ಪುತ್ತೂರು: ಕಳೆದ ಮೂರು ದಿನಗಳಿಂದ ಮಳೆ ಪ್ರಮಾಣ ಇಳಿಮುಖವಾಗಿದ್ದು ಅಡಿಕೆ ತೋಟಗಳಿಗೆ ಔಷಧ ಸಿಂಪಡಣೆ ಕಾರ್ಯ ಬಿರುಸು ಪಡೆದಿದೆ. ಇದರ ಜತೆಗೆ ಅಡಿಕೆ ಧಾರಣೆ ಏರಿಕೆಯಿಂದ ಔಷಧ ಸಿಂಪಡಣೆಯ ಕೂಲಿ ಮೊತ್ತವು ಗಗನಕ್ಕೇರಿದೆ.
ಅನಿರೀಕ್ಷಿತ ಮಳೆಯಿಂದ ಹೆಚ್ಚಿನ ಅಡಿಕೆ ಬೆಳೆಗಾರರು ಮದ್ದು ಸಿಂಪಡಣೆ ಮಾಡಿಲ್ಲ. ಬಹುತೇಕ ಕೃಷಿಕರು ಬೋರ್ಡೋ ದ್ರಾವಣ ಬಳಸುವುದು ಇಲ್ಲಿ ಸಾಮಾನ್ಯ. ಆದರೆ ಮೊದಲ ಹಂತದ ಮದ್ದು ಸಿಂಪಡಣೆಗೆ ಮಳೆ ವಿರಾಮ ಕೊಟ್ಟಿಲ್ಲ. ಕಳೆದ ವರ್ಷ ಇದೇ ಅವಧಿಯಲ್ಲಿ ಕೆಲವು ತೋಟಗಳಲ್ಲಿ ಎರಡನೇ ಬಾರಿ ಮದ್ದು ಸಿಂಪಡಿಸಲಾಗಿತ್ತು. ಹಾಗಾಗಿ ಈ ಬಾರಿ ಮದ್ದು ಬಿಡದೆ ರೋಗ ಬಾಧೆಯ ಆತಂಕವೂ ಮೂಡಿದೆ.
ಮದ್ದು ಸಿಂಪಡಣೆಗೆ ಸಿದ್ಧತೆ ನಡೆಸಿದವರಿಗೆ ಜಡಿಮಳೆ ಅಡ್ಡಿಯಾಗಿತ್ತು. ಅಪರೂಪಕ್ಕೆ ಬಿಸಿಲು ಕಾಣಿಸಿಕೊಂಡಾಗ ಸಣ್ಣಪುಟ್ಟ ತೋಟಗಳಿಗೆ ಔಷಧ ಸಿಂಪಡಿಸಿದ್ದೂ ಇದೆ. ಅಗತ್ಯದ ಸಂದರ್ಭಕ್ಕೆ ಕಾರ್ಮಿಕರು ಸಿಗುತ್ತಿಲ್ಲ. ಬೇಸಗೆಯಲ್ಲಿ ಯಥೇತfವಾಗಿ ನೀರು ಹಾಯಿಸಿದ ತೋಟಗಳಲ್ಲಿ, ನದಿತಟದ ಭಾಗಗಳಲ್ಲಿ ರೋಗ ಹೆಚ್ಚು ಕಾಣುತ್ತಿದೆ ಎನ್ನುತ್ತಾರೆ ಬೆಳೆಗಾರರು.
ಗಗನಕ್ಕೇರಿದ ಕೂಲಿ:
ಅಡಿಕೆ ಧಾರಣೆ ಏರಿಕೆ ಬೆನ್ನಲ್ಲೇ ಔಷಧ ಸಿಂಪಡಣೆಯ ಕೂಲಿ ಮೊತ್ತವು ಗಗನಕ್ಕೇರಿದೆ. ಕಳೆದ ವರ್ಷ ದಿನವೊಂದರಲ್ಲಿ ಓರ್ವ ಕಾರ್ಮಿಕನಿಗೆ 1,400 ರೂ. ಇತ್ತು. ಈ ಬಾರಿ 1,600 ಕ್ಕೆ ಏರಿಕೆ ಕಂಡಿದೆ. ಇನ್ನೂ ಕೆಲವೆಡೆ ಔಷಧ ಪ್ರಮಾಣದ ಆಧರಿಸಿ ಕೂಲಿ ದರ ನಿರ್ಧರಿಸಲಾಗುತ್ತಿದೆ. ಹೀಗಿದ್ದೂ ಕೆಲವೆಡೆ ಔಷಧ ಸಿಂಪಡಿಸುವ ಕಾರ್ಮಿಕರ ಕೊರತೆ ಇದೆ. ಹೀಗಾಗಿ ಹತ್ತಿರದ ಊರು, ಗ್ರಾಮಗಳಿಂದ ಕಾರ್ಮಿಕರನ್ನು ಕರೆದೊಯ್ಯುವ ಸ್ಥಿತಿ ಉಂಟಾಗಿದೆ. ಒಂದೆಡೆ ರಸಗೊಬ್ಬರ, ಔಷಧ, ನೀರಾವರಿ ಪೈಪುಗಳ ಧಾರಣೆ ಭಾರೀ ಏರಿಕೆ ಕಂಡ ಬೆನ್ನಲ್ಲೇ ಕೂಲಿ ಏರಿಕೆಯ ಬಿಸಿಯು ಬೆಳೆಗಾರನಿಗೆ ತಟ್ಟಿದೆ.