ಬೆಳಗಾವಿ: ಸತತ ಭೀಕರ ಬರದಿಂದ ಕಂಗೆಟ್ಟಿರುವ ಗಡಿನಾಡು ಬೆಳಗಾವಿ ಜಿಲ್ಲೆಯಲ್ಲಿ ಈ ವರ್ಷ ಮುಂಗಾರು ಪೂರ್ವ ಮಳೆ ಸಹ ಆತಂಕ ತಂದಿಟ್ಟಿದೆ. ವಾಡಿಕೆಗಿಂತ ಪ್ರತಿಶತ 78 ರಷ್ಟು ಮಳೆಯ ಕೊರತೆ ಉಂಟಾಗಿರುವದು ಈ ಆತಂಕಕ್ಕೆ ಕಾರಣ. ಮಳೆಯ ತೀವ್ರ ಅಭಾವದಿಂದಾಗಿ ಈ ವೇಳೆಗೆ ಅಲ್ಲಲ್ಲಿ ಕಾಣುತ್ತಿದ್ದ ಕೃಷಿ ಚಟುವಟಕೆಗಳಿಗೆ ಗರ ಬಡಿದಿದೆ.
ಮಾರ್ಚ್, ಏಪ್ರಿಲ್ ಹಾಗೂ ಮೇ ತಿಂಗಳು ಮುಂಗಾರು ಪೂರ್ವ ಮಳೆಯ ಅವಧಿ. ಈ ಮೂರು ತಿಂಗಳಲ್ಲಿ ಬರುವ ಮಳೆ ಕೃಷಿ ಚಟುವಟಿಕೆಗಳಿಗೆ ನೀರು ನೀಡುತ್ತದೆ. ರೈತರು ಭೂಮಿ ಹಸನು ಮಾಡಿಕೊಳ್ಳುತ್ತಾರೆ. ಆದರಲ್ಲೂ ಮೇ ಎರಡನೇ ವಾರದಲ್ಲಿ ಬೀಳುವ ಮಳೆ ಕೃಷಿ ಕಾರ್ಯ ಬಹಳ ಜೋರಾಗಿ ನಡೆಯುವಂತೆ ಮಾಡುತ್ತದೆ.
ಏಪ್ರಿಲ್ ತಿಂಗಳಲ್ಲಿ ಜಿಲ್ಲೆಯ ಕೆಲ ಭಾಗಗಳಲ್ಲಿ ಬಿದ್ದ ಅಡ್ಡ ಮಳೆ ರೈತ ಸಮುದಾಯದಲ್ಲಿ ಒಂದಿಷ್ಟು ಆಶಾಭಾವನೆ ಹುಟ್ಟಿಸಿತ್ತು. ಮೇ ತಿಂಗಳಲ್ಲಿ ಸಹ ಇದೇ ರೀತಿ ಮಳೆಯಾದರೆ ನಮ್ಮ ಬಿತ್ತನೆಗೆ ಸಮಸ್ಯೆ ಇಲ್ಲ ಎಂದೇ ರೈತರು ಭಾವಿಸಿದ್ದರು. ಆದರೆ ಮೇ ತಿಂಗಳಲ್ಲಿ ಮಳೆಯೇ ಬೀಳಲಿಲ್ಲ. ಇದರಿಂದ ಮತ್ತೆ ಬರದ ಭಯ ರೈತರಲ್ಲಿ ಮೂಡಿದೆ. ಮುಂಗಾರು ಪೂರ್ವ ಮಳೆಗೂ ಬರದ ಛಾಯೆ ಆವರಿಸಿದೆ.
