Advertisement
ಅದರಲ್ಲೂ ಬಾಲ್ಯಕ್ಕೆ ಬಣ್ಣ ತುಂಬಿದ ಮಳೆಯ ನೆನಪುಗಳು. ಗಾಳಿಗೆ ಉಲ್ಟಾ ಹೊಡೆದ ಕೊಡೆ, ತೋಡಿನ ನೀರಿನಲ್ಲಿ ಹರಿ ಬಿಡುವ ಕಾಗದದ ದೋಣಿ, ತೋಡು ದಾಟುವಾಗ ಬೊಳ್ಳದಲ್ಲಿ ಹೋದ ಚಪ್ಪಲಿ, ಮಳೆಯಲ್ಲಿ ಬೇಕಂತಲೇ ಒದ್ದೆಯಾಗಿಕೊಂಡು ಹೋಗಿ ಮೇಷ್ಟ್ರಲ್ಲಿ ಶಾಲೆಗೆ ರಜೆ ಕೇಳಿದ್ದು, ಬರುವ ದಾರಿಯಲ್ಲಿ ಗದ್ದೆಯ ಕೆಸರಿನಲ್ಲೋ, ತೋಡಿನ ನೀರಿನಲ್ಲೋ ಆಟವಾಡುತ್ತಾ ಬಾಲ್ಯದ ದಿನಗಳನ್ನು ಎಷ್ಟು ಚಂದ ವಾಗಿ ಕಳೆದಿದ್ದೆವು… ಈಗ ಬೇಕೆಂದರೂ ಅಂತಹ ದಿನಗಳು ವಾಪಸ್ ಬರಲಾರದು. ಈಗ ಗದ್ದೆ ತೋಡು ದಾಟಿಕೊಂಡು ಶಾಲೆಗೆ ಹೋಗಬೇಕಾದ ಪ್ರಸಂಗಗಳೇ ವಿರಳ.
Related Articles
Advertisement
ಆಹಾ ಹಳ್ಳಿಯ ಬದುಕೇ…
ಯಾಕೆಂದರೆ ಇವೆಲ್ಲವುಗಳಲ್ಲಿ ತೋರಿಕೆಗಳಿಲ್ಲ. ಜನರ ಸಹಜ ಬದುಕಿನ ನಡುವೆ ಪ್ರಕೃತಿಯ ಸಹ ಜತೆಯೂ ಸೇರಿಕೊಂಡು ಆಹಾ ಹಳ್ಳಿಯ ಬದುಕೇ ತಂಪು ಅಂತನ್ನಿಸಿಬಿಡುತ್ತದೆ. ಮಳೆಗೆ ಇಳೆ ತಂಪಾಗಿಬಿಡುವ ಸೊಗಸು, ಒಲೆಯ ಮುಂದೆ ಕುಳಿತು ಒದ್ದೆಯಾದ ಮೈ ಮನಸ್ಸನ್ನು ಬೆಚ್ಚಗಾಗಿಸಿಕೊಳ್ಳುವ ಸುಖ, ಹಬೆಯಾಡುವ ಹಂಡೆ ನೀರಿನ ಸ್ನಾನ, ಪಾಚಿಗಟ್ಟಿದ ಅಂಗಳ, ಹೆಂಚಿನಿಂದ ಝರಿಯಾಗಿ ಇಳಿ ಬೀಳುವ ನೀರು…ಈ ಮಳೆಗಾಲದಲ್ಲಿ ಹಳ್ಳಿಗಳಲ್ಲಿ ಕಾಣಸಿಗುವ ನೋಟಗಳೇ ಸೊಗಸು. ಇದೇ ನೋಟವನ್ನು ನಮ್ಮ ನಗರಗಳಲ್ಲಿ ಕಾಣಸಿಗುವುದು ಅಸಾಧ್ಯ. ಒಂದು ಜೋರು ಮಳೆ ಬಂದರೆ ನಗರವೇ ಮುಳುಗುವಷ್ಟು ನೀರು ಹರಿದುಬರುತ್ತದೆ. ಇಲ್ಲಿ ಚರಂಡಿ ನೀರು ಹರಿಯುವುದನ್ನು ನೋಡಿ ಖುಷಿಪಡಬೇಕೇ ಹೊರತು ಮಳೆಯ ನಿಜ ಸುಖವನ್ನು ಅನುಭವಿಸಲಾಗದು.
ಮಳೆಗಾಲ ಎಂಬ ಬೆರಗು
ಆಕಾಶದಿಂದ ಧುಮ್ಮಿಕ್ಕುವ ನೀರು ಬರಿಯ ನೀರಾಗಿರದೆ ಕೆಲವೊಮ್ಮೆ ಯಾವುದೋ ಕಾಲದ ಆಪ್ತ ಸ್ನೇಹಿತ ಅಚಾನಕ್ ಕಣ್ಣ ಮುಂದೆ ಬಂದುನಿಂತಾಗ ಸಿಗುವಾಗಿನ ಭಾವವನ್ನು ನೀಡಿ ನಮ್ಮನ್ನು ಆವರಿಸುತ್ತದೆ. ನಮ್ಮೊಳಗೊಂದು ಅಳತೆಗೆ ಸಿಗದ ಪುಳಕವನ್ನೆಬ್ಬಿಸಲು ಮಳೆಗೆ ಸಾಧ್ಯ. ಎಳೆಎಳೆಯಾಗಿ ಇಳಿಬೀಳುವ ನೀರು, ಕೊಚ್ಚೆಗಳನ್ನೆಲ್ಲಾ ಕೊಚ್ಚಿಕೊಂಡು ಹೋಗುತ್ತದೆ. ಎಲ್ಲಿಯೋ ಬರಡಾದ ನೆಲದಲ್ಲಿ ಮತ್ತೆ ಚಿಗುರೊಡೆಯಬಲ್ಲ ಭರವಸೆಗೆ ಒರತೆಯಾಗುತ್ತದೆ. ನದಿಯಾಗಿ, ಝರಿಯಾಗಿ ಆಪ್ತವಾಗಿ ಬಿಡುತ್ತದೆ. ಈ ಮಳೆಗಾಲವೂ ಅಂತಹದೊಂದು ಬೆಚ್ಚನೆಯ ಭಾವಗಳ ಗೂಡಾಗಲಿ.
-ಅನುರಾಧಾ ತೆಳ್ಳಾರ್