Advertisement

ಮಳೆಹಾನಿ ಸಂತ್ರಸ್ತ ಆತ್ಮಹತ್ಯೆಗೆ ಶರಣು

12:30 AM Jan 17, 2019 | Team Udayavani |

ಮಡಿಕೇರಿ: ಕಳೆದ ಆಗಸ್ಟ್‌ನಲ್ಲಿ ಸುರಿದ ಧಾರಾಕಾರ ಮಳೆಗೆ ಜಮೀನು ಮತ್ತು ಮನೆ ಕಳೆದುಕೊಂಡು ಬೀದಿಪಾಲಾಗಿದ್ದ ವ್ಯಕ್ತಿಯೋರ್ವರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜೋಡುಪಾಲ ಗ್ರಾಮದಲ್ಲಿ ನಡೆದಿದೆ. ಎನ್‌.ಬಿ. ಚರಣ್‌ (38) ವಿಷ ಸೇವಿಸಿ ಸಾವಿಗೆ ಶರಣಾದವರು.

Advertisement

ಸರಕಾರದಿಂದ ಸಕಾಲದಲ್ಲಿ ಪುನರ್ವಸತಿ ವ್ಯವಸ್ಥೆ ಆಗುತ್ತಿಲ್ಲ ಎಂಬ ನೋವಿನಿಂದ ಚರಣ್‌ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕುಟುಂಬದ ಸದಸ್ಯರು ಆರೋಪಿಸಿದ್ದಾರೆ.

ಜ. 10ರಂದು ವಿಷ ಸೇವಿಸಿ ಅಸ್ವಸ್ಥರಾಗಿದ್ದ ಚರಣ್‌ ಅವರನ್ನು ಮಡಿಕೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಜ. 11ರಂದು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಆದರೆ ಚಿಕಿತ್ಸೆ ಫ‌ಲಕಾರಿಯಾಗದೆ ಜ. 12ರಂದು ಮೃತಪಟ್ಟಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಈ ಕುರಿತು ಮಡಿಕೇರಿ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಚರಣ್‌ ಅವರಿಗೆ 2ನೇ ಮೊಣ್ಣಂಗೇರಿ ಗ್ರಾಮದಲ್ಲಿ 5 ಎಕರೆ ಜಮೀನಿದ್ದು, ಪ್ರವಾಹ ಮತ್ತು ಭೂ ಕುಸಿತದಿಂದ ಬಹುತೇಕ ಕೊಚ್ಚಿ ಹೋಗಿತ್ತು. ಜೋಡುಪಾಲದಲ್ಲಿ ಇದ್ದ ಮನೆಯೂ ಪ್ರವಾಹದಲ್ಲಿ ಕಳೆದು ಹೋಗಿತ್ತು. ಇದರಿಂದ ಬೀದಿಪಾಲಾಗಿದ್ದ ಚರಣ್‌ ತೋಟದ ಅಭಿವೃದ್ಧಿಗೆ ಮಾಡಿದ್ದ ಬ್ಯಾಂಕ್‌ ಮತ್ತು ಕೈ ಸಾಲದ ಮೊತ್ತ 3 ಲಕ್ಷ ರೂ. ತೀರಿಸುವುದು ಹೇಗೆ ಎಂಬ ಚಿಂತೆಯಲ್ಲಿದ್ದರು. ಅಲ್ಲದೆ ಹೃದ್ರೋಗಿಯಾಗಿರುವ ತನ್ನ ತಾಯಿ ಶೀಲಾವತಿ ಅವರ ತಿಂಗಳ ಚಿಕಿತ್ಸಾ ವೆಚ್ಚ ಸುಮಾರು 3 ಸಾವಿರ ರೂ. ಹೊಂದಿಸಲು ಕೂಡ ಕಷ್ಟಪಡುತ್ತಿದ್ದರು ಎಂದು ತಿಳಿದು ಬಂದಿದೆ.

ಸರಕಾರದಿಂದ ಇನ್ನೂ ಮನೆ ಸಿಕ್ಕಿಲ್ಲ ಎಂದು ಅಣ್ಣ ತುಂಬಾ ಬೇಸರದಲ್ಲಿದ್ದ. ವಾಸವಿದ್ದ ಮನೆ, ಬದುಕಿಗೆ ಆಸರೆಯಾಗಿದ್ದ ತೋಟ ನಾಶವಾಗಿ ಮಾಡಿದ ಸಾಲ ತೀರಿಸುವ ವಿಷಯದಲ್ಲಿ ಕುಗ್ಗಿಹೋಗಿದ್ದ. ಇದೇ ವಿಷಯ ನಮ್ಮ ಬಳಿ ಹೇಳಿಕೊಂಡು ದುಃಖೀಸುತ್ತಿದ್ದ. ಈಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಚರಣ್‌ ಸಹೋದರ ಯತೀಶ್‌ ಎನ್‌.ಬಿ. ಹೇಳಿದ್ದಾರೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next