Advertisement

ಬಾರೋ ಮಳೆನಾಡಿಗೆ…ಪಿಸುಗುಟ್ಟಿದೆ “ರೈನಥಾನ್‌’

04:56 PM Jun 03, 2017 | |

ಎಷ್ಟೇ ಜೋರು ಮಳೆ ಬಿದ್ದರೂ ಬೆಂಗ್ಳೂರು, ಮಲೆನಾಡು ಅಂತನ್ನಿಸುವುದಿಲ್ಲ! ಹೆವೀ ಟ್ರಾಫಿಕ್ಕಿನ ಈ ನಗರಿಯಲ್ಲಿ ಮಳೆಯ ಸುಖವನ್ನು ಅನುಭವಿಸುವುದೂ ಕಷ್ಟವೇ. ಮಳೆ ನೀರಿಗೆ ಮುಖವೊಡ್ಡಿ, ಕಾಲಡಿ ಹರಿಯುವ ನೀರನ್ನು ಮೆಟ್ಟುತ್ತಾ ಕುಣಿದಾಡಿ, “ತುಂತುರು ಇಲ್ಲಿ ನೀರ ಹಾಡು’ ಎನ್ನಲು ಇಲ್ಲಿ ಜಾಗವೂ ಕಮ್ಮಿ. ಆದರೆ, ಜೋರು ಮಳೆ ಬಂದ್ರೆ ಸಾಕು, “ರೈನಥಾನ್‌’ ಎಂಬ ಯವ ಮನಸ್ಸುಗಳ ತಂಡ ಬೆಂಗ್ಳೂರಿಗೆ “ಬೈ’ ಹೇಳುತ್ತೆ! ದೂರದ ಯಾವುದಾದರೂ “ಮಳೆ’ನಾಡಿಗೆ ಹೋಗಿ, ವರ್ಷಧಾರೆಯ ತಾಜಾ ಸುಖವನ್ನು ಈ ತಂಡ ಅನುಭವಿಸುತ್ತದೆ!

Advertisement

ತುಂಬಾ ಮಳೆ ಆಗುವ ಪ್ರದೇಶದಲ್ಲಿ ಇವರು ರಕ್ಷಣೆಗೆ ಛತ್ರಿಯನ್ನೂ ಬಳಸುವುದಿಲ್ಲ! ಮಳೆಯಲ್ಲಿ ನೆನೆದುಕೊಂಡೇ 20 ಕಿ.ಮೀ. ನಡೆಯುತ್ತಾರೆ. ಹಾಡು ಹರಟೆ ಹೊಡೆಯುತ್ತಾ, ಆಟ ಆಡುತ್ತಾ, ಊಟ ಮಾಡುತ್ತಾ, ಫೇಸ್‌ಬುಕ್ಕು- ವಾಟ್ಸಾéಪುಗಳನ್ನು ದೂರವಿಟ್ಟು, ಇಡೀ ದಿನ ಆ ಮಳೆನಾಡಿನಲ್ಲಿಯೇ ಕಳೆದು ಬೆಂಗ್ಳೂರಿಗೆ ವಾಪಸಾಗುತ್ತಾರೆ!

ಏನಿದು ರೈನಥಾನ್‌?
ಇದು ಮಳೆ ನಡಿಗೆ ತಂಡ. ಮಳೆಗಾಲವನ್ನು ವಿಶಿಷ್ಟವಾಗಿ ಆಚರಿಸುವ ಸಮಾನ ಮನಸ್ಕರ ತಂಡ ಇದಾಗಿದ್ದು, ಇಲ್ಲಿ ಎಲ್ಲರೂ ಮಳೆಯನ್ನು ಅತಿಯಾಗಿ ಪ್ರೀತಿಸುವವರೇ! ವಾರಪೂರ್ತಿ ದುಡಿದು, ಒತ್ತಡದಲ್ಲಿ ಕಳೆಯುವ ಬೆಂಗ್ಳೂರಿನ ಈ ಮನಸ್ಸುಗಳು ವೀಕೆಂಡಿನಲ್ಲಿ ಒಂದು ಬಸ್ಸು ಮಾಡಿಕೊಂಡು ಹೋಗಿ, ಮಳೆಯ ತಾಜಾತನವನ್ನು ಅನುಭವಿಸುತ್ತದೆ.