ಕಳೆದ ಮೂರ್‍ನಾಲ್ಕು ವರ್ಷಗಳಿಗೆ ಹೋಲಿಸಿದರೆ ಈ ವರ್ಷ ಮುಂಗಾರು ಪೂರ್ವ ಮಳೆ ರೈತರ ಕೈಹಿಡಿದಿಲ್ಲ. ಮಳೆಯ ಕೊರತೆಯಿಂದ ಕೃಷಿ ಚಟುವಟಿಕೆಗಳು ಸಂಪೂರ್ಣ ಸ್ಥಗಿತಗೊಂಡಿದ್ದರೆ ಇನ್ನೊಂದು ಕಡೆ ನೀರಿನ ಹಾಹಾಕಾರ ಹೆಚ್ಚಿದೆ. ಜಾನುವಾರುಗಳಿಗೆ ಕುಡಿಯುವ ನೀರಿನ ಜೊತೆಗೆ ಮೇವಿನ ಸಮಸ್ಯೆ ಆರಂಭವಾಗಿದೆ. ವಾಡಿಕೆಗೆ ಹತ್ತಿರವೂ ಇಲ್ಲ
ಸಾಮಾನ್ಯವಾಗಿ ಜಿಲ್ಲೆಯಲ್ಲಿ ಮುಂಗಾರು ಪೂರ್ವ ಅವದಿಯಲ್ಲಿ ಅಂದರೆ ಮಾರ್ಚ್ ದಿಂದ ಮೇ ವರೆಗೆ ವಾಡಿಕೆಯಂತೆ ಶೇ.76 ರಷ್ಟು ಮಳೆಯಾಗಬೇಕು. ಆದರೆ ಈ ವರ್ಷ ಆಗಿದ್ದು ಕೇವಲ ಶೇ.17.1 ರಷ್ಟು ಮಾತ್ರ. ಆದರೆ ಕಳೆದ ವರ್ಷ ಅಂದರೆ 2018 ರಲ್ಲಿ ವಾಡಿಕೆಗಿಂತ ಶೇ.18 ರಷ್ಟು ಹೆಚ್ಚು ಮಳೆಯಾಗಿತ್ತು. ಆಗ ಸುಮಾರು 22 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಕಾರ್ಯ ಸಹ ನಡೆದಿತ್ತು. ಈ ವರ್ಷ ಮಳೆಯೇ ಆಗದ್ದರಿಂದ ಇದುವರೆಗೆ ಎಲ್ಲಿಯೂ ಬಿತ್ತನೆ ನಡೆದಿಲ್ಲ. ಅನೇಕ ಕಡೆ ಭೂಮಿ ಹಸನು ಮಾಡಿಕೊಳ್ಳುವ ಕಾರ್ಯಕ್ಕೆ ಚಾಲನೆಯೂ ಸಿಕ್ಕಿಲ್ಲ.
ಈ ವರ್ಷ ವಾಡಿಕೆಗಿಂತ ಬಹಳ ಕಡಿಮೆ ಪ್ರಮಾಣದಲ್ಲಿ ಮಳೆ ಬಿದ್ದಿದೆ. ಪ್ರತಿ ವರ್ಷ ಮೇ ಎರಡನೇ ವಾರದಲ್ಲಿ ಉತ್ತಮ ಮುಂಗಾರು ಪೂರ್ವ ಮಳೆಯಾಗಿ ಕೃಷಿ ಚಟುವಟಿಕೆಗಳು ವೇಗ ಪಡೆದುಕೊಳ್ಳುತ್ತಿದ್ದವು. ಆದರೆ ಈಗ ಅಂತಹ ಸ್ಥಿತಿ ಇಲ್ಲ. ಈಗಲೂ ಸಮಯ ಮೀರಿಲ್ಲ. ಒಳ್ಳೆಯ ಮಳೆ ಬಿದ್ದರೆ ಸೋಯಾ, ಹೆಸರು, ಉದ್ದು, ಮೊದಲಾದ ಬೆಳೆಗಳಿಗೆ ಬಹಳ ಅನುಕೂಲವಾಗುತ್ತದೆ. ರೈತರಿಗೆ ಕೃಷಿ ಚಟುವಟಿಕೆಗಳಿಗೆ ಬೇಕಾದ ಕೃಷಿ ಪರಿಕರಗಳನ್ನು ಒದಗಿಸಲು ಇಲಾಖೆಯಿಂದ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಇಲಾಖೆಯ ಜಂಟಿ ನಿರ್ದೇಶಕ ಜಿಲಾನಿ ಎಚ್ ಮೊಕಾಸಿ ಉದಯವಾಣಿಗೆ ಹೇಳಿದರು.
ಕೃಷಿ ಇಲಾಖೆಯು ಪ್ರತಿ ವರ್ಷದಂತೆ ಬಿತ್ತನೆ ಕಾರ್ಯಕ್ಕೆ ಅಗತ್ಯವಾದ ಬೀಜ ಹಾಗೂ ಗೊಬ್ಬರ ದಾಸ್ತಾನು ಮಾಡಿಟ್ಟುಕೊಂಡಿದೆ. ರೈತರ ಅನುಕೂಲಕ್ಕಾಗಿ ಇಲಾಖೆಯು ಬೀಜ ಮತ್ತು ಗೊಬ್ಬರದ ವಿರರಣೆಗೆ 122 ಕೇಂದ್ರಗಳನ್ನು ಸ್ಥಾಪಿಸಿದೆ. ಆದರೆ ಮಳೆಯೇ ಇಲ್ಲದೆ ರೈತರು ಬೀಜ ಹಾಗೂ ಗೊಬ್ಬರದ ಖರೀದಿಗೆ ಮುಂದೆ ಬರುತ್ತಿಲ್ಲ.