ಗಜೇಂದ್ರಗಡ: ಆರ್ಥಿಕವಾಗಿ ದುರ್ಬಲ ಬಡ ಕುಟುಂಬಗಳ ಆರೋಗ್ಯ ರಕ್ಷಣೆ ನೀಡುವ ಆಯುಷ್ಮಾನ್ ಭಾರತ್ ಯೋಜನೆ ಬಡವರಿಗೆ ಸಂಜೀವಿನಿಯಾಗಿದೆ. ಈ ನಿಟ್ಟಿನಲ್ಲಿ ದೇಶದ ಅತ್ಯೂನ್ನತ ಯೋಜನೆಗಳಲ್ಲೊಂದಾದ ಆಯುಷ್ಮಾನ್ ಯೋಜನೆ ಕಾರ್ಡ್ ಎಲ್ಲರಿಗೂ ದೊರೆಯುವಂತೆ ಮಾಡಲು ಅಧಿಕಾರಿಗಳು ಪರಿಣಾಮಕಾರಿಯಾಗಿ ಜಾಗೃತಿ ಮೂಡಿಸಬೇಕಿದೆ ಎಂದು ಶಾಸಕ ಕಳಕಪ್ಪ ಬಂಡಿ ಹೇಳಿದರು.
ಪಟ್ಟಣದ ಕಟ್ಟಿಬಸವೇಶ್ವರ ರಂಗ ಮಂದಿರದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಪಂ, ತಾಲೂಕು ಆರೋಗ್ಯ ಇಲಾಖೆ ಪುರಸಭೆ, ಸಮುದಾಯ ಆರೋಗ್ಯ ಕೇಂದ್ರ ಸಂಯುಕ್ತಾಶ್ರಯದಲ್ಲಿ ಶನಿವಾರ ನಡೆದ ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಯೋಜನೆ ಪಾಕ್ಷಿಕ ಆಚರಣೆ ಹಾಗೂ ಕಾರ್ಡ್ ವಿತರಣಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಸತೀಶ್ ಬಸರಿಗಿಡದ ಮಾತನಾಡಿ, ಯೋಜನೆಯಡಿ 1650 ಚಿಕಿತ್ಸಾ ವಿಧಾನ ಒಳಗೊಂಡಿದ್ದು, ಪ್ರಾಥಮಿಕ ಚಿಕಿತ್ಸೆಗಳು ಮತ್ತು ಸರಳ ದ್ವಿತೀಯ ಹಂತದ 291 ಚಿಕಿತ್ಸೆಗಳನ್ನು ಸಾರ್ವಜನಿಕ ಆರೋಗ್ಯ ಸಂಸ್ಥೆಗಳಲ್ಲಿ ಮಾತ್ರ ನೀಡಲಾಗುತ್ತದೆ. ಕ್ಲಿಷ್ಟಕರ ದ್ವಿತೀಯ ಹಂತದ 254 ಚಿಕಿತ್ಸಾ ವಿಧಾನಗಳನ್ನು ತೃತೀಯ ಹಂತದ 900 ಚಿಕಿತ್ಸಾ ವಿಧಾನಗಳು ಹಾಗೂ 169 ತುರ್ತು ಚಿಕಿತ್ಸೆಗಳನ್ನು ಸಾರ್ವಜನಿಕ ಆರೋಗ್ಯ ಸಂಸ್ಥೆಗಳು ಮತ್ತು ನೋಂದಾಯಿತ ಖಾಸಗಿ ಆಸ್ಪತ್ರೆಗಳಲ್ಲಿ ಒದಗಿಸಲಾಗುತ್ತದೆ. ಜಿಲ್ಲೆಯಲ್ಲಿ 2020ರೊಳಗೆ ಎಲ್ಲರಿಗೂ ಈ ಸೌಲಭ್ಯ ನೀಡುವ ಗುರಿ ಹೊಂದಲಾಗಿದೆ.
ರೋಣ ತಾಲೂಕಿನ 18 ಸೇವಾ ಕೇಂದ್ರಗಳಲ್ಲಿ ಕಾರ್ಡ್ ನೀಡಲಾಗುತ್ತಿದೆ. 65,239 ಜನರಲ್ಲಿ 20,500 ವಿತರಿಸಲಾಗಿದೆ. ಇನ್ನು 40 ಸಾವಿರ ಜನರಿಗೆ ತಲುಪಬೇಕಿದೆ. ಹೀಗಾಗಿ ಯೋಜನೆಗಾಗಿಯೇ ವಿಶೇಷ ವಾಹನಗಳ ಮೂಲಕ ಪ್ರತಿ ಹಳ್ಳಿಗೆ ತೆರಳಿ ಕಾರ್ಡ್ ಹೊಂದದವರಿಗೆ ನೀಡುವ ಯೋಜನೆ ರೂಪಿಸಲಾಗುತ್ತಿದೆ ಎಂದರು.
ಜಿಪಂ ಸದಸ್ಯ ಪಡಿಯಪ್ಪ ಪೂಜಾರ, ತಾಪಂ ಉಪಾಧ್ಯಕ್ಷೆ ಇಂದಿರಾ ತೇಲಿ, ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ವೈ.ಕೆ. ಭಜೇಂತ್ರಿ, ತಾಪಂ ಸದಸ್ಯ ವಿರೂಪಾಕ್ಷಗೌಡ ಪಾಟೀಲ, ಮಹಮ್ಮದಸಾಬ್ ತರಫದಾರ, ಪುರಸಭೆ ಸದಸ್ಯರಾದ ಕನಕಪ್ಪ ಅರಳಿಗಿಡದ, ರಾಜು ಸಾಂಗ್ಲಿಕಾರ, ಯು.ಆರ್. ಚನ್ನಮ್ಮನವರ, ರುಪೇಶ ರಾಠೊಡ, ಮೂಕಪ್ಪ ನಿಡಗುಂದಿ, ಉಮಾ ಮ್ಯಾಕಲ್, ಕೌಸರಬಾನು ಹುನಗುಂದ, ಸುಜಾತಾಬಾಯಿ ಶಿಂಗ್ರಿ, ವಿಜಯಾ ಮಳಗಿ, ಶರಣಪ್ಪ ರೇವಡಿ, ರಮೇಶ ಮಡಿವಾಳರ, ರಾಮನಗೌಡ ಶಂಕರಗೌಡ, ಬಿ.ಎಂ. ಸಜ್ಜನರ ಸೇರಿ ಇತರರು ಇದ್ದರು.