Advertisement

ಮಳೆಹಾನಿ ಪರಿಹಾರ ವಿತರಣೆ ಚುರುಕು

07:25 PM May 06, 2019 | mahesh |

ಬೆಳ್ತಂಗಡಿ: ಕಳೆದ ವರ್ಷಕ್ಕಿಂತ ಈ ಬಾರಿ ವಾಡಿಕೆ ಮಳೆ ಕ್ಷೀಣಿಸಿದ್ದರೂ ಎಪ್ರಿಲ್‌ ತಿಂಗಳಲ್ಲಿ ಸುರಿದ ಮಳೆಗೆ ಬಿಸಿಲಿನಿಂದ ಕರಟಿಹೋಗಿದ್ದ ಅಡಿಕೆ ಹಿಂಗಾರದಲ್ಲಿ ಸ್ವಲ್ಪ ಚೇತರಿಕೆ ಕಂಡಿದೆ. ಜನವರಿಯಿಂದ ಮಾರ್ಚ್‌ ಕೊನೇ ವಾರದವರೆಗೆ ಸುಡು ಬೇಸಗೆಯಿಂದ ಕೃಷಿಕರು ನೀರಿಲ್ಲದೆ ಕಂಗೆಟ್ಟಿದ್ದರು. ಎಪ್ರಿಲ್‌ ಮೊದಲ ವಾರವೇ 2 ಮಳೆ ಹಾಗೂ ಮಾಸಾಂತ್ಯದಲ್ಲಿ ಸುರಿದ ಮಳೆಯಿಂದಾಗಿ ತಾಲೂಕಿನೆಲ್ಲೆಡೆ ರೈತರು ಕೊಂಚ ನಿರಾಳವಾಗಿದ್ದಾರೆ.

Advertisement

ಅಂತರ್ಜಲವೂ ಕ್ಷೀಣ
ಈ ಬಾರಿ ಅಂತರ್ಜಲಮಟ್ಟವೂ ಕ್ಷೀಣಿಸಿ ದ್ದರಿಂದ ಬೋರ್‌ವೆಲ್‌ನಿಂದ ಕೃಷಿಗೆ ನೀರು ಬಳಸಲು ಸಮಸ್ಯೆಯಾಗಿ ಕಾಡಿತ್ತು. ಮತ್ತೂಂ ದೆಡೆ ನದಿ ನೀರು ಆಶ್ರಯಿಸಿದ್ದವರಿಗೆ ಅಡಿಕೆ ತೋಟಕ್ಕೆ ನೀರು ಹಾಯಿಸಲಾಗದೆ ಹಿಂಗಾರ ಕರಟಿ ಇಳುವರಿ ಕಡಿಮೆ ಆಗುವ ಆತಂಕ ಎದುರಾಗಿತ್ತು.

3 ಮಳೆಗೆ ಚಿಗುರಿದ ಹಿಂಗಾರ
ಎಪ್ರಿಲ್‌ 2ರಂದು ವಿಪರೀತ ಮಳೆಯಾಗಿದ್ದು, ಪ್ರಥಮ ಮಳೆಯನ್ನು ಎಲ್ಲರೂ ಸ್ವಾಗತಿಸಿದ್ದರು. ಬಳಿಕ ಎ.11 ಹಾಗೂ ಎ.27ರಂದು ಉತ್ತಮ ಮಳೆ ಸುರಿದ ಪರಿಣಾಮ ಕೃಷಿ ಭೂಮಿ ಕೊಂಚ ಸುಧಾರಣೆ ಕಂಡಿದೆ. ವಾರ್ಷಿಕ ಅಡಿಕೆ ಕೊಯ್ಲು ಈಗಾಗಲೇ ಮುಕ್ತಾಯಗೊಂಡಿದೆ. ಮುಂದೆ ಆಗಸ್ಟ್‌ ತಿಂಗಳಿನ ಹೊಸ ಕೊಯ್ಲು ತೆಗೆಯುವವರ ಇಳುವರಿ ಕ್ಷೀಣಿಸುವ ಆತಂಕವನ್ನು ಬೇಸಗೆ ಮಳೆ ಕೊಂಚ ನಿವಾರಿಸಿದಂತಿದೆ.

ಹಾನಿ ಪ್ರಕರಣ ದಾಖಲು
ಅಡಕೆಗೆ ಮಳೆ ಕೊಂಚ ಅನುಕೂಲ ರೀತಿಯಲ್ಲಿ ಒದಗಿ ಬಂದರೂ, ಎಪ್ರಿಲ್‌ ತಿಂಗಳಲ್ಲಿ ಸುರಿದ ಮೂರೇ ಮಳೆಗೆ 9 ಹಾನಿ ಪ್ರಕರಣ ದಾಖಲಾಗಿದೆ. ಈವರೆಗೆ ಪ್ರಕೃತಿ ವಿಕೋಪ ನಿಧಿಯಿಂದ ತಹಶೀಲ್ದಾರ್‌ ಶಿಫಾರಸ್ಸಿನ ಮೇರೆಗೆ ಈಗಾಗಲೇ 58 ಸಾವಿರ ರೂ. ಪರಿಹಾರ ವಿತರಿಸಲಾಗಿದೆ. ಹವಾಮಾನ ಇಲಾಖೆಯ ಅಂಕಿ ಅಂಶ ಪ್ರಕಾರ ಜನವರಿಯಿಂದ ಮೇ 5ರವರೆಗೆ ಬೆಳ್ತಂಗಡಿಯಲ್ಲಿ 86.7ಮಿ.ಮೀ. ವಾಡಿಕೆ ಮಳೆಯಾಗಬೇಕಿದ್ದು, 57.9ಮಿ.ಮೀ. ಮಳೆಯಾಗಿದೆ. ಕೆಲವೆಡೆ ಹಿಂಗಾರ ಒಡೆದಿದ್ದರೂ ಶೇ.50 ಫಸಲು ಬಂದರೂ ಸಾಕು ಎಂಬಂತಾಗಿದೆ.

