಾರೆ. ಪ್ರಫುಲ್ ಪಟೇಲ್, ದಿಲೀಪ್ ವಾಲ್ಸೆ ಮತ್ತು ಛಗನ್ ಭುಜ್ ಬಲ್ ಅವರು ಅಜಿತ್ ಪವಾರ್ ಜೊತೆ ಹೋಗಲು ಶರದ್ ಪವಾರ್ ಅವರ ಆಶೀರ್ವಾದವಿಲ್ಲದೇ ಸಾಧ್ಯವಿಲ್ಲ ಎಂದು ಠಾಕ್ರೆ ಪ್ರತಿಪಾದಿಸಿದ್ದಾರೆ.