ಕೊಲಂಬೊ: ಐಸಿಸಿ ವನಿತಾ ವಿಶ್ವಕಪ್ ಅರ್ಹತಾ ಪಂದ್ಯಾವಳಿಯಲ್ಲಿ ಅಜೇಯ ಅಭಿಯಾನದೊಂದಿಗೆ ಮುನ್ನುಗ್ಗು ತ್ತಿರುವ ಮಿಥಾಲಿ ರಾಜ್ ಸಾರಥ್ಯದ ಭಾರತ ತಂಡ ಮಂಗಳವಾರ ಪ್ರಶಸ್ತಿಯನ್ನೆತ್ತುವ ನೆಚ್ಚಿನ ತಂಡವಾಗಿ ಕಣಕ್ಕಿಳಿಯಲಿದೆ. ಇಲ್ಲಿ ಭಾರತಕ್ಕೆ ಎದುರಾಗುವ ತಂಡ ಡೇನ್ ವಾನ್ ನೀಕರ್ಕ್ ನಾಯಕತ್ವದ ದಕ್ಷಿಣ ಆಫ್ರಿಕಾ.
ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳೆರಡೂ ಲೀಗ್ ಹಂತದಲ್ಲಿ ಬೇರೆ ಬೇರೆ ವಿಭಾಗದದಿಂದ ಅಜೇಯವಾಗಿ ಸೂಪರ್ ಸಿಕ್ಸ್ ಹಂತಕ್ಕೆ ನೆಗೆದಿದ್ದವು. ಭಾರತ ಸೂಪರ್ ಸಿಕ್ಸ್‌ನಲ್ಲೂ ಸೋಲರಿಯದ ತಂಡವಾಗಿ ಮೆರೆದಿತ್ತು. ಇನ್ನೊಂದೆಡೆ ದಕ್ಷಿಣ ಆಫ್ರಿಕಾ ಇಲ್ಲಿ ಸೋಲಿನ ರುಚಿ ಆನುಭವಿಸಿತ್ತು. ಅದು ಭಾರತದ ವಿರುದ್ಧ ಎಂಬುದನ್ನು ಮರೆಯುವಂತಿಲ್ಲ!
ಬುಧವಾರ ನಡೆದ ಮುಖಾಮುಖೀಯಲ್ಲಿ ಭಾರತ 49 ರನ್ನುಗಳಿಂದ ದಕ್ಷಿಣ ಆಫ್ರಿಕಾಕ್ಕೆ ಸೋಲುಣಿಸಿತ್ತು. ಇದು ಕೂಟದಲ್ಲಿ ಹರಿಣಗಳಿಗೆ ಎದುರಾದ ಏಕೈಕ ಸೋಲು. ಇದಕ್ಕೆ ಫೈನಲ್‌ನಲ್ಲಿ ಸೇಡು ತೀರಿಸಿಕೊಳ್ಳುವುದು ದಕ್ಷಿಣ ಆಫ್ರಿಕಾದ ಪ್ರಮುಖ ಗುರಿ. ಆದರೆ ಪ್ರಶಸ್ತಿ ಸಮರದಲ್ಲೂ ಆಫ್ರಿಕಾವನ್ನು ಮಣಿಸಿ ಕೂಟದ ಅಜೇಯ ತಂಡವಾಗಿ ಮೆರೆಯುವುದು ಭಾರತದ ಯೋಜನೆ.
ಮುಖ್ಯ ಸುತ್ತಿಗೆ 4 ತಂಡಗಳು: ಗಮ ನಿಸಬೇಕಾದ ಸಂಗತಿಯೆಂದರೆ, ಇಲ್ಲಿನ ಫಲಿತಾಂಶದಿಂದ ಯಾವ ತಂಡಕ್ಕೂ ಲಾಭ ಇಲ್ಲ. ಸೂಪರ್ ಸಿಕ್ಸ್‌ನಲ್ಲಿ ಮೊದಲ 4 ಸ್ಥಾನ ಪಡೆದ ತಂಡಗಳು ಈಗಾಗಲೇ ವಿಶ್ವಕಪ್ ಪ್ರಧಾನ ಸುತ್ತಿಗೆ ಅರ್ಹತೆ ಸಂಪಾದಿಸಿವೆ. ಭಾರತ, ದಕ್ಷಿಣ ಆಫ್ರಿಕಾ ಜತೆ ಪಾಕಿಸ್ಥಾನ ಹಾಗೂ ಆತಿಥೇಯ ಶ್ರೀಲಂಕಾ ಕೂಡ ಮುಖ್ಯ ಸುತ್ತಿನಲ್ಲಿ ಆಡುವ ಅರ್ಹತೆ ಪಡೆದಿವೆ. ಆದರೆ ಅರ್ಹತಾ ಸುತ್ತಿನ ಚಾಂಪಿಯನ್ ಎನಿಸಿಕೊಂಡು ವಿಶ್ವಕಪ್‌ನಲ್ಲಿ ಆಡುವುದಕ್ಕೆ ಹೆಚ್ಚಿನ ಮಹತ್ವವಿದೆ ಎಂಬುದನ್ನು ಎರಡೂ ತಂಡಗಳು ಅರಿತಿವೆ. ಹೀಗಾಗಿ ಪೈಪೋಟಿ ತೀವ್ರಗೊಳ್ಳುವುದರಲ್ಲಿ ಅನುಮಾನವಿಲ್ಲ.
