ಮುಂಬೈ: ಅಶ್ಲೀಲ ಚಿತ್ರಗಳ ನಿರ್ಮಾಣ ಆರೋಪದಡಿ ಬಂಧನಕ್ಕೆ ಒಳಗಾಗಿರುವ ಉಧ್ಯಮಿ ರಾಜ್ ಕುಂದ್ರಾ ಕುರಿತು ಮತ್ತೊಂದು ಸ್ಫೋಟಕ ಮಾಹಿತಿ ಹೊರ ಬಿದ್ದಿದೆ.
ಬಂಧನದಿಂದ ತಪ್ಪಿಸಿಕೊಳ್ಳುವ ಉದ್ದೇಶದಿಂದ ಮುಂಬೈನ ಕ್ರೈಂ ಬ್ರ್ಯಾಂಚ್ ಪೊಲೀಸರಿಗೆ 25 ಲಕ್ಷ ರೂ. ಲಂಚ ನೀಡಿದ್ದರು ಎನ್ನುವ ಮಾಹಿತಿ ಇದೀಗ ಬಹಿರಂಗವಾಗಿದೆ. ಈ ಪ್ರಕರಣದ ಆರೋಪಿಗಳಲ್ಲಿa ಒಬ್ಬರಾದ ಅರವಿಂದ ಶ್ರೀವಾಸ್ತವ ಅಲಿಯಾಸ್ ರಾಶ್ ಠಾಕೂರ್ ಅಮೆರಿಕ ಮೂಲದ ಕಂಪನಿ ಹಾಗೂ ಪೊಲೀಸ್ ನಡುವೆ ಹಣ ವರ್ಗಾವಣೆ ಆಗಿರುವ ಕುರಿತು ಮಾರ್ಚ್ ನಲ್ಲಿ ಭ್ರಷ್ಟಾಚಾರ ನಿಗ್ರಹ ದಳಕ್ಕೆ ಇಮೇಲ್ ಮೂಲಕ ದೂರು ನೀಡಿದ್ದರು. ಈ ಮೇಲ್ ನಲ್ಲಿ ಲಂಚದ ಕುರಿತಾದ ವಾಟ್ಸಾಪ್ ನ ಸ್ಕ್ರೀನ್ ಶಾಟ್ ಗಳಿದ್ದವು ಎಂದು ವರದಿಗಳು ತಿಳಿಸಿವೆ.
ಶ್ರೀವಾಸ್ತವ್ ಅಮೆರಿಕ ಮೂಲದ ಕಂಪನಿಯ ಹೊಂದಿದ್ದು, ಕಳೆದ ಮಾರ್ಚ್ ನಲ್ಲಿ ಸ್ಕ್ಯಾಂಡಲ್ ಹೊರ ಬಿದ್ದ ಮೇಲೆ ಪೊಲೀಸ್ ಇಲಾಖೆ ಈತನ ಹೆಸರಿನಲ್ಲಿ ಎರಡು ಬ್ಯಾಂಕ್ ಅಕೌಂಟ್ ಗಳಲ್ಲಿ ಸರಿಸುಮಾರು 4.50 ಕೋಟಿ ರೂ. ಹಣವನ್ನು ಜಪ್ತು ಮಾಡಿತ್ತು.
ಲಂಚದ ಆರೋಪದ ಬಗ್ಗೆ ಪ್ರತಿಕ್ರಿಯಿಸಿರುವ ಮುಂಬೈ ಪೊಲೀಸ್ ಅಧಿಕೃತ ವಕ್ತಾರ ಡಿಸಿಪಿ ಚೈತನ್ಯ ಎಸ್ ಅವರು ಈ ಬಗ್ಗೆ ನನಗೆ ತಿಳಿದಿಲ್ಲ ಎಂದಿದ್ದಾರೆ.
ಇನ್ನು ಅಶ್ಲೀಲ ಚಿತ್ರಗಳನ್ನು ರಚಿಸಿ ಕೆಲವು ಆ್ಯಪ್‌ಗಳ ಮೂಲಕ ಪ್ರಕಟಿಸಿದ ಆರೋಪದ ಮೇಲೆ ಕುಂದ್ರಾ ಅವರನ್ನು ಜುಲೈ 19 ರಂದು ಮುಂಬೈ ಅಪರಾಧ ಶಾಖೆ ಬಂಧಿಸಿತ್ತು.