Advertisement

ರೈತರ ಪರ ಸದನದಲ್ಲಿ ಧ್ವನಿ ಮೊಳಗಿಸಿ

06:27 PM Dec 10, 2021 | Shwetha M |

ವಿಜಯಪುರ: ರೈತರು ತಮ್ಮ ಜಮೀನುಗಳಿಗೆ ಹೋಗಲು ವಹಿವಾಟು ದಾರಿ ಸಮಸ್ಯೆ ನಿವಾರಣೆಗಾಗಿ ಅಧಿವೇಶನದಲ್ಲಿ ಪ್ರಬಲ ಧ್ವನಿ ಎತ್ತುವಂತೆ ಆಗ್ರಹಿಸಿ ಅಖಂಡ ಕರ್ನಾಟಕ ರೈತ ಸಂಘದ ಪದಾಧಿಕಾರಿಗಳ ನಿಯೋಗ ಜಿಲ್ಲೆಯ ವಿವಿಧ ಶಾಸಕರನ್ನು ಭೇಟಿ ಮಾಡಿ ಸಲ್ಲಿಸಿತು.

Advertisement

ಜಮೀನು ರಸ್ತೆಗಾಗಿ ಜನಪ್ರತಿನಿಧಿಗಳ ಮೇಲೆ ಒತ್ತಡ ಹೇರುವುದಕ್ಕಾಗಿ ರೈತರು ಅಭಿಯಾನ ಆರಂಭಿಸಿದ್ದು, ಗುರುವಾರ ನಾಗಠಾಣ ಶಾಸಕ ದೇವಾನಂದ ಚವ್ಹಾಣ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅಖಂಡ ಕರ್ನಾಟಕ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ, ಜಮೀನುಗಳಿಗೆ ಹೋಗುವ ವಹಿವಾಟು ದಾರಿ ಸಮಸ್ಯೆ ಇತ್ಯರ್ಥವಾಗದೇ ಒಂದು ದೊಡ್ಡ ಹಾಗೂ ಗಂಭೀರ ಸಮಸ್ಯೆಯಾಗಿ ಪರಿಗಣಿತವಾಗಿದೆ. ರೈತ ರೈತರಲ್ಲಿಯೇ ಕಲಹ ಮೊದಲಾದ ಸಂಘರ್ಷಕ್ಕೆ ಕಾರಣವಾಗಿದೆ ಎಂದು ನೋವು ನಿವೇದಿಸಿದರು.

ರೈತರ ಸದರಿ ಸಮಸ್ಯೆ ಪರಿಹಾರಕ್ಕಾಗಿ ಹಲವು ವರ್ಷಗಳಿಂದ ವಿವಿಧ ರೀತಿಯಲ್ಲಿ ಹೋರಾಟ, ಮನವಿ, ಧರಣಿ ನಡೆಸಿದರೂ ಸರ್ಕಾರಕ್ಕೆ ರೈತರ ಪರಿಸ್ಥಿತಿಯ ಗಂಭೀರತೆಯ ಅರಿವಾಗುತ್ತಿಲ್ಲ. ಹೀಗಾಗಿಯೇ ಹೋರಾಟಕ್ಕೆ ಸರ್ಕಾರದ ಸ್ಪಂದನೆ ಸಿಕ್ಕಿಲ್ಲ ಎಂದು ದೂರಿದರು.

ಜಮೀನುಗಳಿಗೆ ಹೋಗುವ ವಹಿವಾಟು ದಾರಿ ಸಮಸ್ಯೆ ಹಳ್ಳಿಗಳಲ್ಲಿ ತೀವ್ರವಾಗಿದ್ದು, ಉತ್ತಮ ಮಳೆಯಾದರೆ ಬಿತ್ತನೆ ಮಾಡಲು ಹೊಲಕ್ಕೆ ಹೋಗಲು ಸಾಧ್ಯವಾಗುತ್ತಿಲ್ಲ. ಒಂದೊಮ್ಮೆ ಹೇಗೋ ಮಾಡಿ ಬಿತ್ತನೆ ಮಾಡಿದರೆ ಬೆಳೆ ಕೊಯ್ಲಿಗೆ ಬಂದಾಗ ಬೆಳೆ ಕೊಯ್ದು, ರಾಶಿ ಮಾಡಿ, ಜಮೀನಿನಿಂದ ಮಾರುಕಟ್ಟೆಗೆ ಸಾಗಿಸಲು ದಾರಿ ಇಲ್ಲದೆ ಹೊಲದಲ್ಲೇ ರೈತರ ಬೆಳೆ ಹಾಳಾಗುವ ಪರಿಸ್ಥಿತಿ ಇದೆ ಎಂದು ರೈತರು ಹೊಲಕ್ಕೆ ಹೋಗುವ ದಾರಿ ಸಮಸ್ಯೆಯಿಂದ ಎದುರಿಸುತ್ತಿರುವ ವಿವಿಧ ರೀತಿಯ ಸಮಸ್ಯೆಗಳನ್ನು ವಿವರಿಸಿದರು.

Advertisement

ರಾಜ್ಯದಲ್ಲಿ ಎಲ್ಲೆಡೆ ಇರುವ ಸಮಸ್ಯೆ ಕುರಿತು ಸರ್ಕಾರದ ಮಟ್ಟದಲ್ಲಿ ಕಾನೂನು ಜಾರಿಗೆ ಬರಬೇಕಿದೆ. ಇದಕ್ಕಾಗಿ ಬೆಳಗಾವಿ ಅಧಿವೇಶನದಲ್ಲಿ ಚರ್ಚಿಸಿ ರೈತರು ಜಮೀನಿಗೆ ಹೋಗುವ ದಾರಿ ಸುಗಮಗೊಳಿಸಲು ಸರ್ಕಾರದ ಮೇಲೆ ಕಾನೂನು ತಿದ್ದುಪಡಿಗೆ ಸರ್ಕಾರದ ಮೇಲೆ ಒತ್ತಡ ತರಬೇಕು. ಈ ಹಿಂದೆ ಇದ್ದಂತೆ ತಹಶೀಲ್ದಾರ್‌ ಮಟ್ಟದಲ್ಲೇ ಸಮಸ್ಯೆ ಪರಿಹಾರಕ್ಕಾಗಿ ಅಧಿಕಾರ ಕಲ್ಪಿಸುವಂತೆ ಅಧಿವೇಶನದಲ್ಲಿ ಪ್ರಬಲ ಧ್ವನಿ ಮೊಳಗಿಸಬೇಕು ಎಂದು ಕೋರಿದರು.

ಈ ಸಂದರ್ಭದಲ್ಲಿ ಎನ್‌.ಕೆ. ಮನಗೊಂಡ, ಐ.ಬಿ. ಸಾರವಾಡ, ಬಸವರಾಜ ಅವಟಿ, ಎಸ್‌.ಜಿ. ಸಂಗೊಂದಿಮಠ, ರಾಜು ಕ್ಷೀರಸಾಗರ, ಕೆ.ಡಿ. ನರಗುಂದ, ಡಾ| ರವಿ ಕಲ್ಲೂರ ಮೊದಲಾದವರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next