ಮಳೆ ಅಂದರೆ ನಿರೀಕ್ಷೆ, ಸಂಭ್ರಮ, ಆತಂಕ ಸಮೃದ್ಧಿಯ ಕನಸ್ಸು. ಹಸುರು ಹಾಡಿನ ಪಲ್ಲವಿ ಮಳೆಯಾಟದ ಮೋಜು, ಮೀನಾಟ, ನೀರು ಹಕ್ಕಿಗಳ ತೇಲು ಮುಳುಗಾಟ ರಮ್ಯ ರಮಣೀಯ ನೋಟ. ಕಮಾನು ಕಟ್ಟಿದ ಕಾಮನ ಬಿಲ್ಲು, ಬೇಸಾಯದ ಬಾಳಗೀತೆ, ಕವಿ ಎದೆಯಲ್ಲಿ ಭಾವಗೀತೆಯ ಹುಟ್ಟು, ನದಿ ವಿಲಾಸ ಜೀವನದ ಉಲ್ಲಾಸ ಮಳೆ-ಮಣ್ಣು ಸಮ್ಮಿಲನ, ಪರಿಮಳ ಚೇತನ ಗಾನ. ಮಳೆ ಬಂದರೆ ಬರುವ ರೀತಿಗೆ ಎಷ್ಟೊಂದು ಹೆಸರು, ತುಂತುರು, ಹನಿಮಳೆ, ತಲೆ ಮೇಲಿನ ಹನಿ, ನೆನೆಮಳೆ, ಜೋರು ಮಳೆ, ಗಟ್ಟಿ ಮಳೆ, ಬಿರು ಮಳೆ, ಜಡಿಮಳೆ, ಹುಚ್ಚುಮಳೆ, ಕುಂಭ ವೃಷ್ಟಿ, ಆಲಿಕಲ್ಲು ಮಳೆ ಇನ್ನೂ ನಾನಾ ಹೆಸರುಗಳು ಈ ಮಳೆರಾಯನಿಗೆ.
ಅದೊಂದು ದಿನ ರಾತ್ರಿ. ಹೀಗೆ ಸುಮ್ಮನೆ ಮಹಡಿಯ ಮೇಲೆ ಮಲಗಿದ್ದೆ. ತಂಪಾದ ಗಾಳಿ, ಆಕಾಶದ ಮೇಲೆ ಕಪ್ಪನೆಯ ಮೋಡಗಳು. ಮಳೆಗಾಗಿ ಆಹ್ವಾನ ಕೊಡುತ್ತಿರುವೆಯಾ ಎಂದು ಮೆಲ್ಲಗೆ ಮೋಡದ ಬಳಿ ಕೇಳಿದೆ. ಅದು ಮರು ಮಾತನಾಡದೆ ಅತ್ತ ಇತ್ತ ಚಲಿಸುತ್ತಿತ್ತು. ಈ ತಣ್ಣನೆಯ ಗಾಳಿಗೆ ನನಗೆ ಹೇಗೆ ನಿದ್ದೆ ಬಂತೋ ಗೊತ್ತಿಲ್ಲ. ಮಳೆಯ ಹನಿಯೊಂದು ನನ್ನ ಕೆನ್ನೆ ಮೇಲೆ ಮುತ್ತಿಟ್ಟಿತ್ತು. ಅಯ್ಯೋ ಅದೇನೆಂದು ನೋಡಿದರೆ ಮಳೆಯ ನರ್ತನ ಪ್ರಾರಂಭವಾಗಿತ್ತು. ಮೊಬೈಲ್, ಬಟ್ಟೆ, ನಾನು ಮಳೆಗೆ ಶರಣಾಗಿದ್ದೆವು. ಹೀಗೆ ಮೊದಲ ಮಳೆಯೆಂದರೆ ಎಲ್ಲಿಲ್ಲದ ಸಂಭ್ರಮ. ಖುಷಿ-ಬಿಸಿಲ ಬೇಗೆಯಿಂದ ಕಂಗೆಟ್ಟಿದ್ದ ನಮಗೆ ಮೊದಲ ಮಳೆಯೆಂದರೆ ಹಬ್ಬವೇ ಸರಿ.