ಐಸಿಸಿ ರ್‍ಯಾಂಕಿಂಗ್‌ನಲ್ಲಿ ಮೊದಲ 4 ಸ್ಥಾನದಲ್ಲಿರುವ ಆಸ್ಟ್ರೇಲಿಯ, ಇಂಗ್ಲೆಂಡ್, ನ್ಯೂಜಿಲ್ಯಾಂಡ್ ಮತ್ತು ವೆಸ್ಟ್ ಇಂಡೀಸ್ ನೇರ ಅರ್ಹತೆ ಗಳಿಸಿವೆ. ಇನ್ನೊಂದೆಡೆ ಸೂಪರ್ ಸಿಕ್ಸ್ ಪ್ರವೇಶಿಸಿದ ಕಾರಣಕ್ಕಾಗಿ ಬಾಂಗ್ಲಾದೇಶ ಮತ್ತು ಅಯರ್‌ಲ್ಯಾಂಡ್ ತಂಡಗಳು ಮುಂದಿನ 4 ವರ್ಷಗಳ ಕಾಲ ತಮ್ಮ ಏಕದಿನ ಮಾನ್ಯತೆಯನ್ನು ಉಳಿಸಿಕೊಳ್ಳಲಿವೆ.
ಭಾರತಕ್ಕಿದೆ ಸ್ಪಿನ್ ಬಲ: ಭಾರತ ಈ ಕೂಟದ ಎಲ್ಲ 7 ಪಂದ್ಯಗಳನ್ನು ಅಧಿಕಾರಯುತವಾಗಿಯೇ ಗೆದ್ದಿದೆ. ಕೊಲಂಬೋಗೆ ಬಂದಿಳಿದ ಬಳಿಕ ಮಿಥಾಲಿ ಪಡೆ ಏಕೈಕ ಸೋಲನುಭವಿಸಿದ್ದು ಅಭ್ಯಾಸ ಪಂದ್ಯದಲ್ಲಿ. ಸೋಲಿಸಿದ್ದು ಬೇರೆ ಯಾರೂ ಅಲ್ಲ, ಇದೇ ದಕ್ಷಿಣ ಆಫ್ರಿಕಾ!
“ಪಿ. ಸಾರಾ ಓವಲ್’ನಲ್ಲಿ ನಡೆದ ದಕ್ಷಿಣ ಆಫ್ರಿಕಾ ಎದುರಿನ ಸೂಪರ್ ಸಿಕ್ಸ್ ಪಂದ್ಯದಲ್ಲಿ ಭಾರತ ಕೇವಲ 205 ರನ್ ಗಳಿಸಿಯೂ ಪಂದ್ಯವನ್ನು ಉಳಿಸಿಕೊಂಡಿತ್ತು. ಮಿಥಾಲಿ 64 ರನ್ ಬಾರಿಸಿದ್ದರು. ವೇಗಿ ಶಿಖಾ ಪಾಂಡೆ 4 ವಿಕೆಟ್, ಎಡಗೈ ಸ್ಪಿನ್ನರ್ ಏಕ್ತಾ ಬಿಷ್ಟ್ 3 ವಿಕೆಟ್ ಉಡಾಯಿಸಿ ಹರಿಣಗಳ ಬೇಟೆಯಾಡಿದ್ದರು. ಪಾಕಿಸ್ಥಾನ ವಿರುದ್ಧದ ರವಿವಾರದ ಪಂದ್ಯದಲ್ಲೂ ಏಕ್ತಾ ಬಿಷ್ಟ್ 8 ರನ್ನಿಗೆ 5 ವಿಕೆಟ್ ಉಡಾಯಿಸಿ ಗೆಲುವಿನ ರೂವಾರಿ ಎನಿಸಿದ್ದರು. ಇದು ದಕ್ಷಿಣ ಆಫ್ರಿಕಾ ಪಾಲಿಗೊಂದು ಎಚ್ಚರಿಕೆಯ ಗಂಟೆ. ಏಕ್ತಾ ಜತೆಗೆ ಇನ್ನೂ ಮೂವರು ಸ್ಪಿನ್ನರ್‌ಗಳು ಭಾರತದ ದಾಳಿಯ ಮುಂಚೂಣಿಯಲ್ಲಿದ್ದಾರೆ.
ನಾಯಕಿ ಮಿಥಾಲಿ ರಾಜ್ ಪ್ರಚಂಡ ಬ್ಯಾಟಿಂಗ್ ಫಾರ್ಮ್ನಲ್ಲಿರುವುದು ಭಾರತದ ಪಾಲಿಗೆ ಶುಭ ಸುದ್ದಿ. ಅವರು ಈ ಕೂಟದಲ್ಲಿ 207 ರನ್ ಪೇರಿಸುವ ಮೂಲಕ ಅಗ್ರಸ್ಥಾನ ಅಲಂಕರಿಸಿದ್ದಾರೆ.