ಆಫೀಸಿನಿಂದ ನೆನೆದು ಬಂದಾಗ ಹೊಳೆದ ಐಡಿಯಾ!
ಮಳೆಯ ಪ್ರೇಮಿಗಳನ್ನು ಹೀಗೆ ಒಟ್ಟಿಗೆ ಕಲೆಹಾಕಿದ್ದು, ಬೆಂಗಳೂರಿನ ಉದ್ಯಮಿ ಕಿಶೋರ್‌ ಪಟವರ್ಧನ್‌. ಒಮ್ಮೆ ಅವರು, ಕಚೇರಿಯಿಂದ ಮಳೆಯಲ್ಲಿ ನೆನೆದುಕೊಂಡೇ ಮನೆಗೆ ಮರಳಿದರಂತೆ. ಆಗ ಥಟ್ಟನೆ “ರೈನಥಾನ್‌’ ಪರಿಕಲ್ಪನೆ ಹೊಳೆದಿದೆ. ಕೂಡಲೇ ಅವರು ಒಂದಿಷ್ಟು ಮಿತ್ರರಿಗೆ ಫೋನು ಮಾಡಿ, ಫೇಸ್‌ಬುಕ್‌ನಲ್ಲಿ ಈ ಬಗ್ಗೆ ಪ್ರಸ್ತಾಪಿಸಿದ್ದಾರೆ. ಎಲ್ಲರೂ ಇದನ್ನು ಸ್ವಾಗತಿಸಿದರಂತೆ. ಆಗ 6 ವರ್ಷದ ಮಗುವೂ ಸೇರಿ, 13 ಜನರ ತಂಡ ತಯಾರಾಗಿ, ಜೋರು ಮಳೆಯಲ್ಲಿ ಚಾರ್ಮಾಡಿ ಘಾಟ್‌ಗೆ ಹೋಗಲು ನಿರ್ಧರಿಸಿತು.

ಇದು 9ನೇ ಸೀಸನ್‌!
ಆರಂಭದಲ್ಲಿ ಚಾರ್ಮಾಡಿ ಘಾಟ್‌ ಆದ ಮೇಲೆ ಆಗುಂಬೆ ಘಾಟ್‌, ಬಿಸಿಲೆ ಘಾಟ್‌, ಎಳ್ನೀರ್‌ ಘಾಟ್‌, ಮೆಣಸಿನ ಹಾಡ್ಯ, ದೇವರಮನೆ, ಗಾಳಿಗುಡ್ಡೆ, ನಂತರ ತಮಿಳುನಾಡಿನ ಊಟಿ, ಕೂನೂರ್‌ಗೆ “ರೈನಥಾನ್‌’ ತಂಡ ಹೋಗಿಬಂದಿದೆ. ಈ ವರ್ಷ 9ನೇ ಸೀಸನ್‌ ಆಗಿದ್ದು, ಬಲ್ಲಾಳರಾಯನ ದುರ್ಗಕ್ಕೆ ಜೂನ್‌ 24ರಂದು ತೆರಳಲು, ರೈನಥಾನ್‌ ತಂಡ ತಾಲೀಮು ನಡೆಸುತ್ತಿದೆ. ಪ್ರಯಾಣ ಹಾಗೂ ಊಟ- ತಿಂಡಿಯ ನಿಗದಿತ ವೆಚ್ಚವನ್ನು ಭರಿಸಬೇಕಾಗುತ್ತದೆ.

