Advertisement

ಕೊಡಗು, ಕರಾವಳಿ, ಮಲೆನಾಡಿನಲ್ಲಿ ಮಳೆ ಆರ್ಭಟ

07:25 AM Jul 21, 2017 | Harsha Rao |

ಬೆಂಗಳೂರು: ಕೊಡಗು, ಮಲೆನಾಡು, ಕರಾವಳಿ, ಉತ್ತರ ಒಳನಾಡುಗಳಲ್ಲಿ ಮಳೆ ಆರ್ಭಟಿಸುತ್ತಿದ್ದು, ಜನಜೀವನ
ಅಸ್ತವ್ಯಸ್ತವಾಗಿದೆ. ಬೆಳಗಾವಿ ಜಿಲ್ಲೆ ಹಾಗೂ ನೆರೆಯ ಮಹಾರಾಷ್ಟ್ರದಲ್ಲಿ ಉತ್ತಮ ಮಳೆಯಾಗುತ್ತಿರುವುದಿಂದ ಚಿಕ್ಕೋಡಿ ತಾಲೂಕಿನೊಂದರಲ್ಲೇ 6 ಸೇತುವೆಗಳು ಜಲಾವೃತಗೊಂಡಿವೆ. ಗುರುವಾರ ಮುಂಜಾನೆ 8.30ಕ್ಕೆ ಅಂತ್ಯಗೊಂಡ 24 ತಾಸುಗಳ ಅವಧಿಯಲ್ಲಿ ಕೊಡಗಿನ ಭಾಗಮಂಡಲದಲ್ಲಿ ರಾಜ್ಯದಲ್ಲಿಯೇ ಅತ್ಯಧಿಕ 29 ಸೆಂ. ಮೀ.ಗಳಷ್ಟು ಭಾರಿ ಮಳೆ ಸುರಿಯಿತು.

Advertisement

ಕೇರಳದ ವೈನಾಡು, ಮಡಿಕೇರಿ ಸುತ್ತಮುತ್ತ ಸುರಿದ ಮಳೆಯಿಂದ ಕಬಿನಿ, ಕೆಆರ್‌ಎಸ್‌ ಜಲಾಶಯಗಳ ಒಳಹರಿವಿನಲ್ಲಿ ಏರಿಕೆ ಕಂಡು ಬಂದಿದೆ. ಕಬಿನಿ ಜಲಾಶಯ ಭರ್ತಿಗೆ 14 ಅಡಿ ಮಾತ್ರ ಬಾಕಿ ಇದೆ. ಜಲಾಶಯದ ಗರಿಷ್ಠ ಮಟ್ಟ 2,284 ಅಡಿ ಇದ್ದು, ಈ ಪೈಕಿ ಈಗಾಗಲೇ 2,269 ಅಡಿ ಭರ್ತಿಯಾಗಿದೆ. ಗುರುವಾರ ಒಳಹರಿವು 13,500 ಕ್ಯೂಸೆಕ್‌ ಇತ್ತು. ಕೆಆರ್‌ಎಸ್‌ ಜಲಾಶಯದ ಒಳಹರಿವು 3,336 ಕ್ಯೂಸೆಕ್‌ ಇದೆ. ಲಕ್ಷ್ಮಣತೀರ್ಥ ನದಿಯಲ್ಲಿ ಪ್ರವಾಹ ಹೆಚ್ಚಾಗಿದ್ದು, ಹುಣಸೂರು ತಾಲೂಕಿನ ಹನಗೋಡು ಅಣೆಕಟ್ಟೆ ಮುಳುಗಡೆಯಾಗಿದೆ. ಹಾಸನ ಜಿಲ್ಲೆ ಬೇಲೂರು ಸಮೀಪದ ತೊಳಲು ಗ್ರಾಮದ ಬಳಿ ಬೇಲೂರು-ಮೂಡಿಗೆರೆ ಹೆದ್ದಾರಿಯಲ್ಲಿ ಮರ ಬಿದ್ದು, ಸುಮಾರು 1 ಗಂಟೆಗೂ ಹೆಚ್ಚು ಕಾಲ ಟ್ರಾμಕ್‌ ಜಾಮ್‌ ಆಗಿತ್ತು. ಪಶ್ಚಿಮ ಘಟ್ಟ ವ್ಯಾಪ್ತಿಯಲ್ಲಿ ಮಳೆ ಭೋರ್ಗರೆಯುತ್ತಿದ್ದು, ಗುಂಡ್ಯ ಹೊಳೆಯಲ್ಲಿ ನೆರೆ ಬಂದಿದೆ. ಗುರುವಾರ ಮಧ್ಯಾಹ್ನ ಸುಮಾರು 2 ತಾಸು ಕಡಬ ಸಮೀಪದ ಹೊಸ್ಮಠ ಸೇತುವೆ ನೀರಿನಲ್ಲಿ ಮುಳುಗಡೆ ಯಾಗಿತ್ತು. ಇದರಿಂದಾಗಿ ಉಪ್ಪಿನಂಗಡಿ- ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯಲ್ಲಿ ವಾಹನ ಸಂಚಾರ ವ್ಯತ್ಯಯಗೊಂಡಿತ್ತು.

