ಕನ್ನಡ ಚಿತ್ರರಂಗದ ಮಟ್ಟಿಗೆ ವರನಟ ಡಾ. ರಾಜಕುಮಾರ್ ಮಾಡದ ಪಾತ್ರಗಳಿಲ್ಲ ಅಂದ್ರೆ, ಅದು ಖಂಡಿತ ಅತಿಶಯೋಕ್ತಿ ಅಲ್ಲ. ಅದಕ್ಕೆ ಕಾರಣ ರಾಜಕುಮಾರ್, ಪೌರಾಣಿಕ ಪಾತ್ರಗಳಿಂದ ಹಿಡಿದು ಬಾಂಡ್ ಶೈಲಿಯ ಆ್ಯಕ್ಷನ್ ಪಾತ್ರಗಳವರೆಗೆ ಎಲ್ಲ ಪಾತ್ರಗಳನ್ನೂ ಲೀಲಾಜಾಲವಾಗಿ ನಿರ್ವಹಿಸಿರುವುದು. ಆದರೆ, ಅಣ್ಣಾವ್ರ ಸಿನಿಜರ್ನಿಯನ್ನು ಸೂಕ್ಷ್ಮವಾಗಿ ಗಮನಿಸಿದರೆ, ಅವರಿಂದ ಸಿನಿಮಾ ಮಾಡಿಸಬೇಕು ಎಂದು ಪ್ರಯತ್ನಿಸಿ ಕೈಬಿಟ್ಟಿರುವ ಅನೇಕ ಪ್ರಾಜೆಕ್ಟ್ಗಳು ಅಲ್ಲಲ್ಲಿ ಸಾಕಷ್ಟು ಕಾಣಸಿಗುತ್ತವೆ. ಅಂಥ ಸಿನಿಮಾಗಳಲ್ಲಿ ಕುಮಾರ ರಾಮನ ಕಥೆ ಕೂಡ ಒಂದು.
ಹೌದು, ವಿಜಯನಗರ ಸಾಮ್ರಾಜ್ಯದ ನಂಟು ಹೊಂದಿದ್ದ, ಕಂಪ್ಲಿ ರಾಜ್ಯದ ರಾಜಕುಮಾರನಾದ ಕುಮಾರರಾಮನ ಕಥೆಯನ್ನು ಅಣ್ಣಾವ್ರ ಸಿನಿಮಾ ಮಾಡಬೇಕು ಎಂದು ನಿರ್ಧರಿಸಿ, ಈ ಸಿನಿಮಾಕ್ಕೆ ಬೇಕಾದ ಎಲ್ಲ ತಯಾರಿಯನ್ನೂ ಶುರು ಮಾಡಲಾಗಿತ್ತು. ಸ್ಕ್ರಿಪ್ಟ್ ಕೂಡ ರೆಡಿಯಾಗಿ, ಪೂಜೆಯೂ ಆಗಿತ್ತು. ಆದರೆ, ಆಮೇಲೆ ಕೆಲವು ಕಾರಣಗಳಿಂದ ಈ ಸಿನಿಮಾ ಮಾಡೋದು ಬೇಡ ಎಂದು ನಿಲ್ಲಿಸಲಾಯಿತು.
