Advertisement

ಪಾಂಡೇಶ್ವರ ಸುತ್ತ-ಮುತ್ತ ಮಳೆ ಅವಾಂತರ; ಜನರಿಗೆ ನಿದ್ದೆಯಿಲ್ಲ

11:14 AM May 31, 2018 | |

ಮಹಾನಗರ: ಮಹಿಳೆಯೊಬ್ಬರು ಅಳುತ್ತಿರುವ ಮಗುವನ್ನು ಕಂಕುಳಲ್ಲಿರಿಸಿಕೊಂಡು ತೊಯ್ದು ತೊಪ್ಪೆಯಾದ ಬಟ್ಟೆ ಬರೆಗಳನ್ನು ಆಯ್ದು ಒಣಗಲು ಹಾಕುತ್ತಿದ್ದರು. ಮನೆಯೊಳಗೆ ನೀರು ನುಗ್ಗಿದ್ದಕ್ಕೆ ಸಾಕ್ಷಿ ಎಂಬಂತೆ ಮನೆಯೊಳಗಿದ್ದ ಪಾತ್ರೆ-ಪಗಡಿಗಳೆಲ್ಲ ಒಂದೆಡೆ ರಾಶಿ ಬಿದ್ದಿದ್ದವು. ಇಲ್ಲಿ ಹೆಚ್ಚಿನ ಮನೆಗಳಿಗೂ ಚರಂಡಿ ನೀರು ನುಗ್ಗಿದ್ದುದರಿಂದ ಮೂಗು ಮುಚ್ಚುವಷ್ಟು ದುರ್ನಾತ.

Advertisement

ಇದು ಮಂಗಳವಾರ ಇಡೀದಿನ ಸುರಿದ ಮಳೆಗೆ ನೀರು ನುಗ್ಗಿ ಹೆಚ್ಚಿನ ತೊಂದರೆಗೆ ಒಳಗಾದ ಪ್ರದೇಶಗಳ ಪೈಕಿ ಪಾಂಡೇಶ್ವರ, ಹೊಯಿಗೆ ಬಜಾರ್‌, ಜಪ್ಪಿನಮೊಗರು ಹಾಗೂ ಸುತ್ತಮುತ್ತಲು ಅತ್ಯಧಿಕ ನಷ್ಟ-ಹಾನಿ ಸಂಭವಿಸಿದೆ. ‘ಸುದಿನ’ ಬುಧವಾರ ಈ ಭಾಗದಲ್ಲಿರುವ ಜನರ ಜೀವನ ಸಹಜ ಸ್ಥಿತಿಗೆ ಅರಿ ಯಲು ಹೋದಾಗ ಅಲ್ಲಿ ಕಂಡುಬಂದ ಮುಖ್ಯ ಸಮಸ್ಯೆಗಳಿವು.

ಬೆಳಗ್ಗೆ ಸುಮಾರು 10.30ರ ಸುಮಾರಿಗೆ ಪಾಂಡೇಶ್ವರ ಶಿವನಗರ ರೈಲ್ವೇ ಗೇಟು ಬಳಿ ಹೋದಾಗ ಆ ಪ್ರದೇಶದ ಬಹುತೇಕ ಎಲ್ಲ ನಿವಾಸಿಗಳು ನೀರು ನುಗ್ಗಿದ ತಮ್ಮ ಮನೆಯನ್ನು ಗುಡಿಸಿ ಸ್ವಚ್ಛಗೊಳಿಸುತ್ತಿದ್ದರು. ಸಂಕಷ್ಟಗಳ ಬಗ್ಗೆ ಕೇಳುವ ಮೊದಲೇ ಯಾರೋ ಮಹಾನಗರ ಪಾಲಿಕೆ ಕಡೆಯಿಂದ ಬಂದವರಾಗಿರಬೇಕೆಂದುಕೊಂಡು ಪಾಲಿಕೆಯ ಬೇಜವಾಬ್ದಾರಿ ಬಗ್ಗೆ ಆಕ್ರೋಶ ಹೊರಹಾಕಿದರು.

