ಬೆಂಗಳೂರು: ಗೃಹ ಖಾತೆಯನ್ನು ಅರಣ್ಯ ಸಚಿವ ರಮಾನಾಥ ರೈಗೆ ನೀಡುವ ವಿಷಯದಲ್ಲಿ ಅವರೊಂದಿಗೆ ಚರ್ಚಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಪಕ್ಷ ಹಾಗೂ ಪ್ರತಿಪಕ್ಷಗಳಿಂದ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಯೋಚನೆ ಮಾಡಿ ತೀರ್ಮಾನ ಮಾಡಲು ಮುಂದಾಗಿದ್ದಾರೆ.
ಮಂಗಳವಾರ ರಮಾನಾಥ ರೈ ಅವರನ್ನು ತಮ್ಮ ನಿವಾಸಕ್ಕೆ ಕರೆಸಿಕೊಂಡು ಗೃಹ ಸಚಿವ ಸ್ಥಾನ ಒಪ್ಪಿಕೊಳ್ಳುವಂತೆ ಸೂಚಿಸಿದ್ದರು. ಅವರ ಸೂಚನೆಯ ಮೇರೆಗೆ ಜವಾಬ್ದಾರಿ ವಹಿಸಿಕೊಳ್ಳಲು ರಮಾನಾಥ ರೈ ಕೂಡ ಒಪ್ಪಿಕೊಂಡಿದ್ದರು. ಅಲ್ಲದೇ ಮುಖ್ಯಮಂತ್ರಿ ಭೇಟಿ ನಂತರ ಸ್ವತಃ ರೈ ಅವರೇ ಬೆಳಗ್ಗೆ 10 ಗಂಟೆ ಹೊತ್ತಿಗೆ ಗೃಹ ಇಲಾಖೆ ನೀಡುವ
ಕುರಿತಾಗಿ ಮಾಧ್ಯಮದವರೆದುರಿಗೆ ಹೇಳಿಕೆ ನೀಡಿ, “ಗೃಹ ಖಾತೆ ನಿಭಾಯಿಸಲು ಸಿದ್ಧ. ಈಗಾಗಲೇ ಹಲವಾರು
ಖಾತೆಗಳನ್ನು ನಿಭಾಯಿಸಿರುವ ಅನುಭವ ಇದೆ.
ಮುಖ್ಯಮಂತ್ರಿಗಳು ನನ್ನ ಮೇಲೆ ವಿಶ್ವಾಸ ಇಟ್ಟು, ಗೃಹ ಖಾತೆ ನೀಡುವ ಬಗ್ಗೆ ಚರ್ಚೆ ಮಾಡಿರುವುದು ನಿಜ. ಕೋಮು ಗಲಭೆ ವಿಚಾರವಾಗಿ ಬಿಜೆಪಿ ಮುಖಂಡರು ಇಲ್ಲ ಸಲ್ಲದ ಆರೋಪ ಮಾಡಿದ್ದರು. ಸುಳ್ಳನ್ನೇ ಪದೇ ಪದೇ ಹೇಳುವುದು ಬಿಜೆಪಿ ನಾಯಕರ ಜಾಯಮಾನವಾಗಿದೆ’ ಎಂದು ಹೇಳಿದ್ದರು.
ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಬಗ್ಗೆ ತದ್ವಿರುದ್ದ ಹೇಳಿಕೆ ನೀಡಿದ್ದು, “ರಮಾನಾಥ ರೈ ಅವರನ್ನು ಗೃಹ ಸಚಿವರನ್ನಾಗಿ ಮಾಡುವುದಾಗಿ ನಾವು ಹೇಳಿದ್ವಾ? ಇನ್ನೂ ಮೂರು ಖಾತೆ ತುಂಬಬೇಕಿದೆ. ಮೂವರು ಸಚಿವರನ್ನು ನೇಮಿಸಿದ ಮೇಲೆ ಗೃಹ ಸಚಿವರನ್ನು ನೇಮಕ ಮಾಡುವುದು. ಕೂಸು ಹುಟ್ಟುವ ಮೊದಲೇ ಕುಲಾವಿ ಹಾಕೋದಾ ?’ ಎಂದು ಪ್ರಶ್ನಿಸಿದರು.