Advertisement

ರೈನಥಾನ್‌ಗೆ ಹೋದ್ರೆ ಏನ್‌ ಲಾಭ?
– ನಿಸರ್ಗದಡಿಯಲ್ಲಿ ಎಲ್ಲರೂ ಮಕ್ಕಳಾಗುವ ಆನಂದ.
– ಕುಣಿದು ಕುಪ್ಪಳಿಸುವಾಗ, ದೇಹದ ಜಡತ್ವ ದೂರವಾಗುತ್ತದೆ.
– ಧನಾತ್ಮಕ ಚಿಂತನೆ, ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.
– ಆ ಮಳೆಯಲ್ಲಿ ಅತ್ತರೂ ಕಾಣಿಸುವುದಿಲ್ಲ. ಕೆಲವರು ಅಳುವ ಮೂಲಕ ದುಃಖವನ್ನು ಹೊರಹಾಕುವರು.
– ಒತ್ತಡ ದೂರವಾಗಿ, ಒಂದು ಜೋಶ್‌ ಸಿಗುತ್ತದೆ.
– ಹೊಸಬರ ಸಂಪರ್ಕವಾಗುತ್ತದೆ.
– ಮಳೆಗಾಲದಲ್ಲಿ ಸೃಷ್ಟಿಯಾಗುವ ಪುಟ್ಟ ಜಲಪಾತಗಳಿಗೆ ಮೈಯ್ಯೊಡ್ಡಿ ಆನಂದಿಸಬಹುದು.

ಯಾರ್ಯಾರು ಪಾಲ್ಗೊಳ್ಳಬಹುದು?
ರೈನಥಾನ್‌ನಲ್ಲಿ ವಯೋಮಿತಿಯ ಕಟ್ಟಳೆಯಿದೆ. ಕಾರಣ, ಇದು ನಡಿಗೆ ಮತ್ತು ಆಟಗಳನ್ನು ಒಳಗೊಂಡ ಪರಿಕಲ್ಪನೆ. ಹತ್ತು ವರ್ಷದ ಕೆಳಗಿನ ಮಕ್ಕಳು ಹಾಗೂ ಹಿರಿಯ ನಾಗರಿಕರಿಗೆ ಸತತ ಇಪ್ಪತ್ತು ಕಿಲೋಮೀಟರು ನಡಿಗೆ ಕಷ್ಟ. ಯುವಕರು ಪಾಲ್ಗೊಂಡರೆ ಅನುಕೂಲ.

ಪ್ರವೇಶ ಹೇಗೆ?
ರೈನಥಾನ್‌ನಲ್ಲಿ ಪಾಲ್ಗೊಳ್ಳಲು ಇಚ್ಛಿಸುವವರು ಮೊದಲೇ rಚಜಿnಚಠಿಜಟn .cಟಞ ಜಾಲತಾಣದಲ್ಲಿ ಅಗತ್ಯ ದಾಖಲೆಗಳನ್ನು ನೋಂದಾಯಿಸುವುದು ಕಡ್ಡಾಯ. ಆಸಕ್ತರು ಮೊ. 9980218814 ಸಂಪರ್ಕಿಸಬಹುದು.

ಇವು ನಿಷಿದ್ಧ…
– ನಡಿಗೆಯ ಸಮಯದಲ್ಲಿ ಕೊಡೆ, ರೈನ್‌ಕೋಟ್‌, ತಲೆಗೆ ಟೋಪಿ ಧರಿಸುವಂತಿಲ್ಲ. 
– ಮಾದಕ ಪದಾರ್ಥಗಳ ಸೇವನೆ, ಧೂಮಪಾನ, ಮದ್ಯಪಾನ ಇಲ್ಲಿ ನಿಷಿದ್ಧ.
– ರಸ್ತೆಯಲ್ಲಿ, ಕಂಡ ಕಂಡಲ್ಲಿ ಕಸವನ್ನು ಎಸೆಯುವಂತಿಲ್ಲ.
– ಮಾಂಸಾಹಾರ ಮಾಡುವಂತಿಲ್ಲ.
– ಕೆಟ್ಟ ಮಾತುಗಳು, ಜಗಳ ತೆಗೆಯುವಂತಿಲ್ಲ.
– ರಾಜಕೀಯ ಚರ್ಚೆ ಮಾಡುವಂತಿಲ್ಲ.