ಅಡಿಕೆ, ಕಾμ ನಾಡಲ್ಲೂ ಭೋರ್ಗರೆತ: ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳಲ್ಲಿಯೂ ಮಳೆ
ಆರ್ಭಟಿಸುತ್ತಿದ್ದು, ಬಿರುಗಾಳಿ ಸಹಿತ ಮಳೆಗೆ ಅಪಾರ ಹಾನಿ ಸಂಭವಿಸಿದೆ. ಮರಗಳು ಧರೆಗುರುಳಿದ್ದು, ಗ್ರಾಮೀಣ
ಭಾಗದಲ್ಲಿ ವಿದ್ಯುತ್‌ ಸಂಪರ್ಕ ಕಡಿತಗೊಂಡಿದೆ. 150ಕ್ಕೂ ಹೆಚ್ಚು ಮನೆಗಳು ಹಾನಿಗೊಳಗಾಗಿವೆ. ಅಘನಾಶಿನಿ,
ವರದಾ, ಶರಾವತಿ ನದಿಗಳಲ್ಲಿ ನೀರಿನ ಮಟ್ಟ ಏರುತ್ತಿದೆ.

ವಿಶ್ವವಿಖ್ಯಾತ ಜೋಗ ಜಲಪಾತ ಭೋರ್ಗರೆಯುತ್ತಿದ್ದು, ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ಇದೇ ವೇಳೆ, ದಕ್ಷಿಣ
ಕನ್ನಡ, ಉಡುಪಿ ಜಿಲ್ಲೆಗಳ ವ್ಯಾಪ್ತಿಯಲ್ಲಿ 20ಕ್ಕೂ ಹೆಚ್ಚು ಮನೆಗಳಿಗೆ ಹಾನಿ ಸಂಭವಿಸಿದೆ.
ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ, ಕೊಪ್ಪ, ನರಸಿಂಹರಾಜಪುರ ಹಾಗೂ ಮೂಡಿಗೆರೆ ತಾಲೂಕುಗಳಲ್ಲಿ ಗುರುವಾರ ಶಾಲಾ, ಕಾಲೇಜುಗಳಿಗೆ ರಜೆ ನೀಡಲಾಗಿತ್ತು. ಕೊಡಗಿನ ವಿರಾಜಪೇಟೆ ಸಮೀಪದ ಪೆರಂಬಾಡಿಯಲ್ಲಿ ಕರ್ನಾಟಕ-ಕೇರಳ ಅಂತಾರಾಜ್ಯ ಹೆದ್ದಾರಿ ಮೇಲೆ ಮಣ್ಣು ಕುಸಿದಿದ್ದು, ಕೇರಳದೊಂದಿಗಿನ ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ.

