ಚಿಕ್ಕಮಗಳೂರು: ಕಳೆದ ಒಂದು ತಿಂಗಳಿನಿಂದ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಕಾಫಿನಾಡಿನ ಮಲೆನಾಡು ಭಾಗದಲ್ಲಿ ಮಳೆ ಅಬ್ಬರ ಹೆಚ್ಚಾಗಿದೆ.
ಒಂದು ತಿಂಗಳಿನಿಂದ ಎಡೆಬಿಡದೆ ಮಳೆ ಸುರಿಯುತ್ತಿರುವ ಪರಿಣಾಮ, ಜನಜೀವನ ಅಸ್ತವ್ಯಸ್ತಗೊಂಡಿದ್ದು, ಕಾಫಿ ಬೆಳೆಗಾರರನ್ನು ಕಂಗಾಲಾಗುವಂತೆ ಮಾಡಿದೆ.
ಈಗಾಗಲೇ ಶೀತ ಹೆಚ್ಚಾಗಿ, ಬೆಳೆಗಳು ನಾಶವಾಗುತ್ತಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ, ಕಟಾವಿಗೆ ಬಂದ ಕಾಫಿ ಬೆಳೆ ಉದುರಿಹೋಗುತ್ತಿದ್ದು, ರೈತರಿಗೆ ನುಂಗಲಾರದ ತತ್ತಾಗಿ ಪರಿಣಮಿಸಿದೆ.
ಇದನ್ನೂ ಓದಿ: ಹೂಡಿಕೆದಾರರಿಗೆ ನಷ್ಟ: ಬಾಂಬೆ ಷೇರುಪೇಟೆ ಸೆನ್ಸೆಕ್ಸ್ 336 ಅಂಕ ಕುಸಿತ, ನಿಫ್ಟಿ ಇಳಿಕೆ
ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ, ಚಾರ್ಮಾಡಿ ಘಾಟ್, ಬಣಕಲ್, ಬಾಳೂರಲ್ಲಿ ಮುಂತಾದ ಭಾಗಗಳಲ್ಲೂ ಭಾರೀ ಮಳೆ ಸುರಿಯುತ್ತಿದ್ದು, ನಿರಂತರ ಮಳೆಯಿಂದ ಚಾರ್ಮಾಡಿ ಘಾಟ್ ಸುತ್ತಮುತ್ತ ಪ್ರದೇಶಗಳಲ್ಲಿ ಮಂಜು ಮುಸುಕಿದ ವಾತಾವರಣವಿದ್ದು, ಈ ವಾತಾವರಣದಲ್ಲಿ ವಾಹನ ಸವಾರರು ಪರದಾಡುವಂತೆ ಆಗಿದೆ.
ಜಿಲ್ಲೆಯಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ, ಜನರು ಮನೆಯಿಂದ ಹೊರಬರಲು ಹಿಂದೇಟು ಹಾಕುತ್ತಿದ್ದಾರೆ. ಈ ಭಾಗದಲ್ಲಿ ಹಳ್ಳ-ಕೊಳ್ಳಗಳು, ನದಿಗಳು ತುಂಬಿ ಹರಿಯುತ್ತಿದ್ದು, ಮಳೆ ಮುಂದುವರೆದರೆ, ಗುಡ್ಡ ಕುಸಿತ, ಪ್ರವಾಹ ಉಂಟಾಗುವ ಸಾಧ್ಯತೆಗಳು ಹೆಚ್ಚಾಗಿದೆ.