ಮೊದಲ ಮಳೆ ಎನ್ನುವುದು ಜೀವನದ ಕೆಲವೊಂದು ಅನಿರೀಕ್ಷಿತ ಘಟನೆಗಳಿಗೆ ಸಾಕ್ಷಿಯಾಗುತ್ತದೆ. ಮೊದಲ ಮಳೆಯ ಸಂಭ್ರಮವನ್ನು ಯಾವತ್ತಿಗೂ ಮರೆಯುವಂಥದ್ದಲ್ಲ. ಕರಾವಳಿ ಕಡೆ ಮಳೆಗಾಲವೆಂದರೆ ಸ್ವರ್ಗವೇ ಭೂಲೋಕಕ್ಕೆ ಬಂದಿಳಿಯುತ್ತದೆ. ಹಸುರಿನಿಂದ ಸದಾ ಕಂಗೊಳಿಸುವ ಬೆಟ್ಟ ಗುಡ್ಡಗಳು, ಪ್ರಕೃತಿಯ ನವಿಲ ನರ್ತನ, ರಸ್ತೆಯ ತುಂಬಾ ಹರಿಯುವ ಕೆಂಪು ನೀರು, ಮಳೆ ಬರುವ ಸಮಯದಲ್ಲಿ ಸವಿಯಲು ಹಲಸಿನ ಹಣ್ಣು, ಬಿಸಿ ಬಿಸಿ ಚಾ ಇವೆಲ್ಲವೂ ಸ್ವರ್ಗಕ್ಕೆ ಮೂರೇ ಗೇಣು ಎಂದೆನಿಸುವಂತೆ ಮಾಡುತ್ತದೆ. ಮಳೆಗಾಲ ಸಂದರ್ಭದಲ್ಲಿ ಸಾಮಾನ್ಯವಾಗಿ ಯಾವಾಗಲೂ ಪರೀಕ್ಷೆ, ಅಸೈನ್ ಮೆಂಟ್ ಎಂದು ತಲೆ ಬಿಸಿ ಇರುತ್ತಿದ್ದ ನಮಗೆ ಈ ಲಾಕ್‌ಡೌನ್ ಸಮಯದಲ್ಲಿ ಮಳೆಗಾಲದಲ್ಲಿ ಮಳೆಯೊಂದಿಗೆ ಎಂಜಾಯ್ ಮಾಡಬಹುದು. ತೌಖೆ¤à ಚಂಡಮಾರುತದಿಂದ ಕರಾವಳಿಗೆ ಮಳೆರಾಯನ
ಆಗಮನ ಸಲ್ಪ ಬೇಗನೆ ಆಗಿದೆ. ಆದ್ದರಿಂದ ಬೇಸಗೆಯಲ್ಲಿ ಮಳೆಯೊಂದಿಗೆ ಸಂತೋಷದಿಂದ ಕಳೆಯಬಹುದಾಗಿದೆ.
ಮಳೆ ಎಂದರೆ ಮೊದಲು ನೆನಪಾಗುವುದೇ ನಮ್ಮ ಬಾಲ್ಯದಲ್ಲಿ ಕಳೆದ ಮಳೆಯೊಂದಿಗಿನ ನೆನಪು. ಮಳೆಯ ಸಂದರ್ಭದಲ್ಲಿ ಬಾಲ್ಯದಲ್ಲಿ ಮಾಡಿದ ಕೀಟಲೆ ಸ್ಮತಿ ಪಟಲದಲ್ಲಿ ಹಾಗೆ ಹಾದು ಹೋಗುತ್ತದೆ. ಮಳೆ ಬರುವಾಗ ಶಾಲೆಗೆ ಯುನಿಫಾರ್ಮ್ನಲ್ಲೇ ಸಂಪೂರ್ಣ ಒದ್ದೆಯಾಗಿ ಶಾಲೆಗೆ ಹೋಗಿದ್ದು ಮನೆಗೆ ಬರುವಾಗ ಯುನಿಫಾರ್ಮ್ಗೆ ಕೆಸರು ಮೆತ್ತಿಸಿಕೊಂಡು ಅಮ್ಮನ ಕೈಯಲ್ಲಿ ಪೆಟ್ಟು ತಿಂದದ್ದು. ಗದ್ದೆಯ ಸಮೀಪ ನೀರಿನಲ್ಲಿ ಮೀನುಗಳನ್ನು ಹಿಡಿದ ಸಂಭ್ರಮ ಇವೆಲ್ಲ ಕೋಟಿ ಕೊಟ್ಟರೂ ಬಾರದ ನೆನಪುಗಳು. ಯಾರ ಬಳಿ ಬೇಕಾದರೂ ಕೇಳಿ ನಿಮ್ಮ ಮೊದಲ ಮಳೆಯ ಖುಷಿಯನ್ನು ಹೇಳಿ ಎಂದು. ಅವರು ಮೊದಲು ಹೇಳುವುದೆ ಬಾಲ್ಯದಲ್ಲಿ ಕಳೆದ ಮಳೆಯೊಂದಿಗಿನ ನೆನಪುಗಳು. ಮಳೆಗಾಲದಲ್ಲಿ ನಮಗೆ ಬಾಲ್ಯದ ತುಂಟಾಟದ ದಿನಗಳನ್ನು ನೆನಪಿಸುತ್ತಾನೆ ಮಳೆರಾಯ.
ತೌಫೀಕ್ ಸಾಣೂರು
ಎಂ.ಪಿ.ಎಂ. ಪ್ರಥಮ ದರ್ಜೆ, ಕಾರ್ಕಳ