Advertisement

ಪೊಳಲಿ ಶಾಲೆಗೆ ಮಳೆಕೊಯ್ಲಿನ ಫಸಲು; ಮುಂಡಾಜೆ ಬೆಟ್ಟದಲ್ಲಿ ಇಂಗುಗುಂಡಿ

09:28 PM Jul 13, 2019 | Sriram |

ಮಹಾನಗರ: ಜೋರು ಮಳೆ ಸುರಿದರೆ ಇನ್ನು ಈ ಶಾಲೆಯ ಛಾವಣಿಯ ನೀರು ಪೋಲಾಗದೆ ನೇರವಾಗಿ ಹರಿದು ಪಕ್ಕದಲ್ಲಿರುವ ಬಾವಿಗೆ ಬಂದು ಸೇರುತ್ತದೆ. ಇನ್ನೊಂದೆಡೆ ಮುಂಡಾಜೆಯ ಬೆಟ್ಟವೊಂದರಲ್ಲಿ ಗ್ರಾಮಸ್ಥರು, ಶಾಲಾ-ಕಾಲೇಜು ವಿದ್ಯಾರ್ಥಿಗಳೆಲ್ಲ ಸೇರಿಕೊಂಡು ಸುಮಾರು 100 ಇಂಗು ಗುಂಡಿಗಳನ್ನು ತೆಗೆದು ಮಳೆ ನೀರು ಭೂಮಿಯೊಳಗೆ ಇಂಗುವ ಕಾರ್ಯ ಮಾಡಿದ್ದಾರೆ. ಮತ್ತೂಂದೆಡೆ ಪುತ್ತೂರಿನ ಮಾಯ್‌ ದೆ ದೇವುಸ್‌ ಚರ್ಚ್‌ನಲ್ಲಿ ಜನರನ್ನು ಜಲ ಸಾಕ್ಷರತೆ ಕಡೆಗೆ ಕರೆದೊಯ್ಯುವ ಅರ್ಥಪೂರ್ಣ ಕಾರ್ಯಕ್ರಮ.

Advertisement

ಇದೆಲ್ಲ, “ಉದಯವಾಣಿ’ಯು 35 ದಿನಗಳಿಂದ “ಮನೆ ಮನೆಗೆ ಮಳೆಕೊಯ್ಲು’ ಅಭಿಯಾನದ ಫಲವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಹಲವು ಕಡೆಗಳಲ್ಲಿ ಮಳೆ ನೀರಿನ ಸಂರಕ್ಷಣೆಯತ್ತ ಜನರು ಕಾರ್ಯಪ್ರವೃತ್ತಗೊಂಡಿರುವುದಕ್ಕೆ ಶನಿವಾರದ ಯಶೋಗಾಥೆಗಳೇ ಸಾಕ್ಷಿ. ಜಿಲ್ಲೆಯ ಜನರು ಇದೀಗ ಜಲ ಸಾಕ್ಷರತೆ ಕಡೆಗೆ ಕೈಜೋಡಿಸುತ್ತಿರುವುದು ಶ್ಲಾಘನೀಯ. ಮಳೆಕೊಯ್ಲು ಅಭಿಯಾನಕ್ಕಿದು ಧನಾತ್ಮಕ ಯಶಸ್ಸು.


ಈ ಪ್ರೌಢಶಾಲೆಯಲ್ಲಿ 250 ಮಂದಿ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಪ್ರತಿ ವರ್ಷ ಮಾರ್ಚ್‌ ತಿಂಗಳಲ್ಲಿ ನೀರಿನ ಸಮಸ್ಯೆ ಎದುರಾಗುತ್ತಿತ್ತು. ಇದೀಗ ಬಿರುವೆರ್‌ ಕುಡ್ಲ ಸಂಘಟನೆಯು ಶಾಲೆಯಲ್ಲಿ ಮಳೆಕೊಯ್ಲು ಅಳವಡಿಸಿದ್ದರಿಂದ ಭವಿಷ್ಯದಲ್ಲಿ ಶಾಲೆಯಲ್ಲಿ ನೀರಿನ ಸಮಸ್ಯೆ ಉಂಟಾಗದು ಎನ್ನುವ ಖುಷಿಯಲ್ಲಿದ್ದಾರೆ ಶಾಲಾ ಶಿಕ್ಷಕರು.

