ನವದೆಹಲಿ: ಅಶ್ಲೀಲ ಚಿತ್ರಗಳ ಹಗರಣಕ್ಕೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ಉದ್ಯಮಿ ರಾಜ್ ಕುಂದ್ರಾ , ನಟರಾದ ಶೆರ್ಲಿನ್ ಚೋಪ್ರಾ, ಪೂನಂ ಪಾಂಡೆ ಸೇರಿದಂತೆ ಇತರರಿಗೆ ಸುಪ್ರೀಂ ಕೋರ್ಟ್ ಮಂಗಳವಾರ (ಡಿ. 13) ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ಅಶ್ಲೀಲ ವೀಡಿಯೋಗಳನ್ನು ವಿತರಿಸಿದ ಆರೋಪದಲ್ಲಿ ಉದ್ಯಮಿ ರಾಜ್ ಕುಂದ್ರಾ ವಿರುದ್ಧ ಎಫ್ ಐ ಆರ್ ದಾಖಲಾಗಿತ್ತು.
ತನಿಖೆಯಲ್ಲಿ ಎಲ್ಲ ರೀತಿಯಲ್ಲೂ ಸಹಕರಿಸುವಂತೆ ಆರೋಪಿಗಳಿಗೆ ನ್ಯಾ. ಕೆ.ಎಂ. ಜೋಸೆಫ್ ಮತ್ತು ನ್ಯಾ.ಬಿ.ವಿ.ನಾಗರತ್ನ ಅವರನ್ನೊಳಗೊಂಡ ನ್ಯಾಯಪೀಠ ಸೂಚಿಸಿದೆ.
ಕುಂದ್ರಾ ಪರ ವಕೀಲರು ಈಗಾಗಲೇ ಅರ್ಜಿದಾರರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ. ತನಿಖೆಗೆ ಅವರು ಸಹಕರಿಸುತ್ತಿದ್ದಾರೆ. ಹಾಗಾಗಿ ನಿರೀಕ್ಷಣಾ ಜಾಮೀನು ಮಂಜೂರು ಮಾಡಬೇಕು ಎಂದು ಕುಂದ್ರಾ ಪರ ವಕೀಲರು ಮನವಿ ಮಾಡಿದ್ದರು. ಅವರ ಮನವಿಯನ್ನು ಕೋರ್ಟ್ ಪುರಸ್ಕರಿಸಿದೆ.
ಇದನ್ನೂ ಓದಿ:ಬಿಲ್ಕಿಸ್ ಬಾನೋ ಪ್ರಕರಣ: ಅರ್ಜಿ ವಿಚಾರಣೆಯಿಂದ ಹಿಂದೆ ಸರಿದ ನ್ಯಾಯಮೂರ್ತಿ ಬೇಲಾ ತ್ರಿವೇದಿ
ಈ ಹಿಂದೆ ಇದೇ ಪ್ರಕರಣದಲ್ಲಿ ರಾಜ್ ಕುಂದ್ರಾರನ್ನು ಬಂಧಿಸದಂತೆ ಸುಪ್ರೀಂ ಕೋರ್ಟ್ ಮಧ್ಯಂತರ ರಕ್ಷಣೆ ನೀಡಿತ್ತು.
ಕುಂದ್ರಾ ವಿರುದ್ಧ ಭಾರತೀಯ ದಂಡ ಸಂಹಿತೆ, ಮಹಿಳೆಯರ ಅಸಭ್ಯ ಪ್ರಾತಿನಿಧ್ಯ (ನಿಷೇಧ) ಕಾಯ್ದೆ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಎಫ್‌ಐಆರ್‌ನಲ್ಲಿ ಶೆರ್ಲಿನ್ ಚೋಪ್ರಾ ಮತ್ತು ಪೂನಂ ಪಾಂಡೆ ಅವರ ಹೆಸರು ಉಲ್ಲೇಖಿಸಲಾಗಿದೆ.