ಗಜೇಂದ್ರಗಡ: ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ಸುರಿದ ಮಳೆಯಿಂದಾಗಿ ಎರಿ ಭೂಮಿಯಲ್ಲಿ ನೀರು ನಿಂತು ಹಿಂಗಾರು ಕೃಷಿ ಚಟುವಟಿಕೆಗಳಿಗೆ ತೀವ್ರ ಹಿನ್ನಡೆ ಅನುಭವಿಸುವಂತಾಗಿದೆ.
ಕಳೆದ ಹದಿನೈದು ದಿನಗಳಿಂದ ಈ ಭಾಗದಲ್ಲಿ ಉತ್ತಮವಾಗಿ ಮಳೆ ಸುರಿಯುತ್ತಿದೆ. ಹಳ್ಳ ಕೊಳ್ಳಗಳು ಹರಿಯುತ್ತಿವೆ. ಆದರೆ ಅಕ್ಟೋಬರ್ ತಿಂಗಳ ಎರಡನೇ ವಾರದಲ್ಲಿಯೇ ಬಿತ್ತನೆ ಕಾರ್ಯ ಪೂರ್ಣಗೊಳಿಸಬೇಕಿದ್ದ ಅನ್ನದಾತರಿಗೆ ಮಳೆರಾಯ ಬೆಂಬಿಡದೇ ಕಾಡುತ್ತಿದ್ದಾನೆ. ಮಳೆಯಿಂದಾಗಿ ಕಪ್ಪು ಭೂಮಿಯಲ್ಲಿ ಬಿತ್ತನೆಗೆ ಯೋಗ್ಯವಲ್ಲದಂತೆ ನೀರು ತುಂಬಿಕೊಂಡಿದೆ. ಈ ಮಧ್ಯೆ ವರುಣದೇವ ಕೊಂಚ ಬ್ರೇಕ್ ನೀಡಿದ್ದನು. ಆ ಸಂದರ್ಭದಲ್ಲಿ ರೈತರು ಬಿತ್ತನೆಗೆಭೂಮಿಯನ್ನು ಹದವನ್ನಾಗಿಸಿಕೊಂಡಿದ್ದರು.
ಆದರೆ ಮತ್ತೆ ಮಳೆ ಸುರಿದಿದ್ದರಿಂದ ಜಮೀನಿನಲ್ಲಿ ನೀರು ನಿಂತು ಸಂಪೂರ್ಣ ಕೆಸರುಮಯವಾಗಿದೆ.ಮಳೆರಾಯನ ಕಣ್ಣಾ ಮುಚ್ಚಾಲೆ: ಈಗಾಗಲೇ ಹಿಂಗಾರು ಬಿತ್ತನೆ ಮಾಡಬೇಕೆಂದು ಬಿಳಿಜೋಳ, ಕಡಲೆ, ಗೋಧಿ ಬೀಜಗಳನ್ನು ಸಂಗ್ರಹಿಸಿಟ್ಟಿದ್ದಾರೆ. ಆದರೆ ಎರಡು ದಿನ ಮಳೆ ನಿಂತರೆ, ಮರು ದಿನವೇ ಮತ್ತೆ ಮಳೆ ಸುರಿಯುತ್ತಿದೆ. ಕಳೆದೊಂದು ವಾರದಿಂದ ಹೀಗೆ ವರುಣ ದೇವನ ಕಣ್ಣಾಮುಚ್ಚಾಲೆಯಿಂದಾಗಿ ಬಿತ್ತನೆಗೆ ಹಿನ್ನಡೆಯಾಗುತ್ತಿದೆ. ಈಗಾಗಲೇ ಹಿಂಗಾರು ಬಿತ್ತನೆಯ ಅವಧಿ ಮುಗಿಯುತ್ತಾ ಬಂದರೂ ಸಹ ಈವರೆಗೂ ತಾಲೂಕಿನ ಬಹುತೇಕ ಗ್ರಾಮಗಳ ರೈತರುಇನ್ನೂ ಸಹ ಬಿತ್ತನೆ ಮಾಡದಿರುವುದು ಅನ್ನದಾತರನ್ನು ಚಿಂತೆಗೀಡು ಮಾಡಿದೆ.
ಅಕ್ಟೋಬರ ಅಂತ್ಯದೊಳಗೆ ಬಿತ್ತಲೇಬೇಕು ಎಂಬ ಅನಿವಾರ್ಯತೆ ಎದುರಿಸುತ್ತಿರುವ ರೈತರಿಗೆ ಹಸಿಯಾಗಿರುವ ಭೂಮಿ ಶಾಪವಾಗಿ ಪರಿಣಮಿಸಿದೆ. ಹಿಂಗಾರು ಹಂಗಾಮಿನ ಬಿತ್ತನೆ ಆರಂಭವಾಗುವ ಸಮಯಕ್ಕೆ ಸರಿಯಾಗಿ ಮೇಘರಾಜನ ಆರ್ಭಟವೂ ಹೆಚ್ಚಿದ್ದರಿಂದ ಈ ಬಾರಿ ನಿರೀಕ್ಷೆಯಂತೆ ಬಿತ್ತನೆ ನಡೆದಿಲ್ಲ. ಈ ವೇಳೆ ಶೇ.70 ರಿಂದ 80ರಷ್ಟು ನಡೆಯಬೇಕಿದ್ದ ಬಿತ್ತನೆ, ಇದುವರೆಗೂ ಶೇ. 30 ರಷ್ಟು ಸಹ ನಡೆದಿಲ್ಲ. ಇದು ಮುಂಗಾರು ಹಂಗಾಮಿನ ಮೇಲೆ ಪರಿಣಾಮ ಬೀರುವುದಂತೂ ಸತ್ಯ ಎನ್ನುವುದು ರೈತರ ಮಾತಾಗಿದೆ.
ಹಿಂಗಾರಿ ಬಿತ್ತನೆ ಸಮಯಕ್ಕೆ ಸುರಿದ ಮಳೆಯಿಂದ ಶೇ.100 ರಷ್ಟು ಉತ್ತಮ ಫಸಲು ಬರುವುದು ಈ ವರ್ಷದ ಹಿಂಗಾರಿನಲ್ಲಿ ಕಷ್ಟಸಾಧ್ಯ. ದೀಪಾವಳ ಹಬ್ಬದ ನಂತರ ಬಿತ್ತನೆಯಲ್ಲಿ ತೊಡಗಿಕೊಂಡರೆ, ಫಸಲು ವಿಳಂಬವಾಗಿ ಬರಲಿದೆ. ಮಳೆರಾಯ ಕೊಂಚ ವಿರಾಮ ನೀಡಿದರೆ, ರೈತರು ಹೊಲ ಹದಗೊಳಿಸಿ, ಭೂತಾಯಿಯ ಒಡಲಿಗೆ ಬೀಜ ಅರ್ಪಣೆ ಮಾಡುತ್ತಾರೆ. ಇದಕ್ಕೆ ಮಳೆರಾಯ ಕುರುಣೆ ತೋರಬೇಕಿದೆ.
-ಡಿ.ಜಿ. ಮೋಮಿನ್