ಮುಂಬೈ : ನೀಲಿ ಸಿನಿಮಾ ನಿರ್ಮಾಣ ಪ್ರಕರಣದಡಿ ಬಂಧಿತರಾಗಿರುವ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರ ಪತಿ ರಾಜ್ ಕುಂದ್ರಾ ಅವರ ಜಾಮೀನು ಅರ್ಜಿಯನ್ನು ಬಾಂಬೆ ಹೈಕೋರ್ಟ್ ತಿರಸ್ಕರಿಸಿದೆ.
ಇಂದು (ಆ.07) ಬಾಂಬೆ ಹೈಕೋರ್ಟ್ ರಾಜ್ ಕುಂದ್ರ ಮತ್ತು ಸಹಚರ ರಿಯಾನ್ ಥೋರ್ಪೆ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ.
ಜುಲೈ 19 ರಂದು ಬಂಧಿತರಾಗಿರುವ ರಾಜ್ ಕುಂದ್ರ ಮತ್ತು ರಿಯಾನ್ ಥೋರ್ಪೆ ಜಾಮೀನು ಕೋರಿ ಬಾಂಬೆ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಇಂದು ವಿಚಾರಣೆ ನಡೆಸಿದ ಕೋರ್ಟ್ ಜಾಮೀನನ್ನು ನಿರಾಕರಿಸಿದೆ.
ಸದ್ಯ ರಾಜ್ ಕುಂದ್ರ ನ್ಯಾಯಾಂಗ ಬಂಧನದಲ್ಲಿದ್ದಾರೆ. ಬಂಧನದ ಬಳಿಕ ಕುಂದ್ರ ಹೈಕೋರ್ಟ್ ಮೊರೆಹೋಗಿದ್ದರು. ರಾಜ್ ಕುಂದ್ರ ಪರ ವಕೀಲರು ಬಂಧನ ಕಾನೂನು ಬಾಹಿರ ಎಂದು ಪರಿಗಣಿಸಿ ತಮ್ಮ ಅರ್ಜಿಯನ್ನು ಪ್ರಶ್ನಿಸಿದ್ದರು.
ರಾಜ್ ಕುಂದ್ರ ಮತ್ತು ಸಹಚರ ರಿಯಾನ್ ಥೋರ್ಪೆ ಜಾಮೀನು ಅರ್ಜಿ ವಿಚಾರಣೆ ಆಗಸ್ಟ್ 10ರಂದು ಮುಂಬೈ ಸೆಷನ್ಸ್ ನ್ಯಾಯಾಲಯದಲ್ಲಿ ನಡೆಯಲಿದೆ. ಆಗಸ್ಟ್ 10ಕ್ಕಾದರೂ ಕುಂದ್ರ ಜೈಲಿನಿಂದ ಹೊರಬರುತ್ತಾರಾ ಎನ್ನುವ ಕುತೂಹಲ ಮೂಡಿಸಿದೆ.
ನೀಲಿ ಸಿನಿಮಾ ನಿರ್ಮಾಣ ಹಾಗೂ ಮೊಬೈಲ್ ಆ್ಯಪ್ ಗಳ ಮೂಲಕ ಅವುಗಳ ವಿತರಣೆ ಮಾಡಿರುವ ಆರೋಪ ರಾಜ್ ಕುಂದ್ರಾ ಅವರ ಮೇಲಿದೆ. ಈ ಬಗ್ಗೆ ಮುಂಬೈನ ಕ್ರೈಮ್ ಬ್ರ್ಯಾಂಚ್ ಪೊಲೀಸ್ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಇದೆ ಪ್ರಕರಣದಡಿ ರಾಜ್ ಕುಂದ್ರಾ ಪತ್ನಿ ಶಿಲ್ಪಾ ಶೆಟ್ಟಿಯವರನ್ನೂ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.