ಬೆಂಗಳೂರು: ಮೂರು ವರ್ಷಗಳ ನಂತರ ಈಡನ್ ಗಾರ್ಡನ್ಸ್ ನಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಬ್ಯಾಟಿಂಗ್ ಸದ್ದು ಅಬ್ಬರಿಸಲಿದೆ. ಐಪಿಎಲ್ 2022ರ ಪ್ಲೇಆಫ್ ನ ಮೊದಲ ಪಂದ್ಯ ಮಂಗಳವಾರ ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಗುಜರಾತ್ ಟೈಟಾನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ಮುಖಾಮುಖಿಯಾಗಲಿವೆ.
ಪ್ಲೇ ಆಫ್ ಪಂದ್ಯಕ್ಕಾಗಿ ಬಿಸಿಸಿಐ ಸಕಲ ಸಿದ್ದತೆ ಮಾಡಿದೆ. ಆದರೆ, ಪಂದ್ಯಕ್ಕೂ ಮುನ್ನ ಸಂಪೂರ್ಣ ಸಿದ್ಧಗೊಂಡಿದ್ದ ಕ್ರೀಡಾಂಗಣ ಶನಿವಾರ ಭಾರೀ ಬಿರುಗಾಳಿ ಹಾಗೂ ಧಾರಾಕಾರ ಮಳೆಗೆ ಸಿಲುಕಿದ್ದು, ಇಲ್ಲಿನ ವ್ಯವಸ್ಥೆ ಹದಗೆಟ್ಟಿದೆ.
ಇದನ್ನೂ ಓದಿ:ರೋಹಿತ್ ಶರ್ಮಾಗೆ ಬ್ರೇಕ್ ಕೊಟ್ಟಿದ್ಯಾಕೆ? ಇದು ಅನಗತ್ಯ: ರವಿ ಶಾಸ್ತ್ರಿ
ಈಡನ್ ಗಾರ್ಡನ್ಸ್ ಸ್ಟೇಡಿಯಂನಲ್ಲಿ ಪ್ಲೇಆಫ್ ಪಂದ್ಯಕ್ಕೆ ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ. ಪ್ಲೇಆಫ್‌ಗಾಗಿ ಮಾತ್ರ ಕ್ರೀಡಾಂಗಣದಲ್ಲಿ ವಿಶೇಷ ಹೊದಿಕೆಯನ್ನು ಹಾಕಲಾಗಿತ್ತು, ಆದರೆ ಶನಿವಾರ ಸಂಜೆ ಗುಡುಗು ಸಹಿತ ಮಳೆಯಿಂದಾಗಿ ಇಡೀ ಹೊದಿಕೆ ಹಾರಿಹೋಗಿ ಮೈದಾನವು ಒದ್ದೆಯಾಗಿದೆ. ಪ್ರೇಕ್ಷಕರ ಗ್ಯಾಲರಿಯಲ್ಲಿಯೂ ಮೇಲ್ಚಾವಣಿಗಳು ಕುಸಿದು ಬಿದ್ದಿವೆ. ಗಾಳಿಯ ರಭಸಕ್ಕೆ ಪ್ರೆಸ್ ಬಾಕ್ಸ್‌ನ ಗಾಜಿನ ಕಿಟಕಿಯೂ ಒಡೆದಿದೆ. ಕೋಲ್ಕತ್ತಾದಲ್ಲಿ ಶನಿವಾರ ಸುರಿದ ಧಾರಾಕಾರ ಮಳೆಯ ನಂತರ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಈಡನ್ ಗಾರ್ಡನ್ಸ್‌ಗೆ ಭೇಟಿ ನೀಡಿದ್ದರು. ಮಳೆ ನಿಂತ ಕೂಡಲೇ ಕವರ್ ಅಳವಡಿಸಲಾಯಿತು.
ಪ್ಲೇಆಫ್ ಗೆ ಪ್ರವೇಶಿಸಿರುವ ಆಟಗಾರರು ಈಗಾಗಲೇ ಕೋಲ್ಕತ್ತಾ ತಲುಪಿದ್ದು, ಅದರ ಖುಷಿ ಸಂಭ್ರವನ್ನು ಸಾಮಾಜಿಕ ಜಾಲತಾಣ ಕೂ ನಲ್ಲಿ ಹಂಚಿಕೊಂಡಿದ್ದಾರೆ. ಗುಜರಾತ್ ಟೈಟಾನ್ಸ್‌ನ ಆರಂಭಿಕ ಆಟಗಾರ ವೃದ್ಧಿಮಾನ್ ಸಹಾ, ಬಹಳ ಸಮಯದ ನಂತರ ಕೋಲ್ಕತ್ತಾಗೆ ಹೋಗುತ್ತಿರುವ ಬಗ್ಗೆ ಕೂ ಆಪ್ ಮೂಲಕ ತಮ್ಮ ಉತ್ಸಾಹ ವ್ಯಕ್ತಪಡಿಸಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಟಗಾರ ವಿರಾಟ್ ಕೊಹ್ಲಿ ಕೋಲ್ಕತ್ತಾ ಪ್ರಯಾಣದ ಬಗ್ಗೆ ಕೂ ಪೋಸ್ಟ್ ಮಾಡುವ ಮೂಲಕ ಮಾಹಿತಿ ನೀಡಿದ್ದಾರೆ.
ಈ ಬಾರಿಯ ಲೀಗ್ ಪಂದ್ಯಗಳು ಮುಂಬೈ ಮತ್ತು ಪುಣೆಯಲ್ಲಿ ನಡೆದಿದ್ದರೆ, ಪ್ಲೇಆಫ್ ಪಂದ್ಯಗಳು ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮತ್ತು ಅಹಮದಾಬಾದ್ ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ. ಮಂಗಳವಾರ ಮತ್ತು ಬುಧವಾರದಂದು ಸತತ ಎರಡು ಪಂದ್ಯಗಳು ಈ ಮೈದಾನದಲ್ಲಿ ನಡೆಯಲಿವೆ. ಮೊದಲ ಪಂದ್ಯ ಗುಜರಾತ್ ಟೈಟಾನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವೆ ಮೇ 24 ರಂದು ನಡೆಯಲಿದೆ. ಮೇ 25 ರಂದು ಲಕ್ಮೋ ಸೂಪರ್ ಜೈಂಟ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಎದುರಾಳಿಯಾಗಲಿದೆ.
ಕ್ವಾಲಿಫೈಯರ್ 2 ಮತ್ತು ಫೈನಲ್ ಪಂದ್ಯ ಕ್ರಮವಾಗಿ ಮೇ 27 ಮತ್ತು 29ರಂದು ಅಹಮದಾಬಾದ್ ನಲ್ಲಿ ನಡೆಯಲಿದೆ.