Advertisement

ನೈಸರ್ಗಿಕ ವಿಧಾನದಿಂದ ವೈಜ್ಞಾನಿಕ ವಿಧಾನದೆಡೆಗೆ ಮಳೆಕೊಯ್ಲು

10:59 PM Aug 15, 2019 | Team Udayavani |

ಕೋಟ: ಮಾಬುಕಳ ಐರೋಡಿಯ ರಾಮನಾಥ ಅಲ್ಸೆಯವರು ಹತ್ತಾರು ವರ್ಷಗಳಿಂದ ನೈಸರ್ಗಿಕ ವಿಧಾನಗಳ ಮೂಲಕ ಮನೆಯ ಪರಿಸರದಲ್ಲಿ ನೀರಿಂಗಿಸುವ ಕಾರ್ಯವನ್ನು ಮಾಡುತ್ತಿದ್ದಾರೆ. ಹೀಗಾಗಿ ಸುತ್ತ-ಮುತ್ತ ನೀರಿನ ಸಮಸ್ಯೆ ಇದ್ದರೂ ಇವರಿಗೆ ಆ ಸಮಸ್ಯೆ ಇಲ್ಲ. ಉದಯವಾಣಿ ಮಳೆಕೊಯ್ಲು ಅಭಿಯಾನದಿಂದ ಪ್ರೇರಿತವಾಗಿ ಮಳೆನೀರು ಕೊಯ್ಲು ಜಾಗೃತಿ ಕಾರ್ಯಕ್ರಮಗಳು ನಡೆಯುತ್ತಿರುವುದರಿಂದ ವೈಜ್ಞಾನಿಕ ವಿಧಾನವನ್ನು ಅಳವಡಿಸಿಕೊಳ್ಳುವುದರ ಮೂಲಕ ಸಮರ್ಪಕ ಮಳೆನೀರು ಕೊಯ್ಲಿಗೆ ಮುಂದಾಗಿದ್ದಾರೆ.
ಮನೆಯ ಮೇಲ್ಛಾವಣಿಯ ನೀರನ್ನು ಪೈಪ್‌ನ ಸಹಾಯದಿಂದ ಎಚ್‌.ಡಿ.ಪಿ.ಇ. ಫಿಲ್ಟರ್‌ಗೆ ಹರಿಯುವಂತೆ ಮಾಡಿ ಅದರಿಂದ ನೇರವಾಗಿ ನೀರು ಬಾವಿ ಸೇರುವಂತೆ ವ್ಯವಸ್ಥೆ ಮಾಡಲಾಗಿದೆ. ಎಚ್‌.ಡಿ.ಪಿ.ಇ. ಫಿಲ್ಟರ್‌ಅಳವಡಿಸಿರುವುದರಿಂದ ಹೆಚ್ಚಿನ ಶ್ರಮವಿಲ್ಲದೆ ನೀರು ಶುದ್ಧಿಗೊಳ್ಳುತ್ತದೆ. ಇದಕ್ಕಾಗಿ ಇವರಿಗೆ ಸುಮಾರು 20ಸಾವಿರ ತನಕ ಖರ್ಚಾಗಿದೆ.

Advertisement

ನೈಸರ್ಗಿಕವಾಗಿಯೇ ನೀರಿಂಗಿಸುವ ವಿಧಾನ
ಕರಾವಳಿಯ ಮೆಕ್ಕಲು (ಮರಳು) ಮಣ್ಣಿನಲ್ಲಿ ನೈಸರ್ಗಿಕ ಸುಲಭವಾಗಿ ನೀರಿಂಗಿಸಬಹುದು. ಹೇಗೆಂದರೆ ಈ ಮಣ್ಣು ಬೇಗ ನೀರನ್ನು ಹೀರಿಕೊಳ್ಳುತ್ತದೆ. ಹೀಗಾಗಿ ಮನೆಯ ಸುತ್ತಲಿನ ತೆಂಗು ಮುಂತಾದ ಮರದ ಕಟ್ಟೆಯನ್ನು ಎರಡು-ಮೂರು ಅಡಿ ಆಳ ತೋಡಿದರೆ ಮಳೆಗಾಲದಲ್ಲಿ ಇದರಲ್ಲಿ ನೀರು ನಿಂತು ಭೂಮಿ ಸೇರುತ್ತದೆ ಹಾಗೂ ಕಾಂಪೌಂಡ್‌ ಇರುವ ಮನೆಗಳಲ್ಲಿ ನೀರು ಹೊರ ಹೋಗಲು ಅಳವಡಿಸುವ ಪೈಪ್‌ ಅನ್ನು ಮಾಮೂಲಿಗಿಂತ ಸ್ವಲ್ಪ ಎತ್ತರಕ್ಕೆ ಅಳವಡಿಸಿದರೆ ಸುತ್ತಲು ನೀರು ನಿಂತು ಅದನ್ನು ಭೂಮಿ ಹೀರಿಕೊಳ್ಳುತ್ತದೆ. ಈ ರೀತಿ ಮಾಡುವಾಗ ಸೊಳ್ಳೆ ಉತ್ಪಾದನೆಯಾಗದಂತೆ ಹಾಗೂ ಕಂಪೌಂಡ್‌ಗೆ ಹಾನಿಯಾಗದಂತೆ ಎಚ್ಚರಿಕೆ ವಹಿಸಬೇಕಾಗುತ್ತದೆ. ಅಲ್ಸೆಯವರು ಈ ವಿಧಾನವನ್ನು ಹತ್ತಾರು ವರ್ಷದಿಂದ ಅಳವಡಿಸಿಕೊಂಡಿದ್ದರು.

