ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ಅಂಡರ್‌ಪಾಸ್‌ಗಳಲ್ಲಿ ಮಳೆನೀರು ನಿಂತು ಬಸ್‌ಗಳು ಮುಳುಗಿದಂತಹ ಘಟನೆಗಳು ಸಂಭವಿಸಿದ ಬಳಿಕವೂ, ಪಾಲಿಕೆಯಿಂದ ನಿರ್ಮಿಸಿದ ಕೆಳಸೇತುವೆಗಳಲ್ಲಿ ಮಳೆನೀರು ಹರಿಯಲು ಸೂಕ್ತ ವ್ಯವಸ್ಥೆ ಮಾಡದ ಹಿನ್ನೆಲೆಯಲ್ಲಿ ಸವಾರರು ತೊಂದರೆ ಅನುಭವಿಸುವಂತಾಗಿದೆ.
ಗ್ರೇಡ್ ಸಪರೇಟರ್ ಹಾಗೂ ಕೆಳಸೇತುವೆಗಳ ನಿರ್ಮಾಣಕ್ಕಾಗಿ ಕೋಟ್ಯಂತರ ರೂ. ವೆಚ್ಚ ಮಾಡುವ ಬಿಬಿಎಂಪಿ, ಮಳೆನೀರು ಸರಾಗವಾಗಿ ಹರಿದು ಹೋಗಲು ಸೂಕ್ತ ಕಾಲುವೆ ವ್ಯವಸ್ಥೆ ಮಾಡುವಲ್ಲಿ ವಿಫಲವಾಗಿವೆ. ಪರಿಣಾಮ ನಗರದಲ್ಲಿರುವ ಬಹುತೇಕ ಅಂಡರ್‌ಪಾಸ್‌ಗಳಲ್ಲಿ ಮಳೆ ಬಂದಾಗ ಅಡಿಗಟ್ಟಲೇ ನೀರು ನಿಂತು ವಾಹನ ಸವಾರರು ತೊಂದರೆ ಅನುಭವಿಸುತ್ತಿದ್ದಾರೆ.
ಮೆಜೆಸ್ಟಿಕ್ ಸುತ್ತಮುತ್ತಲಿನ ಭಾಗಗಳಲ್ಲಿ ಉಂಟಾಗುತ್ತಿರುವ ಸಂಚಾರ ದಟ್ಟಣೆ ನಿವಾರಣೆಗಾಗಿ ಪಾಲಿಕೆಯಿಂದ ಓಕಳಿಪುರದ ಬಳಿ ಅಷ್ಟಪಥ ಕಾರಿಡಾರ್‌ನ ಅಂಡರ್‌ಪಾಸ್‌ನಲ್ಲಿ ನೀರು ನಿಂತು ಸವಾರರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಪ್ರತಿಬಾರಿ ಮಳೆಯಾದಾಗಲೂ ಮೊಣಕಾಲಿನವರೆಗೆ ಮಳೆನೀರು ನಿಲ್ಲುತ್ತಿದ್ದು, ಸಾರ್ವಜನಿಕರು ಸಮಸ್ಯೆ ಎದುರಿಸುತ್ತಿದ್ದಾರೆ.
ಓಕಳಿಪುರ ಜಂಕ್ಷನ್‌ನಲ್ಲಿ ದಟ್ಟಣೆ ತಪ್ಪಿಸುವ ಉದ್ದೇಶದಿಂದ ನಿರ್ಮಿಸುತ್ತಿರು ಅಷ್ಟಪಥ ಕಾರಿಡಾರ್‌ಗಳ ಪೈಕಿ ಈಗಾಗಲೇ ಮಲ್ಲೇಶ್ವರದಿಂದ ರಾಜಾಜಿನಗರ ಸಂಪರ್ಕಿಸುವ ಅಂಡರ್‌ಪಾಸ್ ಸೇರಿ ನಾಲ್ಕು ಪಥಗಳನ್ನು ಸಾರ್ವಜನಿಕರ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಆದರೆ, ಅಂಡರ್‌ಪಾಸ್‌ನಲ್ಲಿ ಮಳೆನೀರು ಹರಿಯಲು ಸಮರ್ಪಕ ವ್ಯವಸ್ಥೆ ಮಾಡದಿರುವುದು ವಾಹನ ಸವಾರರು ಆಕ್ರೋಶಕ್ಕೆ ಕಾರಣವಾಗಿದೆ.
