Advertisement
ವಿಶೇಷವೆಂದರೆ, ಮಳೆಕೊಯ್ಲು ಅಳವಡಿಸಲು ಸಲಹೆ, ಮಾರ್ಗದರ್ಶನ ನೀಡುವಂತೆ ನಗರ ಮತ್ತು ಹೊರವಲಯಗಳಿಂದ ನಿರ್ಮಿತಿ ಕೇಂದ್ರಕ್ಕೆ ಸುಮಾರು 150ಕ್ಕೂ ಹೆಚ್ಚು ಕರೆಗಳು ಬಂದಿದ್ದು, ಕೇಂದ್ರದವರು ಎಲ್ಲ ಮನೆಗಳಿಗೆ ತೆರಳಿ ಉಚಿತವಾಗಿಯೇ ಸಲಹೆಗಳನ್ನು ನೀಡುತ್ತಿದ್ದಾರೆ.
Related Articles
Advertisement
ಮಳೆನೀರೇ ಪರ್ಯಾಯಈಗಾಗಲೇ ನಿರ್ಮಿತಿ ಕೇಂದ್ರದವರು ತೆರಳಿದ ಬಹುತೇಕ ಮನೆಗಳಲ್ಲಿ ಜನ ತಮ್ಮ ಬಳಕೆಯ ನೀರಿನ ಮೂಲಗಳ ಬಳಿ ಮಳೆಕೊಯ್ಲು ಅಳವಡಿಸಿದರೆ, ಭವಿಷ್ಯದಲ್ಲಿ ನೀರು ಸಿಗಬಹುದೇ ಎಂಬ ಪ್ರಶ್ನೆಯನ್ನು ಮುಂದಿಟ್ಟಿದ್ದಾರೆ. ಕೆಲವು ಕಡೆಗಳಲ್ಲಿ ಬಾವಿ ನೀರು ಒಳಚರಂಡಿ ಸೇರಿ ಮಲಿನಗೊಂಡಿದ್ದು, ಅಂತಹ ಬಾವಿಗೆ ಮಳೆಕೊಯ್ಲು ವ್ಯವಸ್ಥೆ ಅಳವಡಿಸಿಕೊಂಡರೆ ಸಮಸ್ಯೆಯಾಗುವುದೇ ಎಂಬ ಆತಂಕ ತೋಡಿಕೊಂಡಿದ್ದಾರೆ. ಇರುವ ಬಾವಿ, ಕೊಳವೆಬಾವಿಗೆ ಯಾವ ರೀತಿಯಲ್ಲಿ ಮಳೆಕೊಯ್ಲು, ಜಲಮರುಪೂರಣ ವ್ಯವಸ್ಥೆ ಮಾಡಬಹುದು ಮತ್ತು ಅದರಿಂದ ಯಾವ ರೀತಿಯ ಫಲ ಮುಂದಿನ ದಿನಗಳಲ್ಲಿ ಸಿಗಬಹುದು ಎಂಬ ಬಗ್ಗೆ ಜನರು ಸಲಹೆ ಕೇಳಿದ್ದಾರೆ. ಕೆರೆ ನಿರ್ಮಿಸಿ ಮಳೆಕೊಯ್ಲು ಅಳವಡಿಸಿಕೊಳ್ಳಲು ಸೂಕ್ತ ಜಾಗದ ಬಗ್ಗೆಯೂ ಶಿಕ್ಷಣ ಸಂಸ್ಥೆಗಳ ಪ್ರಮುಖರು ವಿಚಾರಿಸಿರುವುದಾಗಿ ನಿರ್ಮಿತಿ ಕೇಂದ್ರದ ರಾಜೇಂದ್ರ ಕಲ್ಬಾವಿ ಅವರು ಹೇಳುತ್ತಾರೆ. ಹೊರ ಜಿಲ್ಲೆಯಲ್ಲೂ ಜಲ ಸಾಕ್ಷರತೆ
ಸುರತ್ಕಲ್, ಕಿನ್ನಿಗೋಳಿ, ಮೂಡುಬಿದಿರೆ, ಸುಳ್ಯ, ಪುತ್ತೂರು, ಬೆಳ್ತಂಗಡಿ, ಬಂಟ್ವಾಳ ಮತ್ತಿತರೆಡೆಗಳಿಂದಲೂ ಜನರು ಕರೆ ಮಾಡಿ ಮಾರ್ಗದರ್ಶನ ಕೇಳುತ್ತಿದ್ದಾರೆ. ಗಮನಾರ್ಹವೆಂದರೆ, ‘ಉದಯವಾಣಿ’ ಮಂಗಳೂರಿನಲ್ಲಿ ಆರಂಭಿಸಿದ ಈ ಅಭಿಯಾನ ಇತರೆಡೆಗಳಲ್ಲಿಯೂ ನೀರು ಉಳಿತಾಯದ ಬಗ್ಗೆ ಜನರನ್ನು ಸಾಕ್ಷರರನ್ನಾಗಿಸುವಲ್ಲಿ ಪ್ರೇರೇಪಿಸಿದೆ. ಇದಕ್ಕೆ ಪೂರಕವೆಂಬಂತೆ ಚಿಕ್ಕಮಗಳೂರು, ಶಿವಮೊಗ್ಗ, ಉಡುಪಿಯಲ್ಲಿಯೂ ಈಗಾಗಲೇ ಕೆಲವರು ಮಳೆ ನೀರು ಕೊಯ್ಲು ಅಳವಡಿಕೆ ಮಾಡಿ ಮಾದರಿಯಾಗಿದ್ದಾರೆ. ಶಾಲೆಯಲ್ಲಿ ಅಳವಡಿಸಲು ಚಿಂತನೆ
ಅಶೋಕನಗರ ಮಾಲೆಮಾರ್‌ನ ರೇಖಲತಾ ಅವರ ಮಹಿಳಾ ವೇದಿಕೆ ತಂಡವು ಮಳೆಕೊಯ್ಲು ವಿಷಯದಲ್ಲಿ ಒಂದೆಜ್ಜೆ ಮುಂದಿಟ್ಟಿದ್ದು, ಪೊಳಲಿಯ ಶಾಲೆಯೊಂದಕ್ಕೆ ಮಳೆ ನೀರು ಕೊಯ್ಲು ಅಳವಡಿಸಲು ಮುಂದಾಗಿದ್ದಾರೆ. ಅಲ್ಲದೆ, ವೇದಿಕೆಯ ಸದಸ್ಯರಿಗಾಗಿ ಮಾಹಿತಿ ಕಾರ್ಯಾಗಾರವನ್ನೂ ಹಮ್ಮಿಕೊಳ್ಳಲು ನಿರ್ಧರಿಸಿ ಭವಿಷ್ಯದಲ್ಲಿ ಎಲ್ಲರ ಮನೆಗಳಲ್ಲಿಯೂ ಮಳೆಕೊಯ್ಲು ಅಳವಡಿಸುವಂತೆ ಪ್ರೇರೇಪಿಸಲಾಗುವುದು ಎನ್ನುತ್ತಾರೆ ರೇಖಲತಾ. ಮನೆಯಲ್ಲಿ ಮಳೆಕೊಯ್ಲು ಅಳವಡಿಸಲು ಮಾರ್ಗದರ್ಶನ ನೀಡಲು ಈಗಾಗಲೇ ರಾಜೇಂದ್ರ ಕಲ್ಬಾವಿಯವರೊಂದಿಗೆ ಮಾತನಾಡಿದ್ದೇನೆ. ಅವರ ಸಲಹೆ ಮೇರೆಗೆ ನಮ್ಮ ಮನೆಯಲ್ಲಿ ಅಳವಡಿಕೆ ಮಾಡಲಾಗುವುದು ಎಂದು ವಾಮಂಜೂರಿನ ಅನಿಲ್ ಪಿಂಟೋ ತಿಳಿಸಿದ್ದಾರೆ. ಮನೆಗೆ ಭೇಟಿ‘ಉದಯವಾಣಿ’ ನಡೆಸಿದ ಕಾರ್ಯಕ್ರಮದಂದು 74 ಮಂದಿ ಸ್ಥಳದಲ್ಲೇ
ನೋಂದಣಿ ಮಾಡಿಕೊಂಡಿದ್ದರು. ಆ ಬಳಿಕ ಹಲವರು ಕರೆ ಮಾಡಿ ಮಾರ್ಗದರ್ಶನ ಕೇಳುತ್ತಿದ್ದಾರೆ. 150ಕ್ಕೂ ಹೆಚ್ಚು ಮಂದಿ ಕರೆ ಮಾಡಿದ್ದು, ಇಲ್ಲಿವರೆಗೆ 130 ಮಂದಿಯ ಹೆಸರು ನೋಂದಣಿ ಮಾಡಲಾಗಿದ್ದು, ಹಂತ ಹಂತವಾಗಿ ಎಲ್ಲರ ಮನೆಗಳಿಗೂ ಭೇಟಿ ನೀಡಲಾಗುತ್ತಿದೆ. ಉಳಿದವರು ಕೇವಲ ಸಲಹೆಗಷ್ಟೇ ಕರೆ ಮಾಡಿದ್ದರಿಂದ ಅವರ ಹೆಸರನ್ನು ನೋಂದಾಯಿಸಿಕೊಂಡಿಲ್ಲ.
– ರಾಜೇಂದ್ರ ಕಲ್ಬಾವಿ, ಯೋಜನಾ ನಿರ್ದೇಶಕ, ನಿರ್ಮಿತಿ ಕೇಂದ್ರ