9 ಮಳೆ ಹಾನಿ ವರದಿ
ತಾಲೂಕಿನಲ್ಲಿ ಎಪ್ರಿಲ್‌ ತಿಂಗಳಲ್ಲಿ ಗಾಳಿ ಮಳೆಗೆ ಕೆಲವೆಡೆ ಹಾನಿ ಸಂಭವಿಸಿದೆ. ಆದರೆ ಹೆಚ್ಚಿನವರು ಪರಿಹಾರಕ್ಕಾಗಿ ಅಲೆದಾಡಬೇಕೆಂದು ಅರ್ಜಿ ಸಲ್ಲಿಸಿಲ್ಲ. ತೆಂಗಿನಮರ, ಅಡಕೆ ಮರ ಬಿದ್ದು, ಮನೆ ಜಾನುವಾರು ಹಾನಿ ಪ್ರಕರಣ ದಾಖಲಾಗಿದೆ. 1 ಜಾನುವಾರು ಹಾನಿ, 2 ಪಕ್ಕಾ ಮನೆ ಭಾಗಶಃ ಹಾನಿ, 5 ಕಚ್ಚಾ ಮನೆ ಭಾಗಶಃ ಹಾನಿ ಹಾಗೂ 2 ಜಾನುವಾರು ಕೊಟ್ಟಿಗೆಗೆ ಹಾನಿಯಾಗಿರುವ ಪ್ರಕರಣಕ್ಕೆ ಪ್ರಕೃತಿ ವಿಕೋಪ ನಿಧಿಯಿಂದ 58,575 ರೂ. ಪರಿಹಾರ ವಿತರಿಸಿದೆ ಎಂದು ತಹಶೀಲ್ದಾರ್‌ ಮಾಹಿತಿ ನೀಡಿದ್ದಾರೆ.

Advertisement

 ದೊಡ್ಡಮಟ್ಟದ ಹಾನಿಯಿಲ್ಲ
ತಾಲೂಕಿನಲ್ಲಿ ಎಪ್ರಿಲ್‌ ತಿಂಗಳಲ್ಲಿ ಗಾಳಿ-ಮಳೆಗೆ 9 ಕಡೆ ಹಾನಿ ಯಾಗಿರುವ ಕುರಿತು ಪರಿಹಾರ ವಿತರಿಸಲಾಗಿದೆ. ಕೃಷಿಗೆ ಸಂಬಂಧಿಸಿ ದೊಡ್ಡಮಟ್ಟದ ಹಾನಿ ವರದಿಯಾಗಿಲ್ಲ. ಅಕಾಲಿಕ ಮಳೆಗೆ ಹಾನಿ ಸಂಭವಿಸಿದಲ್ಲಿ ಪರಿಹಾರಕ್ಕಾಗಿ ಮನವಿ ಅರ್ಜಿ ಸಲ್ಲಿಸಿದಲ್ಲಿ ಕ್ರಮ ಕೈಗೊಳ್ಳಲಾಗುವುದು.
-ಗಣಪತಿ ಶಾಸ್ತ್ರಿ, ತಹಶೀಲ್ದಾರ್‌

ಹಿಂಗಾರ ಉಳಿದರೆ ಪ್ರಯೋಜನ
ನೀರಿಲ್ಲದೆ ಆಶ್ರಯಿಸಿದ್ದವರಿಗೆ ಮಳೆ ಸ್ವಲ್ಪ ಮಟ್ಟಿಗೆ ಹರ್ಷ ನೀಡಿದೆ. ಆದರೆ ಹಿಂಗಾರ ಆಗಸ್ಟ್‌ ವರೆಗೆ ಉಳಿದಲ್ಲಿ ಸೆಪ್ಟಂಬರ್‌ನಲ್ಲಿ ಅಡಿಕೆ ಕೊಯ್ಲು ತೆಗೆಯಬಹುದು. ಇಲ್ಲದೇ ಹೋದಲ್ಲಿ ಶೇ.50 ಅಡಿಕೆ ಕೃಷಿ ಕೈಕೊಡಲಿದೆ.
-ಕಾಂತಪ್ಪ ಗೌಡ, ಕೃಷಿಕ, ಮಡಂತ್ಯಾರು

- ಚೈತ್ರೇಶ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next