ಇತರರಿಗೆ ಮಾರ್ಗದರ್ಶನ ರಾಮನಾಥ ಅಲ್ಸೆಯವರು ತಮ್ಮ ಮನೆಯಲ್ಲಿ ಅಳವಡಿಸಿಕೊಂಡಿರುವ ಮಳೆನೀರು ಕೊಯ್ಲು ವಿಧಾನವನ್ನು ಇತರರಿಗೆ ಪರಿಚಯಿಸಿ ಅಳವಡಿಸಿಕೊಳ್ಳುವಂತೆ ಪ್ರೇರೆಪಿಸುತ್ತಿದ್ದಾರೆ ಹಾಗೂ ಜೀವಜಲ ಎನ್ನುವ ಸಂಸ್ಥೆಯ ಮೂಲಕ ಮಳೆನೀರು ಕೊಯ್ಲು ಕುರಿತು ಜಾಗೃತಿ, ಮಾಹಿತಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ.

ನೀರಿನ ಸಮಸ್ಯೆ ಎದುರಾಗಿಲ್ಲ
ಹಲವು ವರ್ಷದಿಂದ ವೈಜ್ಞಾನಿಕ ವಿಧಾನದ ಮೂಲಕ ಮನೆಯ ವಠಾರದಲ್ಲಿ ನೀರಿಂಗಿಸುತ್ತಿದ್ದ ಪರಿಣಾಮವಾಗಿ ನಮ್ಮ ಮನೆಯಲ್ಲಿ ನೀರಿನ ಸಮಸ್ಯೆ ಎದುರಾಗಿಲ್ಲ. ಇದೀಗ ವೈಜ್ಞಾನಿಕ ವಿಧಾನದ ಮೂಲಕವೇ ಮಳೆ ನೀರು ಕೊಯ್ಲು ಅಳವಡಿಸಿಕೊಂಡಿದ್ದೇನೆ ಹಾಗೂ ಆಸಕ್ತರಿಗೆ ಮಾಹಿತಿ, ಮಾರ್ಗದರ್ಶನ ಕೂಡ ನೀಡುತ್ತಿದ್ದೇನೆ.
-ಎ. ರಾಮಾನಾಥ ಅಲ್ಸೆ,

ನೀವೂ ಅಳವಡಿಸಿ, ವಾಟ್ಸಪ್‌ ಮಾಡಿ
ಉದಯವಾಣಿಯ ಅಭಿಯಾನದಿಂದ ಪ್ರೇರಣೆಗೊಂಡು ಕಾರ್ಯಾಗಾರದಲ್ಲಿ ಭಾಗವಹಿಸಿದವರು ಮಳೆ ನೀರು ಕೊಯ್ಲು ಪದ್ಧತಿಯನ್ನು ತಮ್ಮ ಮನೆಗಳಲ್ಲಿ ಅಳವಡಿಸುತ್ತಿರುವುದು ಗಮನಕ್ಕೆ ಬಂದಿದೆ. ಇನ್ನಷ್ಟು ಮಂದಿಯನ್ನು ಜಲ ಸಂರಕ್ಷಣೆ ಯತ್ತ ತೊಡಗಿಸಲು, ನಿಮ್ಮ ಮನೆಯಲ್ಲಿ ಕೈಗೊಂಡ ಮಳೆ ಕೊಯ್ಲು ವ್ಯವಸ್ಥೆಯ ಕುರಿತು ವಿವರಿಸಿ, ಫೋಟೋ ವಾಟ್ಸಪ್‌ನಲ್ಲಿ ಕಳುಹಿಸಿ. ಅವುಗಳನ್ನು ಪ್ರಕಟಿಸಿ ಮತ್ತಷ್ಟು ಜನರನ್ನು ಉತ್ತೇಜಿಸೋಣ.
7618774529

Advertisement
Advertisement

Udayavani is now on Telegram. Click here to join our channel and stay updated with the latest news.

Next