ಅದಕ್ಕೆ ಕಾರಣ ಈ ಚಿತ್ರದ ಕಥೆಯ ಎಳೆಯಲ್ಲಿ ಬರುವ ಸೂಕ್ಷ್ಮ ವಿಚಾರ. ಕುಮಾರರಾಮ ಮತ್ತು ರತ್ನಾಜಿ ಪ್ರೀತಿಸುತ್ತಾರೆ. ಆದರೆ, ಕುಮಾರರಾಮನ ತಂದೆ ರತ್ನಾಜಿಯನ್ನು ಮದುವೆ ಆಗಿಬಿಡುತ್ತಾರೆ. ಈ ಮದುವೆ ಬಳಿಕ ವರಸೆಯಲ್ಲಿ ಕುಮಾರರಾಮ ರತ್ನಾಜಿಗೆ ಮಗ ಆಗುತ್ತಾನೆ. ಪರನಾರಿ ಸಹೋದರನೆಂಬ ಖ್ಯಾತಿ ಹೊಂದಿದ್ದ ಕುಮಾರರಾಮ ರತ್ನಾಜಿಯನ್ನು ಚಿಕ್ಕಮ್ಮನಂತೆ ಕಾಣುತ್ತಾನೆ. ಮದುವೆ ನಂತರವೂ ರತ್ನಾಜಿ, ಕುಮಾರರಾಮನನ್ನು ಪೀಡಿಸುತ್ತಾಳೆ. ಚಿಕ್ಕಮ್ಮನೇ ಮಗನನ್ನು ಪ್ರೀತಿಸುವ, ವ್ಯಾಮೋಹಿಸುವ ಸನ್ನಿವೇಶಗಳು ಈ ಚಿತ್ರದಲ್ಲಿತ್ತು. ಹೀಗಾಗಿ ಚಿಕ್ಕಮ್ಮನನ್ನು ಪ್ರೀತಿಸುವ ಕುಮಾರರಾಮನ ಪಾತ್ರದಲ್ಲಿ ರಾಜಕುಮಾರ್ ಅವರನ್ನು ನೋಡಲು ಅಭಿಮಾನಿಗಳು ಒಪ್ಪುತ್ತಾರಾ ಎಂಬ ಚರ್ಚೆ ಜೋರಾಗಿ ಶುರುವಾಯ್ತು.
ಅಲ್ಲದೆ ದೆಹಲಿ ಸುಲ್ತಾನ ಮತ್ತು ಕುಮಾರರಾಮನ ನಡುವಿನ ಸನ್ನಿವೇಶಗಳಲ್ಲಿ ಸುಲ್ತಾನರಿಗೆ ಅಗೌರವ ತೋರಿಸುವ ದೃಶ್ಯಗಳಿದ್ದವು. ಆ ಸಮಯಕ್ಕೆ ಅದು ಸೂಕ್ಷ್ಮ ವಿಷಯವಾಗಿದ್ದರಿಂದ, ಹಿಂದೂ-ಮುಸ್ಲಿಂ ನಡುವೆ ವಿವಾದಕ್ಕೆ ಕಾರಣವಾಗಬಹುದು ಎಂಬ ಅಭಿಪ್ರಾಯವನ್ನು ಅನೇಕರು ವ್ಯಕ್ತಪಡಿಸಿದ್ದರು. ಇಂಥ ಪಾತ್ರವನ್ನು ಅಣ್ಣಾವ್ರ ಅಭಿಮಾನಿಗಳು ಹೇಗೆ ಸ್ವೀಕರಿಸಬಹುದು ಎಂಬ ಆತಂಕ ಶುರುವಾಯ್ತು. ಕೊನೆಗೆ ಈ ಸಿನಿಮಾವನ್ನು ಅಷ್ಟಕ್ಕೆ ನಿಲ್ಲಿಸಲಾಯಿತು.
ಅಂದಹಾಗೆ, ಇದೇ ಕಥೆಯನ್ನು ಇಟ್ಟುಕೊಂಡು, 2006ರಲ್ಲಿ ರಾಜಕುಮಾರ್ ಪುತ್ರ ಶಿವರಾಜಕುಮಾರ್ “ಗಂಡುಗಲಿ ಕುಮಾರರಾಮ’ ಎಂಬ ಹೆಸರಿನಲ್ಲಿ ಸಿನಿಮಾ ಮಾಡಿದರು. ಕುಮಾರ ರಾಮನ ಪಾತ್ರದಲ್ಲಿ ನಟ ಶಿವಣ್ಣ ಕಾಣಿಸಿಕೊಂಡರು. ಸಿನಿಮಾಕ್ಕೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾದರೂ, ಸಿನಿಮಾ ಬಾಕ್ಸಾಫೀಸ್‌ನಲ್ಲಿ ಅಂದುಕೊಂಡ ಮಟ್ಟಿಗೆ ಸಕ್ಸಸ್ ಆಗಲಿಲ್ಲ. ಒಟ್ಟಾರೆ ರಾಜಕುಮಾರ್ ಸಿನಿಕೆರಿಯರ್‌ನಲ್ಲಿ ಇಂಥ ಅನೇಕ ಉದಾಹರಣೆಗಳು ಅಲ್ಲಲ್ಲಿ ಕಾಣಸಿಗುತ್ತದೆ.