ಬೆಂಗಳೂರು: ರಾಜ್ ಬಿ ಶೆಟ್ಟಿ ಅವರ ಬಹು ನಿರೀಕ್ಷಿತ ʼಟೋಬಿʼ ಸಿನಿಮಾ ರಿಲೀಸ್ ಗೆ ದಿನಗಣನೆ ಆರಂಭವಾಗಿದೆ. ʼಒಂದು ಮೊಟ್ಟೆಯ ಕಥೆʼಯಲ್ಲಿ ಮುಗ್ಧನಾಗಿ ʼಗರುಡ ಗಮನ ವೃಷಭ ವಾಹನʼದಲ್ಲಿ ರಗಡ್ ಆದ ರಾಜ್ ಬಿ ಶೆಟ್ಟಿ, ಇದೀಗ ʼಮಾರಿʼ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ʼಮಾರಿಗೆ ದಾರಿʼ ಎನ್ನುತ್ತಾ ಫಸ್ಟ್ ಲುಕ್ ನಿಂದ ಗಮನ ಸೆಳೆದಿದ್ದ ʼಟೋಬಿʼ, ಇತ್ತೀಚಿಗಷ್ಟೇ ಟ್ರೇಲರ್ ನಿಂದ ಹೈಪ್ ಹೆಚ್ಚಿಸಿದೆ. “ಹರಕೆಯ ಕುರಿಯೊಂದು ತಪ್ಪಿಸಿಕೊಂಡಿದೆ, ಯಾವುದೇ ಕಾರಣಕ್ಕೂ ಕುರಿ ಮತ್ತೆ ಊರಿಗೆ ಕಾಲಿಡಬಾರದು” ಎಂದು ಆರಂಭವಾಗುವ ಟ್ರೇಲರ್, ಟೋಬಿಯ ಜಗತ್ತಿನ ಹಲವು ಮಜಲುಗಳ ಪರಿಚಯ ಮಾಡುವ ಪ್ರಯತ್ನ ಮಾಡಿದೆ.
ಟ್ರೇಲರ್ ವಿಭಿನ್ನವಾಗಿದ್ದು ರಾಜ್ ಬಿ ಶೆಟ್ಟಿ ಎರಡು ಶೇಡ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಕೆಣಕಿದರೆ ʼಮಾರಿʼ ಆಗುವ ʼಟೋಬಿʼ ಯನ್ನು ಸೆನ್ಸಾರ್ ಬೋರ್ಡ್ ಮೆಚ್ಚಿಕೊಂಡಿದ್ದು, ಎಲ್ಲಾ ವಯೋಮನದ ಜನರು ನೋಡುವ ಸರ್ಟಿಫಿಕೇಟ್ ನ್ನು ಚಿತ್ರಕ್ಕೆ ನೀಡಿದೆ.
ʼಯು/ಎʼ ಪ್ರಮಾಣಪತ್ರವನ್ನು ಸೆನ್ಸಾರ್ ಬೋರ್ಡ್ ಚಿತ್ರತಂಡಕ್ಕೆ ನೀಡಿದ್ದು, ʼಮಾರಿʼಯನ್ನು ಹಿಡಿಯಲು ನೀವು ರೆಡಿಯಾ? ಎಂದು ರಾಜ್ ಬಿ ಶೆಟ್ಟಿ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡು ಪ್ರಮಾಣ ಪತ್ರದ ವಿಚಾರವನ್ನು ಹಂಚಿಕೊಂಡಿದ್ದಾರೆ.
ಈಗಾಗಲೇ ʼಟೋಬಿʼ ಗಾಗಿ ರಾಜ್ ಬಿ ಶೆಟ್ಟಿ ಅವರು ಹಾಕಿರುವ ಪರಿಶ್ರಮ ಸ್ಯಾಂಡಲ್ ವುಡ್ ನಲ್ಲಿ ಸದ್ದು ಮಾಡಿದೆ. ಮೂಗು ಚುಚ್ಚಿಸಿಕೊಂಡು, ರಕ್ತ ಬಂದರೂ ಅವರು ʼಟೋಬಿʼಯ ಮಾರಿ ಅವತಾರ ತಾಳಲು ಹಿಂದೆ ಸರಿದಿಲ್ಲ.
ಈ ಚಿತ್ರದ ಮೂಲಕಥೆ ಟಿ.ಕೆ ದಯಾನಂದ್ ಅವರದು. ರಾಜ್ ಬಿ ಶೆಟ್ಟಿ ರಚನೆ ಹಾಗೂ ಬಾಸಿಲ್ ಅವರ ನಿರ್ದೇಶನ ಈ ಚಿತ್ರಕ್ಕಿದೆ. ಮಿಥುನ್ ಮುಕುಂದನ್ ಸಂಗೀತ ನಿರ್ದೇಶನ, ಪ್ರವೀಣ್ ಶ್ರೀಯನ್ ಛಾಯಾಗ್ರಹಣ – ಸಂಕಲನ ಹಾಗೂ ಅರ್ಜುನ್ ರಾಜ್ – ರಾಜಶೇಖರ್ ಅವರ ಸಾಹಸ ನಿರ್ದೇಶನ ಟೋಬಿ ಚಿತ್ರಕಿದೆ. ರಾಜ್ .ಬಿ. ಶೆಟ್ಟಿ, ಸಂಯುಕ್ತಾ ಹೊರನಾಡು, ಚೈತ್ರಾ ಆಚಾರ್, ಗೋಪಾಲಕೃಷ್ಣ ದೇಶಪಾಂಡೆ, ದೀಪಕ್ ರಾಜ್ ಶೆಟ್ಟಿ ಮುಂತಾದವರು ತಾರಾಬಳಗದಲ್ಲಿದ್ದಾರೆ.