ಹುಬ್ಬಳ್ಳಿ: ಮೊಬೈಲ್ ಖರೀದಿಸಿದ ಕೂಡಲೇ ಅದಕ್ಕೆ ಲ್ಯಾಮಿನೇಷನ್ ಮಾಡಿಸುತ್ತಾರೆ, ಇಲ್ಲವೇ ರಬ್ಬರ್ ಅಥವಾ ಪ್ಲಾಸ್ಟಿಕ್ ಕವರ್ ಹಾಕಿಸುತ್ತಾರೆ. ಮೊಬೈಲ್ ಬಿದ್ದರೆ ಹಾಳಾಗದಂತೆ ಇದು ತಡೆಯಬಹುದು. ಆದರೆ ಆಕಸ್ಮಿಕವಾಗಿ ನೀರಿಗೆ ಬಿದ್ದರೆ? ಆಗ ಮೊಬೈಲ್‌ಗಳು ಹಾಳಾಗದಂತೆ, ಅಮೂಲ್ಯ ಡಾಟಾ ನಾಶವಾಗದಂತೆ ತಡೆಯಲು ವಾಟರ್‌ಪ್ರೂಫ್ ಕೋಟಿಂಗ್ ಮಾಡುವ ಟ್ರೆಂಡ್ ಹುಬ್ಬಳ್ಳಿಯಲ್ಲಿ ಇದೀಗ ಶುರುವಾಗಿದೆ.
ಬೆಂಗಳೂರಿನಲ್ಲಿ ಮೊಬೈಲ್‌ಗಳಿಗೆ ವಾಟರ್ ಪ್ರೂಫಿಂಗ್ ಮಾಡಿಸುವ ಟ್ರೆಂಡ್ ಜೋರಾಗಿದ್ದು, ಈಗ ಹುಬ್ಬಳ್ಳಿಗೂ ಕಾಲಿಟ್ಟಿದೆ. ಇಲ್ಲಿನ ಹರ್ಷಾ ಕಾಂಪ್ಲೆಕ್ಸ್‌ನಲ್ಲಿ ಮೊಬೈಲ್ ವ್ಯಾಪಾರಿಯೊಬ್ಬರು ನೂತನ ತಂತ್ರಜ್ಞಾನದ ಯಂತ್ರ ತಂದಿದ್ದು, ಪ್ರತಿದಿನ ಹಲವಾರು ಮೊಬೈಲ್ ಪ್ರಿಯರು ವಾಟರ್ ಪ್ರೂಫಿಂಗ್ ಮಾಡಿಸಿಕೊಳ್ಳುತ್ತಿದ್ದಾರೆ.
ಏನಿದು ವಾಟರ್ ಪ್ರೂಫಿಂಗ್: ಮೊಬೈಲ್‌ಗೆ ಲ್ಯಾಮಿನೇಷನ್ ಮಾಡಿದರೆ ಅದರಲ್ಲಿ ಧೂಳು ಸೇರಿಕೊಳ್ಳದಂತೆ ರಕ್ಷಿಸಬಹುದು, ಆದರೆ ನ್ಯಾನೊವಾಟರ್‌ಪ್ರೂಫ್ ಕೋಟಿಂಗ್ ಮಾಡಿದರೆ ಮೊಬೈಲ್ ನೀರಿನಲ್ಲಿ ಬಿದ್ದರೂ ಅದಕ್ಕೆ ಏನೂ ಆಗುವುದಿಲ್ಲ. ಮೊಬೈಲ್ ನೀರಿನಲ್ಲಿದ್ದರೂ ಬಂದ್ ಆಗುವುದಿಲ್ಲ. ವಾಟರ್ ಪ್ರೂಫಿಂಗ್ ಯಂತ್ರದಲ್ಲಿ ಮೊಬೈಲ್ ಹಾಕಿದರೆ ಮೊದಲು ಮೊಬೈಲ್ ವಾಷ್ ಆಗುತ್ತದೆ. ನಂತರ ಅದಕ್ಕೆ ಒಂದು ರಾಸಾಯನಿಕದ ಲೇಪನವಾಗುತ್ತದೆ. ಇದು ಡ್ರೈಯರ್‌ನಲ್ಲಿ ಒಣಗಿದ ನಂತರ ಮೊಬೈಲ್ ವಾಟರ್‌ಪ್ರೂಫ್ ಆಗುತ್ತದೆ. ಒಮ್ಮೆ ಯಂತ್ರದಲ್ಲಿ ಒಂದು ಮೊಬೈಲ್ ಮಾತ್ರ ಹಾಕಬಹುದು. ಮೊಬೈಲ್ ವಾಟರ್ ಪ್ರೂಫ್ ಆಗಲು ಸುಮಾರು 20 ನಿಮಿಷಗಳ ಕಾಲಾವಕಾಶ ಬೇಕಾಗುತ್ತದೆ. ಪ್ರಕ್ರಿಯೆ ನಂತರ ಮೊಬೈಲನ್ನು ಗ್ರಾಹಕರ ಎದುರು ನೀರಿನಲ್ಲಿ ಮುಳುಗಿಸಿ ಪರೀಕ್ಷಿಸಿ ನೀಡಲಾಗುತ್ತದೆ. ಕೋಟ್ ನಂತರ ಮೊಬೈಲ್‌ನ್ನು ನೀರಿನಲ್ಲಿ ಕೂಡ ಆಪರೇಟ್ ಮಾಡಬಹುದಾಗಿದೆ. ನೀರಿನಲ್ಲಿಟ್ಟು ವಿಡಿಯೋಗಳನ್ನು ಕೂಡ ವೀಕ್ಷಿಸಲು ಸಾಧ್ಯವಾಗುತ್ತದೆ.