ಪೋಷಕರಲ್ಲಿ ಮನವಿ: ಸಂಕಲ್ಪ
ಸಂಘಟನೆಯೊಂದು ಈ ರೀತಿಯ ಸಾಮಾಜಿಕ ಕಾರ್ಯದೊಂದಿಗೆ ಶಿಕ್ಷಣದಲ್ಲಿ ನೆರವಾಗಿರುವುದು ಶ್ಲಾಘನೀಯ ಬೆಳವಣಿಗೆ. “ಉದಯವಾಣಿ’ ನಡೆಸುತ್ತಿರುವ ಅಭಿಯಾನದಿಂದ ಪ್ರೇರಣೆಗೊಂಡು ಬಿರುವೆರ್‌ ಕುಡ್ಲ ಮಾಡಿದ ಈ ಸಾಮಾಜಿಕ ಕಾರ್ಯದಿಂದ ನಾವೂ ಸ್ಫೂರ್ತಿಗೊಂಡಿದ್ದೇವೆ. ಮುಂದೆ ಶಾಲೆಯ ರಕ್ಷಕ-ಶಿಕ್ಷಕ ಸಂಘದ ಸಭೆ ನಡೆಸುವ ವೇಳೆ ಮಳೆಕೊಯ್ಲು ವಿಷಯವನ್ನೇ ಪ್ರಧಾನವಾಗಿಟ್ಟುಕೊಂಡು ವಿದ್ಯಾರ್ಥಿಗಳ ಹೆತ್ತವರಿಗೆ ಇದರ ಮಾಹಿತಿ ನೀಡಲಾಗುವುದು. ಶಾಲೆಯಲ್ಲಿ ಅಳವಡಿಸಿರುವ ಮಳೆಕೊಯ್ಲು ವ್ಯವಸ್ಥೆಯನ್ನು ಎಲ್ಲ ಮಕ್ಕಳ ಹೆತ್ತವರಿಗೂ ತೋರಿಸಿ ತಮ್ಮ ಮನೆಮನೆಗಳಲ್ಲಿಯೂ ಇದನ್ನು ಅಳವಡಿಸುವಂತೆ ಪ್ರೇರೇಪಿಸಲಾಗುವುದು ಎಂದು ಪ್ರೌಢಶಾಲೆಯ ಮುಖ್ಯ ಶಿಕ್ಷಕ ರಾಧಾಕೃಷ್ಣ ಭಟ್‌ “ಉದಯವಾಣಿ’ಗೆ ತಿಳಿಸಿದ್ದಾರೆ.


ಮಳೆಕೊಯ್ಲು ವ್ಯವಸ್ಥೆ ಹಸ್ತಾಂತರ

ಫ್ರೆಂಡ್ಸ್‌ ಬಲ್ಲಾಳ್‌ಬಾಗ್‌, ಬಿರುವೆರ್‌ ಕುಡ್ಲ ಕೇಂದ್ರ ಸಮಿತಿ, ಬಿರುವೆರ್‌ ಕುಡ್ಲ ಮಹಿಳಾ ವೇದಿಕೆ ಮತ್ತು ಬಿರುವೆರ್‌ ಕುಡ್ಲ ಪೊಳಲಿ ಘಟಕ (ನಿಯೋಜಿತ) ಸಂಘಟನೆಗಳು ಜತೆ ಸೇರಿ ಸುಮಾರು 20 ಸಾವಿರ ರೂ. ವೆಚ್ಚದಲ್ಲಿ ಮಳೆಕೊಯ್ಲು ವ್ಯವಸ್ಥೆಯನ್ನು ಶಾಲೆಯಲ್ಲಿ ಮಾಡಿದ್ದರು. ಶನಿವಾರ ಈ ವ್ಯವಸ್ಥೆಯನ್ನು ಶಾಲೆಯ ಮುಖ್ಯೋಪಾಧ್ಯಾಯರಿಗೆ ಹಸ್ತಾಂತರಿಸಲಾಯಿತು.