ವ್ಯವಸ್ಥೆ ಹೇಗಿರುತ್ತೆ?
ರೈನಥಾನ್‌ ಸಂಘಟಕರು ಬೆಂಗಳೂರಿನಿಂದ ಬಸ್‌ ವ್ಯವಸ್ಥೆ ಮಾಡಿರುತ್ತಾರೆ. ಬೆಂಗಳೂರಿನಿಂದ ಶುಕ್ರವಾರ ರಾತ್ರಿ ಹೊರಟು, ಶನಿವಾರ ಬೆಳಗ್ಗೆ ತಂಡವು ನಿಗದಿತ ಜಾಗವನ್ನು ತಲುಪುತ್ತದೆ. ಬಾಣಸಿಗರ ತಂಡ ಊಟ- ತಿಂಡಿಯ ವ್ಯವಸ್ಥೆ ಮಾಡಿರುತ್ತಾರೆ. ಜಿಗಣೆ (ಇಂಬಳ) ಕಾಟ ತಡೆಯಲು, ಎಲ್ಲರಿಗೂ ಉಪ್ಪಿನ ಚೀಲ ನೀಡುತ್ತಾರೆ. 

ಅಲ್ಲಿ ಬೊಂಬಾಟ್‌ ಆಗಿರುತ್ತೆ…
– ರೈನಥಾನ್‌ನ ಸಮವಸ್ತ್ರ ಧರಿಸಿ, ನಡಿಗೆಗೆ ಸಿದ್ಧರಾಗಬೇಕು.
– ದೇಸಿ ಆಟಗಳು ಇರುತ್ತವೆ. ವಿಜೇತರಿಗೆ ಅಲ್ಲಿಯೇ ಬಹುಮಾನ ವಿತರಿಸುತ್ತಾರೆ.
– ಜೋಕ್‌, ಹಾಡು ಹೇಳಬಹುದು.
– ಟ್ಯಾಲೆಂಟ್‌ ಪ್ರದರ್ಶಿಸಲು ಸುವರ್ಣಾವಕಾಶ.

ಮಳೆಯಲ್ಲಿ ದೊಡ್ಡವರು, ಸಣ್ಣವರು, ಮಹನೀಯರು, ಮಹಿಳೆಯರು ಎಲ್ಲರೂ ನೆನೆದು ಸಣ್ಣ ಮಕ್ಕಳಾಗುವ ಅವಕಾಶ ರೈನಥಾನ್‌ನಲ್ಲಿರುತ್ತದೆ. ಯಾಂತ್ರಿಕ ಬದುಕನ್ನು ಮರೆತು, ನಿಸರ್ಗದಡಿಯಲ್ಲಿ ಮೈಮರೆಯುವ ಕ್ಷಣವನ್ನು ಇದು ಒದಗಿಸುತ್ತದೆ.
– ಕಿಶೋರ್‌ ಪಟವರ್ಧನ್‌, ರೈನಥಾನ್‌ ಸಂಘಟಕ

ರೈನಥಾನ್‌ನಲ್ಲಿ ಪಾಲ್ಗೊಳ್ಳುವಾಗ ಅವಿಭಕ್ತ ಕುಟುಂಬದ ಭಾವ ಹುಟ್ಟುತ್ತದೆ. ಯಾರೋ, ಎಲ್ಲಿಂದಲೋ ಬರುವವರು ಮನಸ್ಸಿಗೆ ಆನಂದ ನೀಡುತ್ತಾರೆ. ಮಳೆಯಲ್ಲಿ ಕುಣಿಯುವಾಗ, ಎಲ್ಲ ಒತ್ತಡಗಳು ಕರಗಿ ನೀರಾಗುವಾಗ ಒಂದು ಕ್ಷಣ ಹಗುರಾದಂತೆ ಅನ್ನಿಸುತ್ತದೆ.
– ರಚ್ನಾ ದಿವಾಕರ್‌, ರೈನಥಾನ್‌ನಲ್ಲಿ ಪಾಲ್ಗೊಂಡವರು

 ರಶ್ಮಿ ಗೋಖಲೆ

Advertisement

Udayavani is now on Telegram. Click here to join our channel and stay updated with the latest news.

Next