Advertisement
ರಾಜಧಾನಿ ಬೆಂಗಳೂರಿನಲ್ಲಿ ಭಾರಿ ಮಳೆಯಾದರೆ ಅಂಡರ್‌ಪಾಸ್‌ಗಳಲ್ಲಿ ಸಂಚರಿಸಲು ಸವಾರರು ಭಯಪಡುವಂತಹ ಪರಿಸ್ಥಿತಿಯಿತ್ತು. ನಗರದ ಕೀನೋ ಚಿತ್ರಮಂದಿರದ ಬಳಿಯ ಅಂಡರ್‌ಪಾಸ್‌ನಲ್ಲಿ ಮಳೆನೀರಿನಲ್ಲಿ ಬಸ್, ಕಾರುಗಳು ಮುಳುಗಿದಂತಹ ಘಟನೆಗಳು ಅದಕ್ಕೆ ಸಾಕ್ಷಿಯಾಗಿತ್ತು. ಕಳೆದ ಎರಡು ಮೂರು ವರ್ಷಗಳಲ್ಲಿ ಪಾಲಿಕೆಯಿಂದ ನಿರ್ಮಿಸಿರುವ ಅಂಡರ್‌ಪಾಸ್‌ಗಳಲ್ಲಿಯೂ ಅದೇ ಸಮಸ್ಯೆ ಮರುಕಳಿಸುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
Related Articles
ಅಂಡರ್‌ಪಾಸ್‌ಗಳ ನಿರ್ವಹಣೆ ಕೊರತೆ:
ಕೋಟ್ಯಂತರ ರೂ. ವೆಚ್ಚದಲ್ಲಿ ಪಾಲಿಕೆಯಿಂದ ನಿರ್ಮಿಸುವ ಹಲವು ಅಂಡರ್‌ಪಾಸ್‌ಗಳಲ್ಲಿ ಮಳೆನೀರು ಹರಿಯಲು ಕಾಲುವೆಗಳನ್ನು ನಿರ್ಮಿಸಲಾಗಿದೆ. ಆದರೆ, ಅವುಗಳ ನಿರ್ವಹಣೆಯಿಲ್ಲದ ಪರಿಣಾಮ ನೀರು ನಿಲ್ಲುವಂತಹ ಸಮಸ್ಯೆ ಸೃಷ್ಟಿಯಾಗುತ್ತಿದೆ. ಅಂಡರ್‌ಪಾಸ್‌ಗಳಲ್ಲಿ ನಿತ್ಯ ಹತ್ತಾರು ಸಾವಿರ ವಾಹನಗಳು ಸಂಚರಿಸುವುದರಿಂದ ಹಾಗೂ ಮಳೆನೀರು ಹರಿದುಬರುವುದರಿಂದ ಭಾರಿ ಪ್ರಮಾಣದಲ್ಲಿ ಕಾಲುವೆಗಳಲ್ಲಿ ಮಣ್ಣು ತುಂಬುತ್ತದೆ. ಆದರೆ, ವರ್ಷಾನುಗಟ್ಟಲೇ ಆ ಮಣ್ಣು ತೆರವುಗೊಳಿಸದ ಹಿನ್ನೆಲೆಯಲ್ಲಿ ಕೆಲವೆಡೆಗಳಲ್ಲಿ ಮಳೆನೀರು ನಿಲ್ಲುತ್ತಿರುವುದು ಕಂಡುಬಂದಿದೆ.
ಅಂಡರ್‌ಪಾಸ್‌ಗಳು ಕೆರೆಗಳಾಗುತ್ತವೆ!:
ಹಿಂದೆ ಕೀನೋ ಚಿತ್ರಮಂದಿರ ಅಂಡರ್‌ಪಾಸ್‌ನಲ್ಲಿ 8-10 ಅಡಿಯಷ್ಟು ನೀರು ನಿಂತು ಜನರು ತೊಂದರೆ ಅನುಭವಿಸುವಂತಾಗಿತ್ತು. ಆ ಬಳಿಕ ನಿರ್ಮಿಸಿದ ಸ್ಯಾಂಕಿ ರಸ್ತೆ ಅಂಡರ್‌ಪಾಸ್, ಕೆ.ಆರ್.ವೃತ್ತ, ಬೆನ್ನಿಗಾನಹಳ್ಳಿ ರೈಲ್ವೆ ಅಂಡರ್‌ಪಾಸ್, ಮೇಖ್ರೀ ವೃತ್ತ, ನಗರ ದಂಡು ರೈಲ್ವೆ ನಿಲ್ದಾಣ ಅಂಡರ್‌ಪಾಸ್ ಸೇರಿದಂತೆ ಹಲವೆಡೆಗಳಲ್ಲಿ ಸಮರ್ಪಕವಾಗಿ ಮಳೆನೀರು ಹರಿಯದೆ ಸಮಸ್ಯೆ ಸೃಷ್ಟಿಯಾಗುತ್ತಿದೆ. ಆದರೆ, ಪಾಲಿಕೆಯ ಅಧಿಕಾರಿಗಳು ಮಾತ್ರ ಸಮಸ್ಯೆ ನಿವಾರಣೆಗೆ ಮುಂದಾಗುತ್ತಿಲ್ಲ.
ಕಾಮಗಾರಿ ಸ್ಥಳದಲ್ಲಿ ಕೊಳಚೆ ನೀರು:
ಪಾಲಿಕೆಯಿಂದ ಕಾಮಗಾರಿ ಪ್ರಗತಿಯಲ್ಲಿರುವ ಓಕಳಿಪುರ ಜಂಕ್ಷನ್ ಖೋಡೆ ವೃತ್ತದ ಬಳಿ ರೈಲ್ವೆ ಹಳಿಯಡಿ ಕಾಂಕ್ರಿಟ್ ಎಲಿಮೆಂಟ್ ಅಳವಡಿಕೆ ಕಾರ್ಯ ಪ್ರಗತಿಯಲ್ಲಿದ್ದು, ಮಳೆ ಬಂದಾಗ ರೈಲ್ವೆ ಇಲಾಖೆಯ ಜಾಗದಲ್ಲಿರುವ ಮ್ಯಾನ್‌ಹೋಲ್ ಉಕ್ಕಿ ಹರಿದು ಕೊಳಚೆನೀರು ತುಂಬಿಕೊಳ್ಳುತ್ತಿದೆ. ಇದರಿಂದಾಗಿ ದುರ್ವಾ ಸನೆ ಹರಡಿಸಿದ್ದು, ಕಾಮಗಾರಿಗೂ ತೊಂದರೆ ಯಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
.ವೆಂ.ಸುನೀಲ್‌ಕುಮಾರ್
Advertisement