ಪೊಳಲಿ ದೇವಸ್ಥಾನದ ಬಳಿ ಇರುವ ಸರ್ವಮಂಗಳ ಸಭಾಂಗಣದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ನಿರ್ಮಿತಿ ಕೇಂದ್ರದ ಯೋಜನ ನಿರ್ದೇಶಕ ರಾಜೇಂದ್ರ ಕಲಾºವಿ ಉದ್ಘಾಟಿಸಿದರು. ಬಳಿಕ ಮಳೆಕೊಯ್ಲು ಅಳವಡಿಕೆಯ ವಿಧಾನಗಳನ್ನು ಪ್ರಸ್ತುತಪಡಿಸಿದರು. ಪ್ರೌಢಶಾಲೆಯ ಮುಖ್ಯ ಶಿಕ್ಷಕ ರಾಧಾಕೃಷ್ಣ ಭಟ್‌, ಬಿರುವೆರ್‌ ಕುಡ್ಲ ಕೇಂದ್ರ ಸಮಿತಿ ಪ್ರ.ಕಾರ್ಯದರ್ಶಿ ಕಿಶೋರ್‌ ಬಾಬು, ಸದಸ್ಯ ಪ್ರಾಣೇಶ್‌, ಮಹಿಳಾ ವೇದಿಕೆ ಅಧ್ಯಕ್ಷೆ ವಿದ್ಯಾ ರಾಕೇಶ್‌, ಪೊಳಲಿ ಘಟಕದ ಉಮೇಶ್‌ ಅಮ್ಮುಂಜೆ, ಯಶವಂತ ಕೋಟ್ಯಾನ್‌, ರೋಹಿತ್‌ ಪೊಳಲಿ ಮತ್ತಿತರರು ಉಪಸ್ಥಿತರಿದ್ದರು. ಶಿಕ್ಷಕಿ ಪೂರ್ಣಿಮಾ ನಿರೂಪಿಸಿದರು.

600 ಇಂಗುಗುಂಡಿ ನಿರ್ಮಾಣ
“ಉದಯವಾಣಿ’ ಮನೆಮನೆಗೆ ಮಳೆ ಕೊಯ್ಲು ಅಭಿಯಾ ನದಿಂದ ಸ್ಫೂರ್ತಿ ಪಡೆದ ಮುಂಡಾಜೆ “ನೀರಿಂಗಿಸೋಣ’ ತಂಡದ ಸದಸ್ಯರು ಎನೆಸ್ಸೆಸ್‌ ವಿದ್ಯಾರ್ಥಿಗಳ ಸಹಯೋಗದೊಂದಿಗೆ ಮುಂಡಾಜೆಯ ಪಿಲಿಂಗಾರುಗುಡ್ಡೆಯಲ್ಲಿ ಶನಿವಾರ ಸುಮಾರು 600 ಇಂಗುಗುಂಡಿ ನಿರ್ಮಾಣ ಕಾರ್ಯ ನಡೆಸಿದರು. ಸ್ಥಳೀಯ ಜೂನಿಯರ್‌ ಕಾಲೇಜಿನ 70 ಮಂದಿ ಎನೆಸ್ಸೆಸ್‌ ವಿದ್ಯಾರ್ಥಿಗಳು, ಕಾಲೇಜಿನ ಎನೆಸ್ಸೆಸ್‌ ಅಧಿಕಾರಿ, ಪ್ರಾಂಶುಪಾಲರು, “ನೀರಿಂಗಿಸೋಣ’ ತಂಡದ ಸದಸ್ಯರು, ಮುಂಡಾಜೆ ಸಿಎ ಬ್ಯಾಂಕಿನ ಅಧ್ಯಕ್ಷರು, ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಪಂಚಾಯತ್‌ ಅಭಿವೃದ್ಧಿ ಅಧಿಕಾರಿ, ಪಂಚಾಯತ್‌ ಸದಸ್ಯರು, ಸ್ಥಳೀಯ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷರು, ಸದಸ್ಯರು, ಗ್ರಾಮ ವಿಕಾಸ ಸಮಿತಿಯ ಅಧ್ಯಕ್ಷರು, ಆಸಕ್ತ ಸಾರ್ವಜನಿಕರು ಸೇರಿ ಇಂಗುಗುಂಡಿ ರಚನೆ ಮಾಡಿದ್ದಾರೆ. ಮಧ್ಯಾಹ್ನದ ಊಟದ ವ್ಯವಸ್ಥೆಯ ಖರ್ಚನ್ನು ಸಿಎ ಬ್ಯಾಂಕಿನವರು ಭರಿಸಿ ಸಹಕರಿಸಿದರು. ಪ್ರದೀಪ ಮರಾಠೆಯವರು ಸ್ವಯಂ ಪ್ರೇರಿತರಾಗಿ ಭೋಜನ ತಯಾರಿಸಿ ಎಲ್ಲರಿಗೂ ಉಣ ಬಡಿಸಿದರು.

