ನಾಗ್ಪುರ: ಮಹಾರಾಷ್ಟ್ರದ ನಾಗ್ಪುರ ನಗರದಲ್ಲಿ ಶುಕ್ರವಾರ ಮಧ್ಯರಾತ್ರಿ ಬಳಿಕ ಕುಂಭದ್ರೋಣ ಮಳೆ ಸುರಿದಿದ್ದು, ರಸ್ತೆಗಳು ಜಲಾವೃತವಾಗಿದ್ದು, ತಗ್ಗು ಪ್ರದೇಶಗಳಿಗೆ ಪ್ರವಾಹದ ನೀರು ನುಗ್ಗಿದೆ.
ಧಾರಾಕಾರ ಮಳೆಯ ನಂತರ ಹಲವಾರು ವಾಹನಗಳು ನೀರಿನಲ್ಲಿ ಮುಳುಗಡೆಯಾಗಿದೆ. ಪಿಟಿಐ ಪ್ರಕಾರ, ನಾಗ್ಪುರ ವಿಮಾನ ನಿಲ್ದಾಣದಲ್ಲಿ ಬೆಳಗ್ಗೆ 5:30 ರವರೆಗೆ 106 ಮಿಮೀ ಮಳೆಯಾಗಿದೆ. ಪ್ರವಾಹದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿದೆ.
ಎನ್‌ಡಿಆರ್‌ಎಫ್ ತಂಡವು ರಕ್ಷಣಾ ಕಾರ್ಯಾಚರಣೆ ನಡೆಸಿ ಅಂಬಾಝರಿ ಸರೋವರ ಪ್ರದೇಶದಲ್ಲಿ ಅಪಾಯಕ್ಕೆ ಸಿಲುಕಿದ್ದ ಆರು ಜನರನ್ನು ಸುರಕ್ಷಿತವಾಗಿ ಸ್ಥಳಾಂತರಿಸಿದೆ.
ಸೇನಾ ತಂಡ ಕೂಡ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದೆ. ಹಲವು ಜನರು ನೀರಿನಲ್ಲಿಸಿಲುಕಿಕೊಂಡಿದ್ದರು. ನಮಗೆ ತಿಳಿದ ತತ್ ಕ್ಷಣ ನಾವು ದೋಣಿಗಳನ್ನ ತಂದು ಜನರನ್ನು ರಕ್ಷಿಸಿದ್ದೇವೆ. ನಾವು ಅವರಿಗೆ ಕುಡಿಯುವ ನೀರು ಮತ್ತು ಆಹಾರವನ್ನು ನೀಡಿದ್ದೇವೆ ಎಂದು ರಕ್ಷಣಾ ತಂಡದ ಸಿಬಂದಿ ತಿಳಿಸಿದ್ದಾರೆ.
ಅಂಬಾಝರಿ ಕೆರೆಯು ಉಕ್ಕಿ ಹರಿದ ಪರಿಣಾಮ ತಗ್ಗು ಪ್ರದೇಶಗಳು ಜಲಾವೃತವಾಗಿದೆ. 200-300 ಜನರನ್ನು NDRF ಮತ್ತು SDRF ತಂಡಗಳು ರಕ್ಷಿಸಿವೆ. ಶನಿವಾರ ಕೂಡ ಮಳೆಯಾಗುತ್ತಿದ್ದು, ಜನರು ಜಾಗರೂಕರಾಗಿರಿ ಮತ್ತು ತಗ್ಗು ಪ್ರದೇಶಗಳಲ್ಲಿ ವಾಸಿಸುವ ಜನರು ಸುರಕ್ಷಿತವಾಗಿರಲು ಎತ್ತರದ ಪ್ರದೇಶಗಳಿಗೆ ತೆರಳಬೇಕು ಎಂದು ಆಡಳಿತ ಮನವಿ ಮಾಡಿದೆ.