ಎಚ್.ಡಿ.ಕೋಟೆ: ತಾಲೂಕಿನ ವಿವಿಧೆಡೆ ಬಿದ್ದ ಆಲಿಕಲ್ಲು ಮಳೆಯಿಂದ ನೂರಾರು ಎಕರೆ ಬೆಳೆ ನಾಶವಾಗಿದೆ. ಅಲ್ಲದೆ, ಈ ಮಳೆ ವರ್ಷಾರಂಭದ ಬಿತ್ತನೆ ಕಾರ್ಯಕ್ಕೆ ಅನುಕೂಲ ಮಾಡಿಕೊಟ್ಟಿದೆ. ಗಾಳಿ- ಮಳೆ ಸುಮಾರು 2 ಗಂಟೆಗಳ ಕಾಲ ಸುರಿದಿದೆ. ಮಳೆ ಮಾತ್ರ ಆಗಿದ್ದರೆ ರೈತರು ಬೆಳೆದಿದ್ದ ಬೆಳೆಗೆ ತೊಂದರೆಯಾಗುತ್ತಿರಲಿಲ್ಲ. ಆಲಿಕಲ್ಲು ಮಳೆಗೆ ಮರ ಗೆಣಸು, ಬಾಳೆ, ಮುಸುಕಿನ ಜೋಳ ಸೇರಿದಂತೆ ಇತರ ಬೆಳೆಗಳು ನಾಶವಾಗಿದೆ.
ಬೇಸಿಗೆಯಲ್ಲಿ ಸಾಲ ಮಾಡಿ ಬೆಳೆದಿದ್ದ ಬೆಳೆ ಇನ್ನೇನು ಕೈ ಸೇರುತ್ತದೆ ಅನ್ನುವ ಆಶಾಭಾವನೆಯಲ್ಲಿದ್ದ ಕೆ.ಜಿ.ಹಳ್ಳಿ, ಆನಗಟ್ಟಿ, ಲಕ್ಷ್ಮಿಪುರ, ಶೀರನಹುಂಡಿ, ನೂರಲಕುಪ್ಪೆ, ಅಂತರಸಂತೆ ಅಕ್ಕಪಕ್ಕದ ರೈತರಲ್ಲಿ ನಿರಾಶೆ ಮೂಡಿದ್ದು, ನಷ್ಟವಾಗಿರುವ ಬೆಳೆಗೆ ಸರ್ಕಾರ ಪರಿಹಾರ ನೀಡುವಂತೆ ರೈತರು ಆಗ್ರಹಿಸಿದ್ದಾರೆ.
ಹಾರಿಹೋದ ಮನೆಗಳ ಛಾವಣಿ: ತಾಲೂಕಿನ ಶೀರನಹುಂಡಿ ಗ್ರಾಮದ ಹಲವು ಮನೆಗಳ ಛಾವಣಿ ಗಾಳಿಗೆ ಸಿಲುಕಿ ಹಾರಿಹೋಗಿವೆ. ಗಾಳಿ ರಭಸಕ್ಕೆ ಮನೆ ಹೆಂಚುಗಳು ನೆಲಕ್ಕುರುಳಿ ಚೂರುಗಳಾಗಿವೆ. ಗ್ರಾಮದಲ್ಲಿ ಬಹುತೇಕ ಮನೆಗಳು ಶಿಥಿಲಾವಸ್ಥೆ ತಲುಪಿದ್ದು, ಗೋಡೆಗಳು ಬಿರುಕು ಬಿಟ್ಟವೆ. ಮಳೆ ಆರಂಭ ಗೊಳ್ಳುತ್ತಿದ್ದಂತೆಯೇ ಮನೆಯಲ್ಲಿ ರಾತ್ರಿ ವೇಳೆ ಆಕಸ್ಮಿಕವಾಗಿ ಮನೆಗಳ ಗೋಡೆ ಕುಸಿದು ಬಿದ್ದರೆ ಜೀವಹಾನಿಯಾಗುವ ಸಾಧ್ಯತೆಗಳಿವೆ. ಸರ್ಕಾರದಿಂದ ಮನೆಗಳ ನಿರ್ಮಾಣಕ್ಕೆ ಆಯ್ಕೆ ಮಾಡುವಂತೆ ಗ್ರಾಪಂ ಸದಸ್ಯರಲ್ಲಿ ಮನವಿ ಮಾಡಿಕೊಂಡರೆ, ಇಂತಿಷ್ಟು ಹಣ ನೀಡಿದವರಿಗೆ ಮಾತ್ರ ಸರ್ಕಾರದ ಯೋಜನೆ ಸಿಕ್ಕಿದೆ. ಬಡಜನತೆಗೆ ಸಿಕ್ಕಿಲ್ಲ ಎನ್ನುವ ಆರೋಪ ಕೇಳಿ ಬರುತ್ತಿದೆ. ಬುಧವಾರ ಬಿತ್ತನೆ ಕಾರ್ಯದಲ್ಲಿ ರೈತರು
ತೊಡಗಿಸಿಕೊಂಡಿದ್ದಾರೆ.