Advertisement

ಅಭಿಯಾನಕ್ಕೆ ಒಂದು ತಿಂಗಳು: ಜನಾಭಿಪ್ರಾಯ
“ಉದಯವಾಣಿ’ ಮಾದರಿ ಕೆಲಸ ಕಳೆದ ಬೇಸಗೆಯಲ್ಲಿ ಹನಿ ನೀರಿಗೂ ಹಾಹಾಕಾರ ಅನುಭವಿಸಿದ್ದೆವು. ಮಳೆಕೊಯ್ಲು ಅಳವಡಿಕೆಯ ಅಗತ್ಯ ನಮಗೆ ಈಗ ತೀರಾ ಅವಶ್ಯವಾಗಿದೆ. ಮಳೆಕೊಯ್ಲು ಅಳವಡಿಸಿ ಅಂತರ್ಜಲ ವೃದ್ಧಿಸಲು ಜನರಲ್ಲಿ ಜಾಗೃತಿ ಮೂಡಿಸುತ್ತಿರುವ “ಉದಯವಾಣಿ’ಯ ಈ ಕೆಲಸ ತುಂಬಾ ಉತ್ತಮ, ಮಾದರಿಯಾಗಿದೆ.
 - ಶ್ರೇಯಾ ಎಸ್‌. ಶೆಟ್ಟಿ,
ಲೇಡಿಹಿಲ್‌ ವಿಕ್ಟೋರಿಯಾ ಪ್ರೌಢಶಾಲೆ ವಿದ್ಯಾರ್ಥಿನಿ

“ಉದಯವಾಣಿ’ ಸಮಾಜದ ಸ್ನೇಹಿತ
ನಮಗೆ ಜೀವನದಲ್ಲಿ ನೀರು ಬಹಳ ಮುಖ್ಯ. ಮಳೆಕೊಯ್ಲು ಮೂಲಕ ನೀರುಳಿತಾಯ ಮುಂದಿನ ಪೀಳಿಗೆಗೆ ಬದಕಿನ ಮಾರ್ಗವಾಗಿದೆ. ಈ ನಿಟ್ಟಿನಲ್ಲಿ ಸಮಾಜವನ್ನು ನೀರುಳಿತಾಯಕ್ಕೆ ಎಚ್ಚರಿಸುವಲ್ಲಿ ಶ್ರಮಿಸುತ್ತಿರುವ
“ಉದಯವಾಣಿ’ಯು ಸಮಾಜದ ಸ್ನೇಹಿತನಾಗಿ ಕೆಲಸ ಮಾಡುತ್ತಿದೆ.
 - ವಿಶ್ವನಾಥ,
ಗಾಂಧಿನಗರ ಗೋಕರ್ಣನಾಥೇಶ್ವರ ಕಾಲೇಜು ವಿದ್ಯಾರ್ಥಿ

