ಹರಿಹರ: ಭೂಮಿಯ ಮೇಲೆ ಬೀಳುವ ಮಳೆ ನೀರು ಉಳಿಸಿಕೊಂಡು ಸದ್ಬಳಕೆ ಮಾಡಿಕೊಂಡರೆ ಸಾಕು, ನೀರಿನ ಸಮಸ್ಯೆಯೇ ಇರುವುದಿಲ್ಲ ಎಂದು ಫೌಂಡೇಷನ್ ಫಾರ್ ಇಕಾಲಜಿಕಲ್ ಸೆಕ್ಯುರಿಟಿ (ಎಫ್‌ಇಎಸ್) ಜಿಲ್ಲಾ ಸಂಯೋಜಕ ಎಚ್.ಆರ್. ರಾಜು ಹೇಳಿದರು.
ಜಿಲ್ಲಾ ಪಂಚಾಯಿತಿ ವತಿಯಿಂದ ತಾಲೂಕಿನ ಕೊಂಡಜ್ಜಿ ಗ್ರಾಮದಲ್ಲಿ ಗ್ರಾಮಸ್ಥರಿಗೆ ಹಾಗೂ ತಾಂತ್ರಿಕ ಸಹಾಯಕ ಅಭಿಯಂತರರು ಹಾಗೂ ಬೇರ್‌ಫೂಟ್ ಟೆಕ್ನಿಷಿಯನ್ಸ್‌ಗೆ ಆಯೋಜಿಸಿದ್ದ ಉದ್ಯೋಗ ಖಾತ್ರಿ ಯೋಜನೆಯ ಅಂತರ್ಜಲ ಯೋಜನೆಯಡಿ ದಿಣ್ಣೆಯಿಂದ ತಗ್ಗು ಪ್ರದೇಶದವರೆಗೆ ಜಲಾನಯನ ಮಾದರಿಯಲ್ಲಿ ಯೋಜನೆ ತಯಾರಿಕೆ ಕುರಿತ ಪ್ರಾಯೋಗಿಕ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮಳೆಗಾಲದಲ್ಲಿ ಬೀಳುವ ಮಳೆನೀರನ್ನು ನೆಲಕ್ಕೆ ಇಂಗಿಸುವುದು, ಚೆಕ್‌ಡ್ಯಾಂ, ಕೃಷಿಹೊಂಡ, ಗೋಕಟ್ಟೆ ಇತ್ಯಾದಿ ಕೆರೆ ಕಟ್ಟೆ ನಿರ್ಮಿಸಿ ಸಂಗ್ರಹಿಸಿಕೊಂಡರೆ ಅಂತರ್ಜಲ ಹೆಚ್ಚುವುದಲ್ಲದೆ ವರ್ಷಪೂರ್ತಿ ನೀರು ಲಭ್ಯವಿರುತ್ತದೆ.
ಹೀಗೆ ನೈಸರ್ಗಿಕ ವಿಧಾನದಲ್ಲಿ ನೀರು ಸಂಗ್ರಹಿಸುವ ಬದಲು ನೂರಾರು ಕಿಮೀ ದೂರದ ನದಿಯಿಂದ ಪಂಪ್ ಮಾಡಿ ಕೃತಕವಾಗಿ ಕೆರೆ ತುಂಬಿಸುವುದು ಅವೈಜ್ಞಾನಿಕ ಹಾಗೂ ವೆಚ್ಚದಾಯಕ ಎಂದು ಪ್ರತಿಪಾದಿಸಿದರು. ಕೊಳವೆ ಬಾವಿ ಪುನಶ್ಚೇತನ, ಜಮೀನುಗಳ ಮಣ್ಣಿನ ಸವಕಳಿ ತಡೆಯುವುದು, ಕೆರೆಗಳಿಗೆ ನೀರು ಹರಿಸುವ ಮಾರ್ಗದ ಹಳ್ಳಗಳ ಜಂಗಲ್, ಹೂಳು ತೆರೆಸುವುದು ನೀರಿನ ಸದ್ಬಳಕೆಯ ಪ್ರಮುಖ ಮಾರ್ಗಗಳಾಗಿವೆ. ರೈತರು ಇಂತಹ ಯೋಜನೆಗಳಿಗೆ ಸ್ವಂತ ಹಣ ಖರ್ಚು ಮಾಡಬೇಕಿಲ್ಲ. ಉದ್ಯೋಗ ಖಾತ್ರಿ ಅನುದಾನ ಬಳಸಿಕೊಳ್ಳಬಹುದು. ತಜ್ಞರ ಸಲಹೆ ಪಡೆದು ಆಯಾ ಗ್ರಾಮ ಪಂಚಾಯಿತಿ, ತಾಂತ್ರಿಕ ಸಹಾಯಕ ಎಂಜಿನಿಯರ್ ಕಾಮಗಾರಿ ಕುರಿತು ಕ್ರಿಯಾ ಯೋಜನೆ ಸಿದ್ಧಗೊಳಿಸಿದರೆ ಕಣ್ಣ ಮುಂದೆ ಸಾಗಿ ಹೋಗುವ ಮಳೆ ನೀರನ್ನು ನಮ್ಮ ಜಮೀನುಗಳಲ್ಲೆ ಇರುವಂತೆ ಮಾಡಬಹುದೆಂದು ತಿಳಿಸಿದರು. ಜಿಲ್ಲಾ ಸಂಚಾಲಕ ಪ್ರಕಾಶ ಲಂಬಿ ಮಾತನಾಡಿ, ಜಮೀನಿನ ಮಣ್ಣು ಮಳೆ ನೀರಿನೊಂದಿಗೆ ಹರಿದು ಹೋಗದಂತೆ ತಡೆಯಬೇಕು.
ಅದಕ್ಕಾಗಿ ಸೂಕ್ತ ಜಾಗದಲ್ಲಿ ಬಾಂದ್‌ಗಳನ್ನು ನಿರ್ಮಿಸಬೇಕು. ಮಣ್ಣಿನ ಸವಕಳಿ ತಡೆಯಲು ಮರ, ಗಿಡ ಬೆಳೆಸಬೇಕು. ಮುಂಚಿನಂತೆ ಈಗ ಕೆರೆ, ಕಟ್ಟೆಗಳು ತುಂಬದಿರಲು ಮಳೆ ನೀರು ಸಾಗಿ ಬರುವ ಮಾರ್ಗಗಳು ಮುಚ್ಚಿರುವುದೇ ಕಾರಣ. ಜಂಗಲ್, ಹೂಳು ತೆರವುಗೊಳಿಸಿದರೆ ಅಂತಹ ಕೆರೆ, ಕಟ್ಟೆಗಳು ಮುಂಚಿನಂತೆ ಮತ್ತೆ ಮೈದುಂಬುತ್ತವೆ ಎಂದರು. ಗ್ರಾಪಂ ಅಧ್ಯಕ್ಷ ಗಂಗಾಧರ ಎಚ್. ಉದ್ಘಾಟಿಸಿ ಮಾತನಾಡಿ, ಉದ್ಯೋಗ ಖಾತ್ರಿ ಯೋಜನೆಯಲ್ಲಿ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳ ವ್ಯಾಪ್ತಿಯಲ್ಲಿ ಈ ಯೋಜನೆ ಅಳವಡಿಸಿಕೊಂಡು ಮಳೆ ನೀರನ್ನು ಸದ್ಬಳಕೆ ಮಾಡಿಕೊಳ್ಳಲಾಗುವುದೆಂದು ಹೇಳಿದರು. ಗ್ರಾಪಂ ಉಪಾಧ್ಯಕ್ಷೆ ಕರಿಯಮ್ಮ, ಜಿಪಂ ಎನ್‌ಆರ್‌ಡಿಎಂಎಸ್ ಸಂಯೋಜಕ ಆನಂದ್, ಜಗಳೂರಿನ ತಾಂತ್ರಿಕ ಸಿಬ್ಬಂದಿ ಹರ್ಷಾ, ಪಿಡಿಒ ರಾಮಚಂದ್ರಪ್ಪ ಟಿ.ಪಿ., ಕಾರ್ಯದರ್ಶಿ ನಟರಾಜ್ ಹಾಗೂ ಗ್ರಾಪಂ ಸದಸ್ಯರು ಇದ್ದರು.