Advertisement

ಮಳಲಿ ನಾಡಾಜೆ: ಬೇಸಗೆಯಲ್ಲಿ ಉಪಯೋಗಕ್ಕಿಲ್ಲದ ಬಾವಿ

11:00 PM May 21, 2019 | Team Udayavani |

ಗುರುಪುರ: ಕೈಕಂಬ ಸಮೀಪದ ಮಳಲಿ ನಾಡಾಜೆ ಎಂಬಲ್ಲಿನ ಪರಿಶಿಷ್ಟ ಜಾತಿ ಕಾಲೋನಿಗೆ ನೀರುಣಿಸಲು 68 ಸಾವಿರ ರೂ. ಅಂದಾಜು ವೆಚ್ಚದಲ್ಲಿ 2012- 13ನೇ ಸಾಲಿನ ಅನುದಾನದಲ್ಲಿ ತೆರೆದ ಬಾವಿ ಅಭಿವೃದ್ಧಿಗೊಳಿಸಲಾಗಿದ್ದರೂ ಬೇಸಗೆಯಲ್ಲಿ ಒಂದು ತೊಟ್ಟು ನೀರಿಲ್ಲ. ಹೀಗಾಗಿ ಈ ಬಾವಿ ಇದ್ದರೂ ಪ್ರಯೋಜನಕ್ಕಿಲ್ಲದಂತಾಗಿದೆ.

Advertisement

ಬಾವಿಯಲ್ಲಿ ಸಾಕಷ್ಟು ನೀರು ಸಿಗಬೇಕಾದರೆ 35 ಅಡಿ ಆಳ ಕೊರೆಯ ಬೇಕು ಎಂದು ಬಾವಿ ತೋಡುವ ಮುಂಚೆಯೇ ಆಗ್ರಹಿಸಲಾಗಿತ್ತು. ಆದರೆ ಗುತ್ತಿಗೆದಾರರು 25 ಅಡಿ ಆಳ ಕೊರೆದ ಬಳಿಕ ನೀರು ಸಿಕ್ಕಿತ್ತು. ಹೀಗಾಗಿ ಕಾಮಗಾರಿಯನ್ನು ನಿಲ್ಲಿಸಿದ್ದರು. ಆರಂಭದಲ್ಲಿ ವರ್ಷ ಪೂರ್ತಿ ನೀರು ಸಿಗುತ್ತಿತ್ತು. ಆದರೆ ಕ್ರಮೇಣ ಬೇಸಗೆಯಲ್ಲಿ ಬತ್ತಲಾರಂಭಿಸಿತು. ಈ ಹಿನ್ನೆಲೆಯಲ್ಲಿ ಬಾವಿ ರಿಪೇರಿಗೆ ಮನವಿ ಸಲ್ಲಿಸಲಾಗಿದ್ದರೂ ಆಳ ಹೆಚ್ಚಿಸಲಾಗಿಲ್ಲ. ಹೀಗಾಗಿ ಈ ಭಾಗ ದ ಜನರು ನೀರಿನ ಸಮಸ್ಯೆ ಎದುರಿಸುವಂತಾಗಿದೆ. 68 ಸಾವಿರ ರೂ. ಖರ್ಚು ಮಾಡಿದ್ದರೂ ನೀರು ಸಿಗದೇ ಇರುವುದರಿಂದ ಹಣ ಪೋಲು ಮಾಡಿದಂತಾಗಿದೆ ಎನ್ನುತ್ತಾರೆ ಸ್ಥಳೀಯರು.

ಬಾವಿಯ ಆಳವನ್ನು ಹೆಚ್ಚಿಸಬೇಕು ಎಂದು ಪಂಚಾಯತ್‌ಗೆ ಸ್ಥಳೀಯರು ಸಾಕಷ್ಟು ಬಾರಿ ಮನವಿ ಮಾಡಿದ್ದರು. ಆದರೆ ಪಂಚಾಯತ್‌ನಿಂದ ಆಳ ಹೆಚ್ಚಿಸುವ ಭರವಸೆ ನೀಡಿದ್ದರೂ ಚುನಾವಣೆ ನೀತಿ ಸಂಹಿತೆಯಿಂದಾಗಿ ಕೆಲಸಕ್ಕೆ ಮುಂದಾಗಿಲ್ಲ. ಸದ್ಯಕ್ಕೆ ಪಂಚಾಯತ್‌ ವತಿಯಿಂದ ದಿನ ದಲ್ಲಿ ಅರ್ಧ ಒಂದು ಗಂಟೆ ನೀರು ಬರುತ್ತಿದೆ. ಹೀಗಾಗಿ ಸಮಸ್ಯೆ ಗಂಭೀರ ರೂಪ ತಾಳಿಲ್ಲ. ಆದ ರೆ ಇಷ್ಟೆಲ್ಲ ಖರ್ಚು ಮಾಡಿ ಕೊರೆದ ಬಾವಿ ಮಾತ್ರ ಉಪಯೋಗಕ್ಕಿಲ್ಲದಂತಾಗಿದೆ. ಈ ಬಾವಿಯ ಆಳವನ್ನು 10 ಅಡಿ ಹೆಚ್ಚಿಸಿದರೆ ಖಂಡಿತ ನೀರು ಸಿಗಬಹುದು ಎನ್ನುತ್ತಾರೆ ನೀರಿನ ತಜ್ಞರು.

