ದಕ್ಷಿಣ ಕನ್ನಡ-ಉಡುಪಿ ಜಿಲ್ಲೆಗಳಲ್ಲಿ ವರ್ಷದಿಂದ ವರ್ಷಕ್ಕೆ ನೀರಿನ ಕೊರತೆ ಭೀಕರ ಸಮಸ್ಯೆಯ ರೂಪ ತಳೆಯುತ್ತಿರುವುದಂತೂ ಸತ್ಯ. ಈ ಹಿನ್ನೆಲೆಯಲ್ಲಿ ಯಾಕೆ ಹೀಗಾಗುತ್ತಿದೆ? ಎಂದು ಪರಿಶೀಲಿಸುವ ಪ್ರಯತ್ನ ಉದಯವಾಣಿಯದ್ದು. ಸುಂದರ ನಾಳೆಗಳಿಗೆ ಜಿಲ್ಲೆಗಳನ್ನು ಜನಪ್ರತಿನಿಧಿಗಳನ್ನು, ಜನರನ್ನು ಸಜ್ಜುಗೊಳಿಸುವ ಸರಣಿ ಇಂದಿನಿಂದ.
ಬೆಂಗಳೂರು: ಮುಂಗಾರು ಮಳೆ ಪ್ರಮಾಣದಲ್ಲೇ ಇಳಿಕೆಯಾಗುತ್ತಿರುವುದು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿನ ನೀರಿನ ಕೊರತೆ ಹೆಚ್ಚಿಸಿದೆ. ಒಂದು ಶತಮಾನದಲ್ಲಿ ಸರಾಸರಿ ಶೇ. 5ರಿಂದ 6ರಷ್ಟು ಮಳೆ ಕುಸಿತ ದಾಖಲಾಗಿದೆ.
ಈ ಸಂಬಂಧ 1901ರಿಂದ 2008ರ ವರೆಗೆ ರಾಜ್ಯದಲ್ಲಿ ಬಿದ್ದ ಮಳೆ ಪ್ರಮಾಣವನ್ನು ವಿಶ್ಲೇಷಿಸಿರುವ ಹವಾಮಾನ ತಜ್ಞರು, ಹಾಸನ ಮತ್ತು ಉತ್ತರ ಕನ್ನಡ ಹೊರತುಪಡಿಸಿದರೆ ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ವಾರ್ಷಿಕ ಮಳೆ ಪ್ರಮಾಣ ಇಳಿಮುಖವಾಗುತ್ತಿದೆ. ಅದರಲ್ಲೂ ಉಡುಪಿ, ದಕ್ಷಿಣ ಕನ್ನಡದ ಆಯ್ದ ಕಡೆಗಳಲ್ಲಿ ಮುಂಗಾರು ಮಳೆಯೇ ಇಳಿಕೆ ಆಗುತ್ತಿದೆ.
ರಾಜ್ಯದ ಒಟ್ಟಾರೆ ಮಳೆಯ ಪದ್ಧತಿಯನ್ನು ಅವಲೋಕಿಸಿದರೆ, ಶೇ. 3-4ರಷ್ಟು ಹೆಚ್ಚಳ ಆಗಿದೆ. ಆದರೆ ಪಶ್ಚಿಮ ಘಟ್ಟದ ತಪ್ಪಲಿನಲ್ಲಿರುವ ಕರಾವಳಿಯಲ್ಲಿ ಮಳೆ ಪ್ರಮಾಣ ಇಳಿಕೆಯಾಗಿದೆ. ಉಡುಪಿ, ದ.ಕ. ಜಿಲ್ಲೆಗಳಲ್ಲಿ ಕೃಷಿ ಮತ್ತು ತೋಟಗಾರಿಕೆ ಪ್ರದೇಶ ಗಮನಾರ್ಹ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಹಾಗಾಗಿ ಮೋಡಗಳನ್ನು ಹಿಡಿದಿಡುವ ಮರಗಳ ಸಂಖ್ಯೆ ಘಟ್ಟ ಪ್ರದೇಶದಲ್ಲಿ ಕಡಿಮೆಯಾಗುತ್ತಿದೆ. ಆ ಮೋಡಗಳು ರಾಜ್ಯದ ದಕ್ಷಿಣ ಮತ್ತು ಉತ್ತರ ಒಳನಾಡಿನ ಕಡೆಗೆ ಚಲಿಸಿ ಅಧಿಕ ಮಳೆ ಸುರಿಸುತ್ತಿವೆ ಎನ್ನುತ್ತಾರೆ ವಿಜ್ಞಾನಿಗಳು.
