Advertisement

ಹಲವು ರಾಜ್ಯಗಳಲ್ಲಿ ಮಳೆರಾಯನ ಅವಾಂತರ

12:08 AM Oct 19, 2021 | Team Udayavani |

ಹೊಸದಿಲ್ಲಿ: ಕೇರಳದ ಮಳೆ, ಪ್ರವಾಹ, ಭೂಕುಸಿತಕ್ಕೆ 35 ಮಂದಿ ಸಾವಿಗೀಡಾದ ಬೆನ್ನಲ್ಲೇ ದೇಶದ ಹಲವು ಭಾಗಗಳಲ್ಲಿ ಧಾರಾಕಾರ ಮಳೆ ಸುರಿಯಲಾರಂಭಿಸಿದೆ.

Advertisement

ದಿಲ್ಲಿ, ಉತ್ತರಾಖಂಡ, ಪಂಜಾಬ್‌, ಹರಿಯಾಣ, ರಾಜಸ್ಥಾನ, ತಮಿಳುನಾಡು, ಪುದುಚೇರಿ, ಮಧ್ಯಪ್ರದೇಶ, ಉತ್ತರಪ್ರದೇಶ, ಪಶ್ಚಿಮ ಬಂಗಾಲ ಸೇರಿದಂತೆ ಹಲವು ರಾಜ್ಯಗಳಲ್ಲಿ ವರುಣ ಅಬ್ಬರಿಸುತ್ತಿದ್ದಾನೆ. ಉತ್ತರಾಖಂಡದಲ್ಲಿ ಮಳೆ ಸಂಬಂಧಿ ಘಟನೆಗೆ ಸೋಮವಾರ ಮೂವರು ಬಲಿಯಾಗಿದ್ದಾರೆ. ಉತ್ತರಪ್ರದೇಶದಲ್ಲಿ ಭಾರೀ ಮಳೆಯಿಂದಾಗಿ ಹಲವು ಪ್ರದೇಶಗಳು ಜಲಾವೃತಗೊಂಡಿವೆ. ಬುಧಾನಾ ನಗರದಲ್ಲಿ ನಡೆಯಬೇಕಾಗಿದ್ದ ಎಸ್ಪಿ ನಾಯಕ ಅಖೀಲೇಶ್‌ ಯಾದವ್‌ ಅವರ ರ್ಯಾಲಿ ರದ್ದುಗೊಂಡಿದೆ. ಬಂಗಾಲ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಕಾರಣ, ಪಶ್ಚಿಮ ಬಂಗಾಲದಲ್ಲೂ ಭಾರೀ ಮಳೆಯಾಗುತ್ತಿದೆ. ಮಂಗಳವಾರವೂ ದಕ್ಷಿಣ ಬಂಗಾಲದ ಎಲ್ಲ ಜಿಲ್ಲೆಗಳಲ್ಲೂ ಮಳೆಯಾಗುವುದಾಗಿ ಹವಾಮಾನ ಇಲಾಖೆ ಎಚ್ಚರಿಸಿದೆ.

ಪ್ರಚಾರ ಮುಂದೂಡಿಕೆ: ಮಧ್ಯಪ್ರದೇಶದಲ್ಲಿ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರು ತಮ್ಮ ಚುನಾವಣ ಪ್ರಚಾರ ಸಭೆಯನ್ನು ಮುಂದೂಡಿದ್ದಾರೆ. ಲೋಕಸಭಾ ಉಪಚುನಾವಣೆ ನಡೆಯಲಿರುವ ಖಾಂಡ್ವಾಗೆ ಅವರು ಪ್ರಯಾಣ ಬೆಳೆಸಬೇಕಾಗಿತ್ತು.

ಇದನ್ನೂ ಓದಿ:ಸಾಸಿವೆ ಜಾತಿಯ ಗಿಡದಿಂದ ಜೆಟ್‌ ಇಂಧನ!

ಹಳೆಯ ದಾಖಲೆ ಅಳಿಸಿದ ದಿಲ್ಲಿ ಮಳೆ
ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಈ ತಿಂಗಳ ಆರಂಭದಿಂದ ಮಧ್ಯಭಾಗದವರೆಗೆ 94.6 ಮಿ.ಮೀ.ನಷ್ಟು ಮಳೆಯಾಗಿದ್ದು, 1960ರ ಅಕ್ಟೋಬರ್‌ನಲ್ಲಿ ಸುರಿದಿದ್ದ ದಾಖಲೆಯನ್ನು ಈ ಮಳೆ ಅಳಿಸಿಹಾಕಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. 1960ರ ಅಕ್ಟೋಬರ್‌ನಲ್ಲಿ ದಿಲ್ಲಿಯಲ್ಲಿ 93.4 ಮಿ.ಮೀ. ಮಳೆಯಾಗಿತ್ತು ಎಂದು ಹೇಳಿದೆ. 60ರ ದಶಕದ ಹಿಂದೆ ದಿಲ್ಲಿಯಲ್ಲಿ ಇನ್ನೂ ಹೆಚ್ಚಾಗಿ ಮಳೆ ಸುರಿಯುತ್ತಿತ್ತು ಎಂಬ ಕುತೂಹಲಕಾರಿ ವಿಚಾರ ತಿಳಿಸಿರುವ ಇಲಾಖೆ ಅದಕ್ಕೆ ಪೂರಕವಾದ ದಾಖಲೆಗಳನ್ನೂ ಬಿಡುಗಡೆ ಮಾಡಿದೆ. 1910ರ ಅಕ್ಟೋಬರ್‌ನಲ್ಲಿ 185.9 ಮಿ.ಮೀ., 1954ರ ಅಕ್ಟೋಬರ್‌ನಲ್ಲಿ 238.2 ಮಿ.ಮೀ., 1956ರ ಅಕ್ಟೋಬರ್‌ನಲ್ಲಿ 236.2 ಮಿ.ಮೀ. ಮಳೆಯಾಗಿತ್ತೆಂದು ದತ್ತಾಂಶಗಳಲ್ಲಿ ಉಲ್ಲೇಖೀಸಲಾಗಿದೆ.

Advertisement

ವಧೂ-ವರರ ಸ್ಪೆಷಲ್‌ ಗಾಡಿ
ಮಳೆ, ಪ್ರವಾಹ ಪೀಡಿತ ಕೇರಳದಲ್ಲಿ ವಧು-ವರರು ಮದುವೆ ಮಂಟಪಕ್ಕೆ ತೆರಳಲೂ ಒದ್ದಾಡಿರುವ ಘಟನೆ ನಡೆದಿದೆ. ಕೊನೆಗೆ ಆ ಜೋಡಿ ದೊಡ್ಡದೊಂದು ಅಲ್ಯೂಮಿನಿಯಂ ಪಾತ್ರೆಯಲ್ಲಿ ಕುಳಿತಿದ್ದು, ಪ್ರವಾಹದ ನೀರಿನಲ್ಲೇ ಆ ಪಾತ್ರೆಯನ್ನು ಬೇರೆಯವರು ತಳ್ಳಿಕೊಂಡು ಹೋಗಿ ಮದುವೆ ಮಂಟಪವನ್ನು ತಲುಪಿಸಿದ್ದಾರೆ. ಈ ವೀಡಿಯೋ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಅವರಿಬ್ಬರೂ ಅಲಪ್ಪುಳ ನಿವಾಸಿಗಳಾಗಿದ್ದು, ಥಲವಾಡಿಯ ಕಲ್ಯಾಣಮಂಟಪದಲ್ಲಿ ಸೋಮವಾರ ಮದುವೆಯಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next