ಅಡುಗೆ ಅನಿಲವೂ ಸಿಕ್ಕಿಲ್ಲ
ಉಜ್ವಲ ಯೋಜನೆಯಡಿಯಲ್ಲಿ ಬಡವರಿಗೆ ಅಡುಗೆ ಅನಿಲ ವಿತರಿಸುವ ಯೋಜನೆ ಜಾರಿಗೊಳಿಸಲಾಗಿದ್ದು, ಅನೇಕ ಮಂದಿಗೆ ಇದರ ಪ್ರಯೋಜನ ಸಿಕ್ಕಿದೆ. ಆದರೆ ಇಲ್ಲಿನ ನಾಲ್ಕು ಮನೆಯವರಿಗೆ ಕಳೆದ ಹಲವಾರು ವರ್ಷಗಳಿಂದ ಒಟ್ಟು ಏಳು ಬಾರಿ ಮನವಿ ಸಲ್ಲಿಸಿದ್ದರೂ  ಅಡುಗೆ ಅನಿಲ ಸಿಕ್ಕಿಲ್ಲ. ಇದರಿಂದ ಇಂದಿಗೂ ಇಲ್ಲಿನ ನಿವಾಸಿಗಳು ಕಟ್ಟಿಗೆಯಿಂದಲೇ ಅಡುಗೆ ಮಾಡುವಂತಾಗಿದೆ. ಹೀಗಾಗಿ ಹೆಚ್ಚಿನ ನೀರಿನ ಬಳ ಕೆಯೂ ಹೆಚ್ಚಾಗಿದೆ.

 ಬಾವಿ ಅಳ ಹೆಚ್ಚಿಸಬೇಕು
ಸಾಕಷ್ಟು ಖರ್ಚು ಮಾಡಿ ಬಾವಿ ತೆರೆದಿದ್ದು ಬೇಸಗೆಯಲ್ಲಿ ನೀರು ಸಿಗುತ್ತಿಲ್ಲ. ಇನ್ನೂ 10 ಅಡಿ ಆಳ ಕೊರೆದರೆ ಖಂಡಿತ ನೀರು ಸಿಗುವ ಸಾಧ್ಯತೆ ಇದೆ. ಬಾವಿ ರಿಪೇರಿಗಾಗಿ ಮನವಿ ಸಲ್ಲಿಸಲಾಗಿದ್ದು, ನೀರು ಅಗತ್ಯವಾಗಿರುವುದರಿಂದ ಅದರ ಆಳ ಹೆಚ್ಚಿಸಲು ಪಂಚಾಯತ್‌ ಕ್ರಮಕೈಗೊಳ್ಳಬೇಕು. ಅಲ್ಲದೆ ನಮ್ಮಲ್ಲಿನ ನಾಲ್ಕು ಮನೆಯವರು 7 ಬಾರಿ ಮನವಿ ಸಲ್ಲಿಸಿದ್ದರೂ ಅಡುಗೆ ಅನಿಲವನ್ನೂ ವಿತರಿಸಿಲ್ಲ.
– ರವಿ ನಾಡಾಜೆ, ಸ್ಥಳೀಯರು

Advertisement

 ಶೀಘ್ರದಲ್ಲೇ ದುರಸ್ತಿ
ಪಂಚಾಯತ್‌ನಲ್ಲಿ ಎಸ್‌ಸಿಎಸ್‌ಟಿ ಫಂಡ್‌ ಮೀಸಲಿರಿಸಲಾಗಿದ್ದು, ಅದರಲ್ಲಿ ಬಾವಿಯ ದುರಸ್ತಿ ಕಾರ್ಯ ನಡೆ ಸ ಲಾ ಗು ವುದು. ಹೀಗೆ ಮೀಸಲಿಟ್ಟ ಹಣವನ್ನು ದಲಿತರ ಅಭಿವೃದ್ಧಿಗೆ ಬಳಸಲಾಗುತ್ತಿದೆ. ಇತ್ತೀಚೆಗೆ ಚುನಾವಣೆ ನೀತಿ ಸಂಹಿತೆ ಇರುವುದರಿಂದ ಸಭೆ ನಡೆಸಲು ಸಾಧ್ಯವಾಗಿರಲಿಲ್ಲ. ಆದ್ದರಿಂದ  ಸಭೆ ಕರೆದು ಕೂಡಲೇ ಬಾವಿಯ ಆಳ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು.
 - ಮಾಲತಿ, ಗಂಜಿಮಠ ಗ್ರಾ. ಪಂ. ಅಧ್ಯಕ್ಷರು

Advertisement

Udayavani is now on Telegram. Click here to join our channel and stay updated with the latest news.

Next