ಬೀದರ: ಜಿಲ್ಲೆಯಲ್ಲಿ ಮಕ್ಕಳನ್ನು ಗ್ರಹಣದ ಸಮಯದಲ್ಲಿ ಮಣ್ಣಿನಲ್ಲಿ ಮುಚ್ಚಿರುವ ಪದ್ಧತಿಯಂತಹ ಮೂಢನಂಬಿಕೆಗಳ ವಿರುದ್ಧ ಜಿಲ್ಲೆಯ ಸಾರ್ವಜನಿಕರು ಹಾಗೂ ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸಲು ವಿವಿಧ ಕಾರ್ಯಕ್ರಮ ರೂಪಿಸುವಂತೆ ಜಿಪಂ ಸಿಇಒ ಗ್ಯಾನೇಂದ್ರಕುಮಾರ ಗಂಗವಾರ ತಾಲೂಕು ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಡಿಸಿ ಕಚೇರಿಯಲ್ಲಿ ವಿವಿಧ ತಾಲೂಕುಗಳ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿದ ಅವರು, ಜಿಲ್ಲೆಯಲ್ಲಿ ಈ ಹಿಂದೆ ಗ್ರಹಣದ ಸಮಯದಲ್ಲಿ ವಿಕಲಚೇತನ ಮಕ್ಕಳನ್ನು ಮಣ್ಣಿನಲ್ಲಿ ಹೂತಿದ್ದ ವರದಿ ಬಗ್ಗೆ ಮಾಹಿತಿ ಪಡೆದರು. ತಹಶೀಲ್ದಾರರು, ತಾಪಂ ಇಒಗಳು, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಈ ವಿಷಯವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ, ಗ್ರಹಣದ ಸಮಯದಲ್ಲಿ ವಿಕಲಚೇತನ ಮಕ್ಕಳನ್ನು ಮಣ್ಣಿನಲ್ಲಿ ಹೂಳುವುದು ತಪ್ಪು ಮತ್ತು ಅಪರಾಧವಾಗಿದೆ. ಈ ಕುರಿತು ಹಳ್ಳಿಗಳಲ್ಲಿ ವಾಹನ ಮತ್ತು ಬೀದಿ ನಾಟಕಗಳ ಮೂಲಕ ಜಾಗೃತಿ ಮೂಡಿಸಲು ಕಾರ್ಯಕ್ರಮ ರೂಪಿಸುವಂತೆ ಸೂಚಿಸಿದರು.
ಚಿಟಗುಪ್ಪಾದ ಫಾತ್ಮಪುರದಲ್ಲಿ ಸಹ 5 ಮಕ್ಕಳನ್ನು ಗ್ರಹಣದ ಸಮಯದಲ್ಲಿಮಣ್ಣಿನಲ್ಲಿ ಹೂತಿರುವ ಬಗ್ಗೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ವರದಿ ಮಾಡಿದ್ದರು. ಇದನ್ನು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ಗಂಭೀರವಾಗಿ ಪರಿಗಣಿಸಿದ್ದು, ಇಂತಹ ಮೂಢನಂಬಿಕೆಗಳಿಂದ ಮಕ್ಕಳನ್ನು ರಕ್ಷಿಸುವುದು ಎಲ್ಲ ಕರ್ತವ್ಯವಾಗಿದೆ ಎಂದು ಆಯೋಗ ತಿಳಿಸಿದೆ. ಎಲ್ಲ ತಾಲೂಕು ಅಧಿಕಾರಿಗಳು ಸೋಮವಾರ ಸಭೆ ನಡೆಸಿ ಚರ್ಚಿಸಬೇಕು. ಮೂಢನಂಬಿಕೆ ಕುರಿತು ಜನಜಾಗೃತಿ ಮೂಡಿಸಲು ಜಿಲ್ಲಾದ್ಯಂತ ಜಾಥಾ ಕಾರ್ಯಕ್ರಮ ನಡೆಸುವಂತೆ ಸೂಚಿಸಿದರು.
ಫಾತ್ಮಪುರ ಗ್ರಾಮಕ್ಕೆ ಚಿಟಗುಪ್ಪ ತಹಸೀಲ್ದಾರರು ಮತ್ತೂಮ್ಮೆ ಭೇಟಿ ನೀಡಿ, ಅಲ್ಲಿನ ವಿಕಲಚೇತನ ಮಕ್ಕಳ ಬಗ್ಗೆ ಮಾಹಿತಿ ಪಡೆದುಕೊಳ್ಳಬೇಕು. ಅಲ್ಲಿನ ಸಮಸ್ಯೆ ಪರಿಹಾರಕ್ಕೆ ಮೊದಲಾದ್ಯತೆ ಕೊಡಬೇಕು ಎಂದು ಸಿಇಒ ಸೂಚಿಸಿದರು. ಗ್ರಹಣದ ಸಮಯದಲ್ಲಿ ಮಕ್ಕಳನ್ನು ಮಣ್ಣಿನಲ್ಲಿ ಹೂಳುವಂತಹ ಯಾವುದೇ ಘಟನೆಗಳು ನಮ್ಮ ತಾಲೂಕಿನಲ್ಲಿ ನಡೆದಿಲ್ಲ. ಈ ಕುರಿತು ಮತ್ತೂಮ್ಮೆ ಪರಿಶೀಲಿಸಿ ವರದಿ ಮಾಡುವುದಾಗಿ ಬಸವಕಲ್ಯಾಣ, ಭಾಲ್ಕಿ ಮತ್ತು ಬೀದರ ತಹಶೀಲ್ದಾರ್ ಹೇಳಿದರು.
ಅಪರ ಜಿಲ್ಲಾಧಿಕಾರಿ ರುದ್ರೇಶ ಗಾಳಿ ಮಾತನಾಡಿ, ಈ ಮಾಹಿತಿಯು ಎಲ್ಲ ಗ್ರಾ.ಪಂಗಳಿಗೆ ಈ ದಿನವೇ ಹೋಗಬೇಕು. ಹೆಚ್ಚಿನ ಸಂಖ್ಯೆಯಲ್ಲಿ ಜನಜಾಗೃತಿ ಮೂಡಿಸುವ ಫಲಕಗಳನ್ನು ತಯಾರಿಸಿ ಜಾಥಾ ಪರಿಣಾಮಕಾರಿಯಾಗಿ ನಡೆಸಬೇಕು ಎಂದು ಸೂಚಿಸಿದರು.
ಎಸಿ ಅಕ್ಷಯ ಶ್ರೀಧರ, ತಾಪಂ ಇಒ ಧನರಾಜ ಬೋರಾಳೆ, ಡಿಎಚ್‌ಒ ಡಾ| ವಿ.ಜಿ.ರೆಡ್ಡಿ, ಬ್ರಿಮ್ಸ್ ನಿರ್ದೇಶಕ ಡಾ| ಶಿವಕುಮಾರ, ಅಧಿಕಾರಿಗಳಾದ ಶ್ರೀಕಾಂತ ಕುಲಕರ್ಣಿ, ಜಗದೀಶ, ಗೌರಿಶಂಕರ ಪರತಾಪುರೆ, ಗೌತಮ ಶಿಂಧೆ ಇದ್ದರು.