ಮಳೆಕೊಯ್ಲು ಅಳವಡಿಸಿ ಮಾದರಿ
ಬಿರುವೆರ್‌ ಕುಡ್ಲ ಸಂಘಟನೆಯು ನಮ್ಮ ಶಾಲೆಯಲ್ಲಿ ಮಳೆಕೊಯ್ಲು ಅಳವಡಿಸಿ ಮಾದರಿಯಾಗಿದೆ. ಜಿಲ್ಲೆಯಲ್ಲಿ ಅನೇಕ ಸಂಘ-ಸಂಸ್ಥೆಗಳು ಕೆಲಸ ಮಾಡುತ್ತಿವೆ. ಎಲ್ಲರೂ ತಮ್ಮ ಸಾಮಾಜಿಕ ಕಾರ್ಯದ ಭಾಗವಾಗಿ ಶಾಲೆ ಅಥವಾ ಇತರೆಡೆಗಳಲ್ಲಿ ಮಳೆಕೊಯ್ಲು ಅಳವಡಿಕೆಯಲ್ಲಿ ತೊಡಗಿಸಿಕೊಳ್ಳಬೇಕು. ಇದರಿಂದ ಅಂತರ್ಜಲ ವೃದ್ಧಿಯಾಗಿ ನೀರಿನ ಅಭಾವ ತಪ್ಪಿಸಬಹುದು. ಶಾಲೆಯ ಎಲ್ಲ ಮಕ್ಕಳ ಪೋಷಕರಿಗೂ ತಮ್ಮ ಮನೆಗಳಲ್ಲಿ ಮಳೆಕೊಯ್ಲು ಅಳವಡಿಸಲು ಉತ್ತೇಜಿಸುವುದಕ್ಕೆ ನಮ್ಮ ಶಿಕ್ಷಕ ವರ್ಗ ಬದ್ಧವಾಗಿದೆ.
 - ರಾಧಾಕೃಷ್ಣ ಭಟ್‌,ಮುಖ್ಯ ಶಿಕ್ಷಕ ಸರಕಾರಿ ಪ್ರೌಢಶಾಲೆ ಪೊಳಲಿ

ನೀವು ಅಭಿಪ್ರಾಯ ಹಂಚಿಕೊಳ್ಳಿ
ಉದಯವಾಣಿಯ “ಮನೆ ಮನೆಗೆ ಮಳೆಕೊಯ್ಲು’ ಅಭಿಯಾನವು ಒಂದು ತಿಂಗಳು ಪೂರ್ಣಗೊಳಿಸಿರುವ ಹಿನ್ನೆಲೆಯಲ್ಲಿ ಓದುಗರು ಕೂಡ ಈ ಯಶಸ್ವಿ ಅಭಿಯಾನದ ಕುರಿತಂತೆ ತಮ್ಮ ಅಭಿಪ್ರಾಯ, ಅನಿಸಿಕೆ ಅಥವಾ ಸಲಹೆಗಳನ್ನು ಪತ್ರಿಕೆ ಜತೆಗೆ ಹಂಚಿಕೊಳ್ಳಬಹುದು. ಆ ಮೂಲಕ ಈ ಅಭಿಯಾನವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಮುಂದುವರಿಸುವುದಕ್ಕೆ ಉತ್ತೇಜನ ನೀಡಬಹುದು. ಆಸಕ್ತರು ತಮ್ಮ ಹೆಸರು, ಸ್ಥಳದ ಜತೆಗೆ ಸಂಕ್ಷಿಪ್ತ ಬರೆಹಗಳನ್ನು ನಿಮ್ಮ ಫೋಟೋ ಸಹಿತ ನಮಗೆ ಕಳುಹಿಸಬಹುದು. ಸೂಕ್ತ ಅಭಿಪ್ರಾಯ-ಸಲಹೆಗಳನ್ನು ಪ್ರಕಟಿಸಲಾಗುವುದು.
9900567000

          
Advertisement

Udayavani is now on Telegram. Click here to join our channel and stay updated with the latest news.

Next