 ‘ನೀರು ನಿಲ್ಲುವ ಜಾಗವನ್ನೆಲ್ಲ ಮಣ್ಣುಹಾಕಿ ತುಂಬಿಸಿ ಅಲ್ಲಿ ಕಟ್ಟಡ ಕಟ್ಟಲು ಅನಮತಿ ಕೇಳುತ್ತಾರೆ. ಮುಂದಾಲೋಚನೆ ಇಲ್ಲದೆ ಅಕ್ರಮ ಕಟ್ಟಡಗಳಿಗೂ ಅಧಿಕಾರಿಗಳು ಅನುಮತಿ ನೀಡುತ್ತಾರೆ. ಹೀಗಾಗಿ ಮಳೆ ನೀರೆಲ್ಲ ಮನೆಗಳಿಗೆ ನುಗ್ಗುತ್ತದೆ. ಯಾರೋ ಮಾಡಿದ ಪಾಪಕ್ಕೆ ನಾವಿಲ್ಲಿ ಬಲಿಪಶುಗಳು’ ಹೀಗೆಂದು ತಮಗೆ ಅಸಹಾಯಕತೆ ವ್ಯಕ್ತಪಡಿಸಿದವರು ಶಿವನಗರದ ನಿವಾಸಿ ರೋಹಿತ್‌.

32 ವರ್ಷಗಳ ಹಿಂದೆ ಇಂತಹದ್ದೇ ಮಳೆ, ನೆನಪು!
ಮಂಗಳವಾರ ರಾತ್ರಿ ಆ ವಠಾರದ ಯಾರೂ ಕೂಡ ನಿದ್ದೆ ಮಾಡಿರಲಿಲ್ಲವೆಂದು ಅವರನ್ನು ನೋಡುವಾಗಲೇ ಗೊತ್ತಾಗುತ್ತಿತ್ತು. ಪ್ರತಿಯೊಬ್ಬರೂ ಬೆಲೆ ಬಾಳುವ ವಸ್ತುಗಳು ಕೆಟ್ಟು ಹೋದ ಬಗ್ಗೆಯೇ ಪರಸ್ಪರ ನೋವು ತೋಡಿಕೊಳ್ಳುತ್ತಿದ್ದರು. ಅದೇ ಪರಿಸರದ ಸುಮಾರು 65ರ ಹರೆಯದ ವೃದ್ಧೆ ಸುಮತಿ ಪ್ರಕಾರ, ‘ಸುಮಾರು 32 ವರ್ಷಗಳ ಹಿಂದೊಮ್ಮೆ ಹೀಗೆಯೇ ಮಳೆಯಾಗಿದ್ದ ನೆನಪು. ಆಗ ನಮ್ಮ ಮನೆ ಇನ್ನಷ್ಟು ತಗ್ಗಿನಲ್ಲಿದ್ದುದರಿಂದ ಮನೆಯೊಳಗೆಲ್ಲ ನೀರು ಬಂದಿತ್ತು. ಆದರೆ ಅದು ಮಳೆಗಾಲವಾಗಿತ್ತು. ಮಳೆಗಾಲ ಶುರುವಾಗುವುದಕ್ಕೆ ಮೊದಲೇ ಇಷ್ಟೊಂದು ಹಾನಿಯಾಗಿರುವುದು ನಾನು ನೋಡಿದ ಹಾಗೆ ಇದೇ ಮೊದಲು’ ಎಂದರು.