ಆರು ಕಡೆ ರಸ್ತೆ ಸಂಪರ್ಕ ಕಡಿತ: ಬೆಳಗಾವಿ ಜಿಲ್ಲೆ ಹಾಗೂ ನೆರೆಯ ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಬೆಳಗಾವಿ ಜಿಲ್ಲೆಯ ಹಿಡಕಲ್‌, ಮಲಪ್ರಭಾ ಹಾಗೂ ರಕ್ಕಸಕೊಪ್ಪ ಜಲಾಶಯಗಳಿಗೆ ಗಣನೀಯ ಪ್ರಮಾಣದಲ್ಲಿ ನೀರು ಬರಲಾರಂಭಿಸಿದೆ. ಮಹಾರಾಷ್ಟ್ರದ ನವಜಾ, ಕೊಯ್ನಾ ಮತ್ತು ರಾಧಾನಗರಿ ಘಟ್ಟ ಪ್ರದೇಶದಲ್ಲಿ ಬುಧವಾರ ರಾತ್ರಿ ಧಾರಾಕಾರ ಮಳೆ ಸುರಿದಿದ್ದು, ಕೃಷ್ಣಾ ಹಾಗೂ ವೇದಗಂಗಾ ನದಿಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಬರುತ್ತಿದೆ. ಇದರಿಂದ ಚಿಕ್ಕೋಡಿ ತಾಲೂಕಿನಲ್ಲಿ ಒಟ್ಟು ಆರು ಸೇತುವೆಗಳು ನೀರಿನಲ್ಲಿ ಮುಳುಗಿವೆ.

Advertisement

ವೇದಗಂಗಾ ನದಿಯ 24 ಸಾವಿರ ಕ್ಯೂಸೆಕ್‌ ಸೇರಿ ರಾಜಾಪುರ ಬ್ಯಾರೇಜ್‌ನಿಂದ ಕೃಷ್ಣಾ ನದಿಗೆ ಈಗ ಒಂದು
ಲಕ್ಷ ಕ್ಯೂಸೆಕ್‌ ನೀರು ಬರುತ್ತಿದೆ. ನದಿ ತೀರದ ಜನರಿಗೆ ಜಾಗ್ರತೆಯಿಂದ ಇರುವಂತೆ ಜಿಲ್ಲಾಡಳಿತ ಕಟ್ಟೆಚ್ಚರ ನೀಡಿದೆ.
ದೂಧಗಂಗಾ ನದಿಯಲ್ಲಿಯೂ ನೀರಿನ ಪ್ರಮಾಣ ಹೆಚ್ಚಾಗಿದ್ದು, ಮಲಿಕವಾಡ-ದತ್ತವಾಡ ಸೇತುವೆ ಮುಳುಗಿದೆ.
ಇದರಿಂದ ಮಲಿಕವಾಡ ಮಾರ್ಗವಾಗಿ ಮಹಾರಾಷ್ಟ್ರಕ್ಕೆ ತೆರಳುವ ಸಾರ್ವಜನಿಕರು ಸುತ್ತು ಬಳಸಿ ಪ್ರಯಾಣ
ಮಾಡುವುದು ಅನಿವಾರ್ಯವಾಗಿದೆ. ಘಟಪ್ರಭಾ, ಮಲಪ್ರಭಾ ನದಿಗಳಲ್ಲೂ ನೀರಿನ ಮಟ್ಟ ಏರುತ್ತಿದ್ದು, ಹಿಡಕಲ್‌ ಜಲಾಶಯದ ನೀರಿನ ಮಟ್ಟ ಒಂದೇ ದಿನದಲ್ಲಿ ನಾಲ್ಕು ಅಡಿಗಳಿಗೆ ಏರಿಕೆಯಾಗಿದೆ. ಗೋಕಾಕ ತಾಲೂಕಿನ ಗೋಕಾಕ-ಶಿಂಗಳಾಪುರ ನಡುವಿನ ಸೇತುವೆ ನೀರಿನಲ್ಲಿ ಮುಳುಗಿ ರಸ್ತೆ ಸಂಪರ್ಕ ಕಡಿತಗೊಂಡಿದೆ. ಖಾನಾಪುರ ತಾಲೂಕಿನಲ್ಲಿ ಸುಮಾರು 10 ಮನೆಗಳಿಗೆ ಭಾಗಶಃ ಹಾನಿಯಾಗಿದೆ. ರಕ್ಕಸಕೊಪ್ಪ ಜಲಾಶಯಕ್ಕೆ ಕಳೆದ 24 ಗಂಟೆಗಳ ಅವಧಿ
ಯಲ್ಲಿ 3 ಅಡಿಗಳಷ್ಟು ನೀರು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next