ಮಂಗಳೂರು: ರೈತರ ಮಕ್ಕಳಿಗೆ ವಿದ್ಯಾರ್ಥಿವೇತನ ನೀಡುವ “ಮುಖ್ಯಮಂತ್ರಿ ರೈತ ವಿದ್ಯಾನಿಧಿ’ ಜಾರಿಗೆ ಇದೀಗ ಆಧಾರ್ ಸೀಡಿಂಗ್ ಬಾಕಿಯಾಗಿರುವುದು ವಿದ್ಯಾರ್ಥಿಗಳಿಗೆ ತಲೆನೋವು ಸೃಷ್ಟಿಸಿದೆ.
ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ “ಮುಖ್ಯಮಂತ್ರಿ ರೈತ ವಿದ್ಯಾನಿಧಿ’ಯ ಲಾಭ ಪಡೆಯುವವರ ಪೈಕಿ ಸುಮಾರು 2,700 ವಿದ್ಯಾರ್ಥಿ ಗಳಿಗೆ ಸಮಸ್ಯೆ ಯಾಗಿದೆ. ಆಧಾರ್‌ಸೀಡಿಂಗ್ ವಿಳಂಬವಾದರೆ ವಿದ್ಯಾರ್ಥಿ ವೇತನ ಸ್ಥಗಿತ ವಾಗುವ ಸಾಧ್ಯತೆಯೂ ಇದೆ.
ಎರಡೂ ಜಿಲ್ಲೆಗಳ ವಿದ್ಯಾರ್ಥಿ ವೇತನ ತಂತ್ರಾಂಶದಲ್ಲಿ (ಎಸ್‌ಎಸ್‌ಪಿ) ನೋಂದಣಿಯಾದ ವಿದ್ಯಾರ್ಥಿಗಳ ವಿವರಗಳನ್ನು ಪರಿಶೀಲಿಸಿದಾಗ ಕೆಲವರು ಆರ್ಹರಿದ್ದರೂ ಅವರ ಬ್ಯಾಂಕ್ ಖಾತೆಗೆ ಆಧಾರ್ ಸೀಡಿಂಗ್ ಆಗದೆ ವಿದ್ಯಾರ್ಥಿವೇತನ ನೀಡಲು ಸಾಧ್ಯವಾಗುತ್ತಿಲ್ಲ. ಇನ್ನೂ ಕೆಲವರ ಆಧಾರ್‌ನಲ್ಲಿರುವ ಹೆಸರು ಹಾಗೂ ಬ್ಯಾಂಕ್ ಅಕೌಂಟ್‌ಗೆ ಸರಿಹೊಂದುತ್ತಿಲ್ಲ. ಹೀಗಾಗಿ ಅರ್ಹರಿದ್ದರೂ ವಿದ್ಯಾರ್ಥಿಗಳಿಗೆ ವಿದ್ಯಾನಿಧಿ ಕೈಗಟಕುತ್ತಿಲ್ಲ!
ರಾಜ್ಯದ ರೈತರ ಮಕ್ಕಳ ಹೆಚ್ಚಿನ ಹಾಗೂ ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹಿಸಲು ಹೊಸ ಶಿಷ್ಯವೇತನ ಯೋಜನೆಯನ್ನು ಜಾರಿಗೊಳಿಸಲಾಗಿದೆ.
ಇದರಂತೆ ರಾಜ್ಯದಲ್ಲಿ 37,269 ವಿದ್ಯಾರ್ಥಿಗಳು ಆಯ್ಕೆಗೊಂಡಿದ್ದಾರೆ. ಆದರೆ ಈ ವಿದ್ಯಾರ್ಥಿಗಳ ಆಧಾರ್ ಸಂಖ್ಯೆಯು ಬ್ಯಾಂಕ್ ಅಕೌಂಟ್‌ಗೆ ಲಿಂಕ್ ಆಗಿಲ್ಲ. ಜತೆಗೆ 24,788 ವಿದ್ಯಾರ್ಥಿಗಳ ಹೆಸರು ಆಧಾರ್ ಕಾರ್ಡ್‌ನಲ್ಲಿ ನೀಡಿರುವ ಹೆಸರಿನೊಂದಿಗೆ ಸರಿಹೊಂದುತ್ತಿಲ್ಲ. ಆದ್ದರಿಂದ ರಾಜ್ಯದ ಎಲ್ಲ ಪದವಿಪೂರ್ವ ಶಿಕ್ಷಣ ಇಲಾಖೆಯ ಜಿಲ್ಲಾ ಉಪನಿರ್ದೇಶಕರು ತಮ್ಮ ಜಿಲ್ಲಾ ವ್ಯಾಪ್ತಿಯ ಎಲ್ಲ ಪ.ಪೂ. ಕಾಲೇಜು ಪ್ರಾಂಶುಪಾಲರಿಗೆ ವಿದ್ಯಾರ್ಥಿಗಳ ಬ್ಯಾಂಕ್ ಅಕೌಂಟಿಗೆ ಆಧಾರ್ ನಂಬರ್ ಲಿಂಕ್ ಮಾಡಲು ಹಾಗೂ ವಿದ್ಯಾರ್ಥಿಗಳು ಸ್ಯಾಟ್ಸ್ ಪೋರ್ಟಲ್‌ನಲ್ಲಿ ತಮ್ಮ ಹೆಸರನ್ನು ಆಧಾರ್ ಕಾರ್ಡ್‌ನಲ್ಲಿರುವಂತೆ ಸರಿಪಡಿಸಿಕೊಳ್ಳವಂತೆ ಸೂಚನೆ ನೀಡಲಾಗಿದೆ.
ಮುಖ್ಯಮಂತ್ರಿ ರೈತ ವಿದ್ಯಾನಿಧಿ ಕಾರ್ಯಕ್ರಮದಡಿ ರೈತರ ಮಕ್ಕಳಿಗೆ ವಿದ್ಯಾರ್ಥಿವೇತನ ಯೋಜನೆ ಜಾರಿಯಾಗಿದೆ. ಆದರೆ ಬಹುತೇಕ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗಳು ಆಧಾರ್ ಸೀಡಿಂಗ್ ಆಗಿಲ್ಲ. ಇದನ್ನು ಸರಿಪಡಿಸುವಂತೆ ಎರಡೂ ಜಿಲ್ಲೆಗಳ ಪದವಿಪೂರ್ವ ಕಾಲೇಜು ಶಿಕ್ಷಣ ಇಲಾಖೆ ಮೂಲಕ ಎಲ್ಲಾ ಕಾಲೇಜಿಗೆ ಮಾಹಿತಿ ನೀಡಲಾಗಿದೆ. ವಿದ್ಯಾರ್ಥಿಗಳ ಗಮನಕ್ಕೂ ತರಲಾಗಿದೆ.
– ಸೀತಾ / ಡಾ| ಕೆಂಪೇಗೌಡ
ಜಂಟಿ ಕೃಷಿ ನಿರ್ದೇಶಕರು-
ದ.ಕ / ಉಡುಪಿ
-ದಿನೇಶ್ ಇರಾ