ಪಾಂಡವಪುರ: ತಾಲೂಕಿನ ವಿವಿಧೆಡೆ ಶನಿವಾರ ರಾತ್ರಿ ಭಾರೀ ಬಿರುಗಾಳಿ ಸಹಿತ ಸುರಿದ ಮಳೆಗೆ 50ಕ್ಕೂ ಹೆಚ್ಚು ಮನೆಗಳ ಕಲ್ನರ್ ಶೀಟ್‌ಗಳು ಹಾನಿಗೊಳಗಾಗಿವೆ. ತಾಲೂಕಿನ ಕಣಿವೆಕೊಪ್ಪಲು, ರಾಗಿಮುದ್ದನಹಳ್ಳಿ ಹೊಸ ಬಡಾವಣೆ, ಬೇಬಿ ಗ್ರಾಮ, ಹಳೇಬೀಡು, ಮಹದೇಶ್ವರಪುರ ಗ್ರಾಮ ಸೇರಿದಂತೆ ವಿವಿಧೆಡೆ ಮನೆಯ ಹೆಂಚು, ಕಲ್ನರ್ ಶೀಟ್‌ಗಳು, ಟ್ರಾನ್ಸ್‌ಫಾರ್ಮರ್‌ಗಳು, ವಿದ್ಯುತ್ ಕಂಬಗಳು ಧರೆಗುರುಳಿವೆ.
ಅತ್ತಿನಗಾನಹಳ್ಳಿ ರೈತ ಬಸವರಾಜು ಒಂದೂವರೆ ಎಕರೆಯಲ್ಲಿ ಬೆಳೆದಿದ್ದ ಪಪ್ಪಾಯಿ ಬೆಳೆ ನಷ್ಟವಾಗಿ ಸುಮಾರೂ 2 ಲಕ್ಷ ರೂ.ಗಳಿಗೆ ಅಧಿಕ ನಷ್ಟ ಸಂಭವಿಸಿದೆ. 1500 ಪಪ್ಪಾಯಿ ಗಿಡ ಹಾನಿಗೀಡಾಗಿವೆ. ಹಾಗೆಯೇ ಮಹದೇಶ್ವರಪುರ ಗ್ರಾಮದ ದೊಡ್ಡೇಗೌಡರ 400 ಪಪ್ಪಾಯಿ ಗಿಡಗಳು ಹಾನಿಗೊಳಗಾಗಿವೆ. ಹಳೇಬೀಡು ತಿಮ್ಮೇಗೌಡರ 300 ಪಪ್ಪಾಯಿ ಗಿಡಗಳು ಹಾಗೂ ಕುಮಾರ್‌ಗೆ ಸೇರಿದ 500 ಪಪ್ಪಾಯಿ ಗಿಡಗಳು ಹಾನಿಗೊಳಗಾಗಿ ಲಕ್ಷಾಂತರ ರೂ. ನಷ್ಟ ಸಂಭವಿಸಿದೆ.
ಹಾರಿಹೋದ ಹೆಂಚು: ಕಣಿವೆಕೊಪ್ಪಲು ಗ್ರಾಮದ ಅಪ್ಪಾರಾವ್‌ಗೆ ಸೇರಿದ ಮಂಗಳೂರು ಹೆಂಚಿನ ಮನೆಯ ಹೆಂಚುಗಳು ಬಿರುಗಾಳಿಗೆ ಹಾರಿಹೋಗಿದ್ದು, ಮನೆಯ ಗೋಡೆ ಬಿರುಕು ಬಿಟ್ಟಿದೆ. ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ. ಇದರಿಂದ ಸುಮಾರು 25 ಸಾವಿರಕ್ಕೂ ಹೆಚ್ಚು ನಷ್ಟ ಸಂಭವಿಸಿದೆ. ಕೂಲಿ ಕೆಲಸ ಮಾಡಿ ಜೀವನ ನಡೆಸು ತ್ತಿದ್ದು, ಇಬ್ಬರು ಚಿಕ್ಕವಯಸ್ಸಿನ ಹೆಣ್ಣುಮಕ್ಕಳೊಂದಿಗೆ ಜೀವನ ಕಷ್ಟವಾಗಿದ್ದು, ಮನೆ ಸರಿಪಡಿಸಿಕೊಳ್ಳಲು ಕಷ್ಟ ಎನ್ನುತ್ತಾರೆ ಅಪ್ಪಾರಾವ್.
ಧರೆಗುರುಳಿದ ವಿದ್ಯುತ್ ಕಂಬ: ಹಾಗೆಯೇ ರಾಗಿಮುದ್ದನಹಳ್ಳಿ ಹೊಸ ಬಡಾವಣೆಯಲ್ಲಿ ಅನೇಕ ಮನೆಗಳ ಕಲ್ನರ್ ಶೀಟುಗಳು ಹಾನಿಗೊಳಗಾಗಿವೆ. ಪಟ್ಟ ಣದ ಟಿಎಪಿಸಿಎಂಎಸ್ ರೈತ ಸಭಾಂಗಣದ ಮುಂದೆ 3 ವಿದ್ಯುತ್ ಕಂಬ ಸೇರಿದಂತೆ ತಾಲೂಕಿನ ಬೇಬಿ, ಚಿಕ್ಕಾಡೆ, ರಾಗಿಮುದ್ದನಹಳ್ಳಿ, ಶಂಭೂನಹಳ್ಳಿ, ಕೆರೆ ತೊಣ್ಣೂರು, ಬೆಳ್ಳಾಳೆ, ಲಕ್ಷ್ಮೀಸಾಗರ, ನೀಲನಹಳ್ಳಿ ಚಂದ್ರೆ, ಟಿ.ಎಸ್.ಛತ್ರ ಸೇರಿದಂತೆ ವಿವಿಧ ಗ್ರಾಮಗಳಲ್ಲಿ 60ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಹಾಗೂ 8 ವಿದ್ಯುತ್ ಟ್ರಾನ್ಸ್‌ಫಾರ್ಮರ್‌ಗಳು ಧರೆಗುರುಳಿವೆ.
ತಹಶೀಲ್ದಾರ್ ಭೇಟಿ: ಜತೆಗೆ ತಾಲೂಕಿನ ಚಿನಕುರಳಿ ಗ್ರಾಮದಲ್ಲಿ ರೈತ ಪುಟ್ಟೇಗೌಡರಿಗೆ ಸೇರಿದ ಬಾಳೆ ಬೆಳೆ ಹಾನಿಗೀಡಾಗಿದೆ. ಅದೃಷ್ಟವಶಾತ್ ಎಲ್ಲಿಯೂ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಘಟನಾ ಸ್ಥಳಗಳಿಗೆ ತಹಶೀಲ್ದಾರ್ ಪ್ರಮೋದ್ ಎಲ್. ಪಾಟೀಲ್ ಹಾಗೂ ಕಂದಾಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಕೂಡಲೇ ಮಳೆ ಹಾನಿಯ ವರದಿ ತಯಾರಿಸಿ ಕೊಡುವಂತೆ ಸ್ಥಳದಲ್ಲಿದ್ದ ಅಧಿಕಾರಿ ಗಳಿಗೆ ಸೂಚಿಸಿದರು.