ಲಕ್ನೊ: ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅಭ್ಯಾಸಕ್ಕೆ ಹಾಜರಾಗಲು ಕ್ರಿಕೆಟಿಗರಾದ ಸುರೇಶ್ ರೈನಾ, ದೀಪಕ್ ಚಹರ್, ಬರೀಂದರ್ ಸ್ರಾನ್ ಮತ್ತು ಪೀಯೂಷ್ ಚಾವ್ಲಾ ಶುಕ್ರವಾರ ಚೆನ್ನೈಗೆ ಪ್ರವಾಸ ಬೆಳೆಸಿದರು. ಆ. 15ರಿಂದ 20ರ ತನಕ ಇಲ್ಲಿನ “ಎಂ.ಎ. ಚಿದಂಬರಂ ಸ್ಟೇಡಿಯಂ’ನಲ್ಲಿ ಅಭ್ಯಾಸ ಶಿಬಿರ ನಡೆಯಲಿದೆ.
ಪ್ರಯಾಣಕ್ಕೂ ಮುನ್ನ ಸುರೇಶ್ ರೈನಾ ಸಹ ಆಟಗಾರರೊಂದಿಗಿನ ಚಿತ್ರವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
ಇದಕ್ಕೂ ಮುನ್ನ ಡೆಲ್ಲಿ ಕ್ಯಾಪಿಟಲ್ಸ್ ತಂಡದ ರಿಷಭ್ ಪಂತ್ ಅವರೊಂದಿಗೆ ಗಾಜಿಯಾಬಾದ್ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ಸುರೇಶ್ ರೈನಾ ಅಭ್ಯಾಸ ನಡೆಸಿದ್ದರು. ಚೆನ್ನೈ ತಂಡದ ಸ್ಟಾರ್ ಆಟಗಾರ ರವೀಂದ್ರ ಜಡೇಜ ಈ ಶಿಬಿರದಲ್ಲಿ ಪಾಲ್ಗೊಳ್ಳುವುದಿಲ್ಲ.
ಶಿಬಿರದಲ್ಲಿ ಬೌಲಿಂಗ್ ಕೋಚ್ ಎಲ್. ಬಾಲಾಜಿ ಮಾತ್ರ ಇರಲಿದ್ದಾರೆ. ಪ್ರಧಾನ ಕೋಚ್ ಸ್ಟೀಫನ್ ಫ್ಲೆಮಿಂಗ್, ಸಹಾಯಕ ಕೋಚ್ ಮೈಕಲ್ ಹಸ್ಸಿ ಆ. 22ರಂದು ದುಬಾೖಯಲ್ಲಿ ತಂಡವನ್ನು ಕೂಡಿಕೊಳ್ಳುವ ಸಾಧ್ಯತೆ ಇದೆ.
ಆಫ್ರಿಕಾ ಕ್ರಿಕೆಟಿಗರು ವಿಳಂಬ
ತಂಡದ ಪ್ರಮುಖ ಆಟಗಾರರಾದ ದಕ್ಷಿಣ ಆಫ್ರಿಕಾದ ಫಾ ಡು ಪ್ಲೆಸಿಸ್ ಮತ್ತು ಲುಂಗಿ ಎನ್‌ಗಿಡಿ ಸೆ. ಒಂದರಂದು ಯುಎಇಗೆ ಆಗಮಿಸಲಿದ್ದಾರೆ ಎಂದು ಫ್ರಾಂಚೈಸಿಯ ಸಿಇಒ ಕಾಸಿ ವಿಶ್ವನಾಥನ್ ಹೇಳಿದ್ದಾರೆ. ಸಿಎಸ್‌ಕೆ ತಂಡಕ್ಕೆ ಆರಂಭದಿಂದಲೇ ಲಭಿಸುವ ದಕ್ಷಿಣ ಆಫ್ರಿಕಾದ ಕ್ರಿಕೆಟಿಗನೆಂದರೆ ಇಮ್ರಾನ್ ತಾಹಿರ್. ಅವರು ಕೆರಿಬಿಯನ್ ಪ್ರೀಮಿಯರ್ ಲೀಗ್ ಮುಗಿಸಿ ನೇರವಾಗಿ ಯುಎಇಗೆ ಆಗಮಿಸುವರು.