Advertisement

ಪಕ್ಕದಲ್ಲಿದ್ದ ನೆಫೀಸಾ ಅವರಲ್ಲಿ ನಿನ್ನೆ ಮಳೆ ಯಿಂದ ತೊಂದರೆಯಾಗಿತ್ತೇ ಎಂದು ಕೇಳಿದಾಗ ‘ಅಯ್ಯೋ, ಅದನ್ನೇನು ಕೇಳುತ್ತೀರಿ? ರಾತ್ರಿ ಇಡೀ ನಿದ್ದೆಯೇ ಇಲ್ಲ. ನಿದ್ದೆ ಮಾಡಿದರೆ ಎಲ್ಲಿ ನೀರೆಲ್ಲ ಒಳ ಬರುತ್ತದೆಯೋ ಎಂಬ ಭಯದಲ್ಲೇ ಕುಳಿತು ದಿನ ಬೆಳಗು ಮಾಡುವ ಸ್ಥಿತಿ ಬಂತು’ ಎಂದರು. ಅಲ್ಲೇ ಇದ್ದ ಸೆಲಿಕಾ ಅವರು, ತಮ್ಮ ಮನೆ ಕಾಂಪೌಂಡ್‌ ಬಳಿ ಇರುವ ಗಜ ಗಾತ್ರದ ಮರವೊಂದು ತನ್ನ ಮನೆಯತ್ತ ಬಾಗಿದ್ದು, ‘ಈ ಅಪಾಯಕಾರಿ ಮರ ಕಡಿಯಬೇಕೆಂದು ಹಲವಾರು ಬಾರಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ದೂರಿತ್ತೆವು. ಆದರೆ, ಅದು ನಮಗೆ ಸೇರಿದ ಜಾಗವಲ್ಲ; ರೈಲ್ವೇಯವರದ್ದು ಎಂದು ಹೇಳಿ ಕೈತೊಳೆದುಕೊಂಡಿದ್ದಾರೆ’ ಎನ್ನುತ್ತಾರೆ. 

ಕೆಲಸ ಇಲ್ಲ,ನಿದ್ದೆ ಇಲ್ಲ
ಉತ್ತರ ಪ್ರದೇಶದಿಂದ ಬಂದು ನಗರದಲ್ಲಿ ಪಾನಿಪುರಿ ಅಂಗಡಿ ಇರಿಸಿ ಜೀವನ ನಡೆಸು ತ್ತಿದ್ದ ಸುನೀಲ್‌ ಚೌಹಾನ್‌, ಗೋಪಾಲ್‌ ಮೊದಲಾದವರು ಪಾನಿಪುರಿ ಮಾಡಲು ಬೇಕಾದ ವಸ್ತುಗಳನ್ನೆಲ್ಲ ಎತ್ತಿಡುತ್ತಿದ್ದರು. ಮೊಣಕಾಲಿನವರೆಗೆ ನೀರು ನಿಂತಿದ್ದರಿಂದ ನಿನ್ನೆ ನಿದ್ದೆಯೇ ಮಾಡಲಾಗಲಿಲ್ಲ. ಇವತ್ತು ಹೇಗೋ ಗೊತ್ತಿಲ್ಲ. ಹೀಗಾದರೆ ಜೀವನ ನಡೆಸುವುದಾದರೂ ಹೇಗೆ? ಎಂದು ಪ್ರಶ್ನಿಸಿದರು.

ನೀತಿ ಸಂಹಿತೆ ತೊಡಕಾಗಿತ್ತು
ಪಾಲಿಕೆಯವರು ಚರಂಡಿ ಶುಚಿಗೊಳಿಸುತ್ತಿರುವುದು ಕಂಡುಬಂತು. ಸ್ಥಳೀಯ ಪಾಲಿಕೆ ಸದಸ್ಯೆ ಕವಿತಾ ವಾಸು ಸ್ಥಳದಲ್ಲೇ ಇದ್ದರು. ‘ಚುನಾವಣ ನೀತಿ ಸಂಹಿತೆ ಇದ್ದ ಕಾರಣ ಈ ಬಾರಿ ರಸ್ತೆ ಕೆಲಸವಾಗಲಿ, ಚರಂಡಿ ಕೆಲಸವಾಗಲಿ ಮಾಡಲಾಗಲಿಲ್ಲ. ಮಳೆ ಪ್ರಾರಂಭಗೊಂಡ ಮೇಲೆ ‘ಗ್ಯಾಂಗ್‌ಮ್ಯಾನ್‌’ ಎಂದು ಐದು ಜನ ಕೆಲಸಗಾರರನ್ನು ಪಾಲಿಕೆ ವತಿಯಿಂದ ನೀಡುತ್ತಾರೆ. ಮಳೆ ಬರುವ ಮೊದಲೇ ಕೊಟ್ಟಿದ್ದರೆ ಅನುಕೂಲವಾಗುತ್ತಿತ್ತು’ ಎನ್ನುವುದು ಅವರ ವಾದವಾಗಿತ್ತು .

‌ಗಣೇಶ್‌ ಮಾವಂಜಿ

Advertisement

Udayavani is now on Telegram. Click here to join our channel and stay updated with the latest news.

Next