Advertisement

ಮಂಗಳೂರಿನಲ್ಲಿ ಮಳೆಯ ಸಿಂಚನ 

11:52 AM Apr 09, 2018 | Team Udayavani |

ಮಹಾನಗರ: ನಗರದ ವಿವಿಧ ಭಾಗಗಳಲ್ಲಿ ರವಿವಾರ ಸಂಜೆ ಸುಮಾರು 15 ನಿಮಿಷ ಕಾಲ ಸಾಧಾರಣ ಗುಡುಗು ಸಹಿತ ಮಳೆ ಬಂದಿದ್ದು, ಬಿಸಿಲಿನ ತಾಪ ಮತ್ತು ಬೇಗೆಯಿಂದ ಬಳಲುತ್ತಿದ್ದ ಜನತೆಗೆ ಒಂದಿಷ್ಟು ತಂಪೆರೆಯಿತು.

Advertisement

ಕಳೆದ ನಾಲ್ಕೈದು ದಿನಗಳಿಂದ ದಕ್ಷಿಣ ಕನ್ನಡ ಜಿಲ್ಲೆಯ ಅಲ್ಲಲ್ಲಿ ಮಳೆ ಬರುತ್ತಿದ್ದರೂ ಮಂಗಳೂರು ನಗರಕ್ಕೆ ಬಂದಿರಲಿಲ್ಲ. ಸುತ್ತ ಮುತ್ತ ಬರುತ್ತಿದ್ದ ಮಳೆ ಮತ್ತು ಮೋಡ ಕವಿದ ವಾತಾವರಣದಿಂದಾಗಿ ಮಂಗಳೂರಿನಲ್ಲಿ ಸೆಕೆಯ ವಾತಾವರಣ ಜಾಸ್ತಿಯಾಗಿ, ಜನರು ಬಳಲಿ ಬೆಂಡಾಗಿದ್ದರು. ರವಿವಾರ ಬಂದ ಮಳೆಯಿಂದಾಗಿ ಜನರು ಒಂದಿಷ್ಟು ನಿಟ್ಟುಸಿರು ಬಿಡುವಂತಾಯಿತು.

ಅನಿರೀಕ್ಷಿತವಾಗಿ ಬಂದ ಮಳೆಯಿಂದಾಗಿ ದಿನದ ಸಂಜೆ ಹೊತ್ತು ನಿಗದಿಯಾಗಿದ್ದ ಕೆಲವೊಂದು ಕಾರ್ಯಕ್ರಮಗಳಿಗೆ ಅಡಚಣೆ ಉಂಟಾಯಿತು. ಸಮಾರಂಭಗಳು ಮಳೆಯಲ್ಲಿ ತೊಯ್ದು ಹೋದವು. ಕೈಯಲ್ಲಿ ಕೊಡೆ ಇಲ್ಲದ ಕಾರಣ ನಗರದಲ್ಲಿ ಓಡಾಡುತ್ತಿದ್ದ ಪಾದಚಾರಿಗಳು ಮಳೆಯಲ್ಲಿ ನೆನೆಯುವಂತಾಯಿತು. ದ್ವಿಚಕ್ರ ವಾಹನ ಸವಾರರು ಕಟ್ಟಡಗಳನ್ನು ಅಥವಾ ಮರದ ಬುಡಗಳನ್ನು ಆಶ್ರಯಿಸಿದರು.

ಇನ್ನೂ ಕೆಲವು ಕಡೆ ದುರಸ್ತಿಯ ಹಂತದಲ್ಲಿದ್ದ ರಸ್ತೆಗಳಲ್ಲಿ ಹಾಕಿದ್ದ ಮಣ್ಣು ಕೆಸರುಮಯವಾಯಿತು. ದೇರಳಕಟ್ಟೆಯಲ್ಲಿ ಕೆ.ಎಸ್‌.ಹೆಗ್ಡೆ ಆಸ್ಪತ್ರೆ ಎದುರು ರಸ್ತೆ ದುರಸ್ತಿ ಕಾಮಗಾರಿ ನಡೆಯುತ್ತಿದ್ದ ಜಾಗದಲ್ಲಿ ಹಾಕಿದ್ದ ಮಣ್ಣೆಲ್ಲವೂ ಕೆಸರಾಗಿ ಪರಿವರ್ತನೆಯಾದ ಕಾರಣ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು. 

Advertisement

Udayavani is now on Telegram. Click here to join our channel and stay updated with the latest news.

Next