ಏಕೆಂದರೆ, ‘ಕರಾವಳಿಯಲ್ಲಿ ಈಗ ಎರಡು ರೀತಿಯಲ್ಲಿ ಒತ್ತಡ ಹೆಚ್ಚುತ್ತಿದೆ. ಒಂದೆಡೆ ಹೆಚ್ಚುತ್ತಿರುವ ಜನಸಂಖ್ಯೆ, ಅದಕ್ಕೆ ಅನುಗುಣವಾಗಿ ಆಹಾರ ಪೂರೈಕೆಗಾಗಿ ಕಾಡು ಕಡಿದು ಕೃತಕ ಕ್ರಮಗಳಲ್ಲಿ ನೀರು ಸಂಗ್ರಹಿಸಿ ಬಳಸುತ್ತಿರುವುದು ಮತ್ತು ನೀರಿನ ಬಳಕೆ ದ್ವಿಗುಣಗೊಂಡಿರುವುದರ ಜತೆಗೆ ಇಳಿಕೆ ಮಳೆ ಪ್ರಮಾಣ ನೀರಿನ ಕೊರತೆಯ ಸ್ವರೂಪ ಪಡೆದು ಕಾಡತೊಡಗಿದೆ. ಸರಕಾರದ ಯೋಜನಾ ಇಲಾಖೆ ವ್ಯಾಪ್ತಿಯಲ್ಲಿ ಬರುವ ಆರ್ಥಿಕ ಮತ್ತು ಸಾಂಖ್ಯೀಕ ವಿಭಾಗ ಆ ಭಾಗದಲ್ಲಿ ಅಳವಡಿಸಿದ ಮಳೆಯ ಮಾಪನಗಳಲ್ಲಿ ಕಳೆದ ನೂರು ವರ್ಷಗಳಲ್ಲಿ ದಾಖಲಾದ ಮಳೆಯ ಪ್ರಮಾಣವನ್ನು ಲೆಕ್ಕಹಾಕಿ, ವಾಡಿಕೆಯೊಂದಿಗೆ ತಾಳೆ ಹಾಕಿದಾಗ ಈ ಅಂಶ ಬೆಳಕಿಗೆಬಂದಿದೆ’ ಎನ್ನುತ್ತಾರೆ ಕೃಷಿ ಹವಾಮಾನ ತಜ್ಞ ಡಾ| ಎಂ.ಬಿ. ರಾಜೇಗೌಡ. ಕಳೆದ ಹತ್ತು ವರ್ಷಗಳ ಅಂಕಿ-ಅಂಶಗಳಲ್ಲೂ ಮುಂಗಾರಿನಲ್ಲಿ ಕರಾವಳಿ ಭಾಗದಲ್ಲಿ ಮಳೆ ಏರುಪೇರು ಆಗಿದೆ.
ಮುಖ್ಯವಾಗಿ ಭತ್ತ, ಅಡಿಕೆ, ಕಾಫಿ, ಕಾಳುಮೆಣಸು ಬೆಳೆಯುವುದು ಹೆಚ್ಚಾಗಿದೆ. ಒಂದು ಕೆ.ಜಿ. ಭತ್ತ ಬೆಳೆಯಲು ಮೂರೂವರೆಯಿಂದ ನಾಲ್ಕು ಸಾವಿರ ಲೀ. ನೀರು ಪೋಲಾಗುತ್ತದೆ. ಈ ಮೊದಲು ಮರ ಗಿಡಗಳ ಕಾರಣದಿಂದ ಉದ್ದೇಶಿತ ಪ್ರದೇಶದಲ್ಲಿ ನೀರನ್ನು ಹಿಡಿದಿಟ್ಟುಕೊಳ್ಳಲಾಗುತ್ತಿತ್ತು. ನೀರು ಇಂಗುವ ಪ್ರಮಾಣ ಹೆಚ್ಚಿತ್ತು. ಈಗ ಅದು ಹರಿದುಹೋಗುತ್ತಿದೆ. ಈ ಹಿನ್ನೆಲೆಯಲ್ಲೇ ವೈಜ್ಞಾನಿಕವಾಗಿ ಸರಕಾರ ನಿಗದಿಪಡಿಸಿದ ಬೆಳೆ ಪದ್ಧತಿ ಅಳವಡಿಸಿಕೊಂಡರೆ ನೀರಿನ ಕೊರತೆ ಬಾಧಿಸದು ಎನ್ನುತ್ತಾರೆ ಪರಿಣತರು.
ಸಮುದ್ರದ ನೀರು ಸೇರುವ ಸಾಧ್ಯತೆ
ರಾಜ್ಯದ ಇತರೆಡೆಗೆ ಹೋಲಿಸಿದಾಗ, ಕರಾವಳಿ ಯಲ್ಲಿ ಮಳೆಯ ಪ್ರಮಾಣ ಹೆಚ್ಚೆನಿಸುತ್ತದೆ. ಘಟ್ಟ ಪ್ರದೇಶ ಆಗಿರುವುದರಿಂದ ನೀರಿನ ಹರಿಯುವಿಕೆ ವೇಗವಾಗಿರುತ್ತದೆ. ‘Laterite’ (ಜಂಬಿಟ್ಟಿಗೆ ಮಾದರಿ) ಮಣ್ಣು. ಹಾಗಾಗಿ ಇಂಗುವಿಕೆ ಕಡಿಮೆ. ಒಂದೆಡೆ ಸಮುದ್ರದ ಮಟ್ಟ ಏರಿಕೆ ಆಗಿರು ವುದು, ಮತ್ತೂಂದೆಡೆ ಹೀಗೆ ನೀರಿನ ಅಂಶ ಕಡಿಮೆ ಯಾದಾಗ ಸಮುದ್ರದ ಉಪ್ಪುನೀರು ಭೂಮ್ನಿ ಪ್ರವೇಶಿಸುವ ಸಾಧ್ಯತೆ ಆತಂಕಕ್ಕೆ ಕಾರಣವಾಗಿದೆ. ಇದು 1.5ರಿಂದ 2 ಕಿ.ಮೀ. ವರೆಗೂ ವಿಸ್ತರಿಸ ಬಹುದು ಎಂಬುದು ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ ವಿಜ್ಞಾನಿ ಡಾ| ಎ.ಆರ್. ಶಿವಕುಮಾರ್‌ರ ಅಭಿಪ್ರಾಯ.