ಮಡಿಕೇರಿ : ಪ್ರವಾಹ ಮತ್ತು ಭೂ ಕುಸಿತಕ್ಕೆ ಸಿಲುಕಿ ಮದೆನಾಡು ಗ್ರಾಮ ಪಂಚಾಯತಿ ವ್ಯಾಪ್ತಿಗೆ ಒಳಪಡುವ ಉದ್ದಮೊಟ್ಟೆ ಗ್ರಾಮದಲ್ಲಿ ಮೂಲಭೂತ ವ್ಯವಸ್ಥೆಗಳೇ ಭೂ ಸಮಾಧಿಯಾಗಿದೆ. ಪ್ರಕೃತಿ ವಿಕೋಪ ಘಟಿಸಿ ಏಳು ತಿಂಗಳು ಕಳೆದರೂ ಜಿಲ್ಲಾಡಳಿತ ಸೂಕ್ತ ಸ್ಪಂದನೆ ತೋರಿಲ್ಲ ಎಂದು ಆರೋಪಿಸಿ ಅಲ್ಲಿನ ನಿವಾಸಿಗಳು ಪ್ರತಿಭಟನೆ ನಡೆಸಿದರು. ಪ್ರವಾಹ ಮತ್ತು ಭೂ ಕುಸಿತದಿಂದ ಛಿದ್ರವಾಗಿರುವ ಗ್ರಾಮದ ಸಂಪರ್ಕ ಸೇತುವೆಯನ್ನು ಪನರ್ ನಿರ್ಮಿಸಿ ರಸ್ತೆ ಸಂಚಾರವನ್ನು ಸುಗಮಗೊಳಿಸಬೇಕೆಂದು ಒತ್ತಾಯಿಸಿರುವ ಉದ್ದಮೊಟ್ಟೆ ನಿವಾಸಿಗಳು, ತಪ್ಪಿದಲ್ಲಿ ಲೋಕಸಭಾ ಚುನಾವಣೆಯಲ್ಲಿ ಸಾಮೂಹಿಕವಾಗಿ ಮತದಾನವನ್ನು ಬಹಿಷ್ಕರಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಉದ್ದಮೊಟ್ಟೆ ಗ್ರಾಮದಲ್ಲಿ ಪ್ರತಿಭಟನೆ ನಡೆಸಿದ ಸಂತ್ರಸ್ತ ಗ್ರಾಮಸ್ಥರು, ಸರಕಾರ ಮತ್ತು ಜಿಲ್ಲಾಡಳಿತದ ವಿರುದ್ದ ಅಸಮಧಾನ ವ್ಯಕ್ತಪಡಿಸಿದರು. ರಾಜ್ಯ ಸರಕಾರ ಮತ್ತು ಕೊಡಗು ಜಿಲ್ಲಾಡಳಿತ ಉದ್ದಮೊಟ್ಟೆ ಗ್ರಾಮವನ್ನು ಪರಿಹಾರ ಕಾಮಗಾರಿಯಲ್ಲಿ ನಿರ್ಲಕ್ಷಿÂಸಿದೆ ಎಂದು ಆರೋಪಿಸಿದ ಗ್ರಾಮಸ್ಥರು, ಸರಕಾರ ಮತ್ತು ಜಿಲ್ಲಾಡಳಿತದ ವಿರುದ್ದ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಷ ವ್ಯಕ್ತಪಡಿಸಿದರು.
ಪ್ರಕೃತಿ ವಿಕೋಪದಿಂದ ಮನೆ, ಆಸ್ತಿ ಕಳೆದುಕೊಂಡವರಿಗೆ ಮತ್ತು ಹಾನಿ ಸಂಭವಿಸಿದ ಬಹುತೇಕ ಪ್ರಕರಣಗಳಲ್ಲಿ ಇಂದಿಗೂ ಪರಿಹಾರ ದೊರಕಿಲ್ಲ ಎಂದು ಆರೋಪಿಸಿದ ಪ್ರತಿಭಟನಾಕಾರರು, ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರೂ ಯಾವುದೇ ಸ್ಪಂದನೆ ತೋರುತ್ತಿಲ್ಲ ಎಂದು ಆಕ್ರೋಷ ಹೊರಗೆಡವಿದರು. ಇದೀಗ ಮತ್ತೂಂದು ಮಳೆಗಾಲ ಸಮೀಪಿಸುತ್ತಿದ್ದು, ಮದೆನಾಡು ವ್ಯಾಪ್ತಿಯ ಗ್ರಾಮಸ್ಥರಲ್ಲಿ ಮತ್ತಷ್ಟು ಆತಂಕದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ತಿಳಿಸಿದರು.
ಕಿರಿಕಿಲ್, ಜೋಡುಪಾಲ, ಉದ್ದಮೊಟ್ಟೆ, ಗ್ರಾಮಗಳ ಜನರ ಸಮಸ್ಯೆಗಳ ಪರಿಹಾರಕ್ಕೆ ಆಡಳಿತ ವ್ಯವಸ್ಥೆ ಮತ್ತು ಚುನಾಯಿತ ಜನಪ್ರತಿನಿಧಿಗಳು ತಕ್ಷಣವೇ ಗಮನ ಹರಿಸಬೇಕು. ತಪ್ಪಿದ್ದರೆ ಮುಂದಿನ ಚುನಾವಣೆ ಬಹಿಷ್ಕರಿಸಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.