ಮುಖ್ಯಮಂತ್ರಿ ಈ ಹೇಳಿಕೆ ನಂತರ ಮಾತು ಬದಲಿಸಿದ ರಮಾನಾಥ ರೈ, “ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತ, ಪಕ್ಷ ಕೊಟ್ಟ ಜವಾಬ್ದಾರಿ ನಿಭಾಯಿಸುತ್ತೇನೆ. ಗೃಹ ಖಾತೆ ಯಾರಿಗೆ ಅಂತ ಮುಖ್ಯಮಂತ್ರಿ ನಿರ್ಧರಿಸುತ್ತಾರೆ. ಮುಖ್ಯಮಂತ್ರಿ ಜೊತೆ ಚರ್ಚಿಸಿರುವುದನ್ನೆಲ್ಲ ಹೇಳಲಿಕ್ಕೆ ಆಗುವುದಿಲ್ಲ’ ಎಂದು ತಿಳಿಸಿದರು. ಈ ಮಧ್ಯೆಯೇ ಪ್ರತಿಪಕ್ಷಗಳ ನಾಯಕರು ಹಾಗೂ ಸ್ವತ ಪಕ್ಷದ ಮುಖಂಡರು ಮತ್ತು ಕೆಲವು ಸಚಿವರು ರಮಾನಾಥ ರೈ ಅವರಿಗೆ ಗೃಹ ಖಾತೆ ನೀಡುವ ಕುರಿತು ವಿರೋಧ ವ್ಯಕ್ತಪಡಿಸಿದ್ದರಿಂದ ಮುಖ್ಯಮಂತ್ರಿ ಈ ಬಗ್ಗೆ “ಆಲೋಚಿಸಿ ತೀರ್ಮಾನ’ ಮಾಡಲು ಮುಂದಾಗಿದ್ದಾರೆ ಎನ್ನಲಾಗಿದೆ.
ಕೇವಲ ದಕ್ಷಿಣ ಕನ್ನಡದ ಕಾನೂನು ಸುವ್ಯವಸ್ಥೆ ಕಾಪಾಡಲು ಸಾಧ್ಯವಾಗದ ರಮಾನಾಥ ರೈ ಅವರಿಂದ ಇಡೀ ರಾಜ್ಯದ ಕಾನೂನು ಸುವ್ಯವಸ್ಥೆ ಹದಗೆಡದಂತೆ ನೋಡಿಕೊಳ್ಳುವುದು ಸಾಧ್ಯವಿಲ್ಲ. ಮುಖ್ಯಮಂತ್ರಿಗಳು ಜವಾಬ್ದಾರಿ ಇರುವವರಿಗೆ ಗೃಹ ಖಾತೆ ನೀಡಬೇಕು.
– ಜಗದೀಶ ಶೆಟ್ಟರ್, ಪ್ರತಿಪಕ್ಷ ನಾಯಕ
ಗೃಹಖಾತೆ ರಮಾನಾಥ ರೈಗೆ ನೀಡುವುದು “ಕಳ್ಳನ ಕೈಗೆ ಬೀಗ ಕೊಟ್ಟಂತೆ’ಗೃಹ ಸಚಿವರಾಗಲು ರಮಾನಾಥ ರೈ ಯೋಗ್ಯ ವ್ಯಕ್ತಿಯಲ್ಲ. ಈ ಹಿಂದೆ ಪೊಲೀಸ್ ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಂಡಿದ್ದಲ್ಲದೆ, ಬಂಟ್ವಾಳ ಘಟನೆ ವೇಳೆ ಪಕ್ಷಪಾತಿಯಾಗಿ ನಡೆದುಕೊಂಡಿದ್ದ ಅವರಿಗೆ ಗೃಹ ಖಾತೆ ಕೊಡುವುದು ಜನತೆಯ ದುರ್ದೈವ. ಗೃಹಖಾತೆಗೆ ಮಾಡುವ ಅವಮಾನ.
– ಕೆ.ಎಸ್.ಈಶ್ವರಪ್ಪ, ಮೇಲ್ಮನೆ ಪ್ರತಿಪಕ್ಷ ನಾಯಕ