ಅಲ್ಲದೇ ಇದು ಧೂಳು ಹೋಗದಂತೆ ತಡೆಯಬಲ್ಲದು. ರೇಡಿಯೇಶನ್‌ನಿಂದ ಕೂಡ ರಕ್ಷಣೆ ನೀಡಬಲ್ಲದು. ಪ್ರತಿ ಮೊಬೈಲ್‌ಗೆ ವಾಟರ್‌ಪ್ರೂಫ್ ಕೋಟ್ ಮಾಡಲು 800ರಿಂದ 1000ರೂ. ವರೆಗೆ ಪಡೆಯಲಾಗುತ್ತಿದೆ. ಆದರೂ ಯುವಕರು ಮೊಬೈಲ್‌ಗೆ ಹೊಸ ಕೋಟಿಂಗ್ ಮಾಡಿಸಲು ಮುಂದಾಗುತ್ತಿದ್ದಾರೆ.
ಕೆಳಗೆ ಬಿದ್ದರೆ ಮುಗೀತು! : ವ್ಯಾಕ್ಯುಮ್ ಕೋಟಿಂಗ್ ಯಂತ್ರ ಬಳಕೆ ಮಾಡಿ ವಾಟರ್‌ಪ್ರೂಫಿಂಗ್ ಮಾಡಲಾಗುತ್ತಿದೆ. ನ್ಯಾನೊ ವಾಟರ್ ಕೋಟಿಂಗ್ ಮಾಡಿದ ನಂತರ ಮೊಬೈಲ್ ಕೆಳಗೆ ಬೀಳದಂತೆ ನೋಡಿಕೊಳ್ಳುವುದು ಅತಿ ಮುಖ್ಯ. ಯುವಕರು ಹೆಚ್ಚಾಗಿ ಇದರತ್ತ ಆಸಕ್ತಿ ತೋರುತ್ತಿದ್ದಾರೆ. ಹುಬ್ಬಳ್ಳಿಯಲ್ಲಿ ಈ ತಂತ್ರಜ್ಞಾನ ಲಭ್ಯ ಇರಲಿಲ್ಲ. ಈಗ ಲಭಿಸುತ್ತಿದೆ. ವಾಟರ್‌ಪ್ರೂಫ್ ಕೋಟಿಂಗ್ ನಂತರ ಮಳೆಯಲ್ಲಿಯೂ ನಿರಾತಂಕವಾಗಿ ಮೊಬೈಲ್ ಬಳಕೆ ಮಾಡಬಹುದು ಎಂದು ಸಂತೋಷ ಟೆಲಿಕಾಂನ ಸಂತೋಷ ಚವ್ಹಾಣ ಹೇಳುತ್ತಾರೆ.
ಹೊಸ ಅನುಭವ : ಮೊಬೈಲನ್ನು ನೀರಿನ ಹಾನಿಯಿಂದ ತಪ್ಪಿಸುವುದು ಹೇಗೆಂಬುದು ದೊಡ್ಡ ಆತಂಕವಾಗಿತ್ತು. ಇದೀಗ ನ್ಯಾನೊ ವಾಟರ್ ಕೋಟಿಂಗ್ ತಂತ್ರಜ್ಞಾನ ಹುಬ್ಬಳ್ಳಿಯಲ್ಲಿಯೂ ಲಭಿಸುತ್ತಿದೆ. ಮೊಬೈಲ್ ನೀರಿನಲ್ಲಿ ಬೀಳುತ್ತದೆ ಎಂಬ ಆತಂಕಕ್ಕಿಂತಲೂ ಇದೊಂದು ಹೊಸ ಟ್ರೆಂಡ್. ಮೊಬೈಲ್‌ಗೆ ಕೋಟ್ ಮಾಡಿಸಿದ ನಂತರ ನೀರಿನಲ್ಲಿ ಮೊಬೈಲ್ ಇರಿಸಿ ಆಪರೇಟ್ ಮಾಡುವುದು ಹೊಸ ಅನುಭವ ನೀಡುತ್ತದೆ ಎನ್ನುತ್ತಾರೆ ಕಾಲೇಜು ವಿದ್ಯಾರ್ಥಿ ರಾಮಚಂದ್ರ.
-ವಿಶ್ವನಾಥ ಕೋಟಿ