Advertisement

ಗ್ರಾಪಂ ಮಟ್ಟದಲ್ಲೂ ಮಳೆ ನೀರು ಕೊಯ್ಲು

01:07 AM Sep 17, 2019 | Lakshmi GovindaRaju |

ಬೆಂಗಳೂರು: ನೀರಿನ ಮೂಲಗಳಿಗೆ ಮರುಜೀವ ನೀಡುವ ಕಾರ್ಯ ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯ ಗ್ರಾ.ಪಂಗಳಲ್ಲಿ ಆರಂಭವಾಗಿದ್ದು, ಸರ್ಕಾರಿ ಕಟ್ಟಡಗಳಲ್ಲಿ ಮಳೆ ನೀರು ಕೊಯ್ಲು ಪದ್ಧತಿ ಅಳವಡಿಸಿಕೊಳ್ಳುವ ಕೆಲಸವೂ ನಡೆಯಲಿದೆ. ಜಿಲ್ಲಾಡಳಿತ ವ್ಯಾಪ್ತಿಯಲ್ಲಿ ಸುಮಾರು 96 ಗ್ರಾ.ಪಂಗಳಿದ್ದು, ಆ ಎಲ್ಲಾ ಗ್ರಾಪಂಗಳಲ್ಲಿ ಈ ಬಗ್ಗೆ ವಿಶೇಷ ಗ್ರಾಮ ಸಭೆ ನಡೆಸಲಾಗಿದೆ.

Advertisement

ಗ್ರಾ.ಪಂ ಅಧ್ಯಕ್ಷರ ನೇತೃತ್ವದಲ್ಲಿ ನಡೆದಿರುವ ಸಭೆಯಲ್ಲಿ ಅರಣ್ಯೀಕರಣ, ನೀರಿನ ಸಂರಕ್ಷಣೆ, ಮಳೆ ನೀರು ಕೊಯ್ಲು, ನೀರಿನ ಮರು ಬಳಕೆ, ಜಲ ಮೂಲಗಳ ಪುನರ್‌ಭರ್ತಿ, ಜಲಾನಯನ ಅಭಿವೃದ್ಧಿ ಮುಂತಾದ ಅಂಶಗಳ ಬಗ್ಗೆ ಗ್ರಾಮೀಣ ಜನರಿಗೆ ತಿಳಿವಳಿಕೆ ನೀಡಲಾಗಿದೆ. ಜತೆಗೆ ಚೆಕ್‌ ಡ್ಯಾಂಗಳ ನಿರ್ಮಾಣವೂ ಆಗಲಿದೆ. ಭವಿಷ್ಯದ ದೃಷ್ಟಿಯಿಂದ ಕೇಂದ್ರ-ರಾಜ್ಯ ಸರ್ಕಾರಗಳು ಈ ಯೋಜನೆಯನ್ನು ರೂಪಿಸಿದ್ದು, ನೀರಿನ ಸಂರಕ್ಷಣೆ ಬಗ್ಗೆ ಹಳ್ಳಿ ಹಳ್ಳಿಗಳಲ್ಲಿ ಅರಿವು ಮೂಡಿಸಲಾಗಿದೆ.

ಸರ್ಕಾರಿ ಕಟ್ಟಡಗಳಲ್ಲಿ ಅಳವಡಿಕೆ: “ಜಲಶಕ್ತಿ-ಜಲಾಮೃತ ಅಭಿಯಾನ’ದಲ್ಲಿ ಮಳೆ ನೀರು ಕೊಯ್ಲಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಪ್ರತಿ ಮನೆಯಲ್ಲೂ ಮಳೆ ನೀರು ಕೊಯ್ಲು ಪದ್ಧತಿ ಅಳವಡಿಸಿಕೊಳ್ಳಲು ಜನರಿಗೆ ತಿಳಿವಳಿಕೆ ನೀಡಲು ನಿರ್ಧರಿಸಲಾಗಿದೆ. ಗ್ರಾ.ಪಂ ವ್ಯಾಪ್ತಿಯ ಸರ್ಕಾರಿ ಕಟ್ಟಡಗಳಲ್ಲಿ ಮಳೆ ನೀರು ಕೊಯ್ಲು ಪದ್ಧತಿ ಮೊದಲು ಅಳವಡಿಕೆ ಮಾಡಿದರೆ, ಜನರೂ ಇದನ್ನು ಅನುಸರಿಸುತ್ತಾರೆ.

ಆ ಹಿನ್ನೆಲೆಯಲ್ಲಿ ಸರ್ಕಾರಿ ಕಟ್ಟಡಗಳಲ್ಲಿ ಮಳೆ ನೀರು ಕೊಯ್ಲಿಗೆ ಆದ್ಯತೆ ನೀಡಲಾಗುವುದು ಎಂದು ಬೆಂಗಳೂರು ನಗರ ಜಿ.ಪಂ ಹಿರಿಯ ಅಧಿಕಾರಿ ಮಾಹಿತಿ ನೀಡಿದ್ದಾರೆ. ಜಲ ಸಂರಕ್ಷಣಾ ಅಭಿಯಾನದಡಿ ಕೃಷಿ ಹೊಂಡಗಳ ನಿರ್ಮಾಣ, ಬತ್ತಿ ಹೋಗಿರುವ ಕೊಳವೆ ಬಾವಿಗಳಿಗೆ ಮರು ಜೀವ ನೀಡುವುದು, ಸಾಂಪ್ರದಾಯಿಕ ನದಿ ನೀರಿನ ಮೂಲಗಳ ನವೀಕರಣ ಪ್ರಕ್ರಿಯೆಯೂ ನಡೆಯಲಿದೆ.

ಬೋರ್‌ವೆಲ್‌ಗ‌ಳಿಗೆ ಮರುಜೀವ: ಬೆಂಗಳೂರು ಉತ್ತರ, ದಕ್ಷಿಣ, ಪೂರ್ವ ಮತ್ತು ಆನೇಕಲ್‌ ತಾಲೂಕುಗಳ ಗ್ರಾಮೀಣ ಪ್ರದೇಶಗಳ್ಲಲಿ ಬತ್ತಿ ಹೋಗಿರುವ ಬೋರ್‌ವೆಲ್‌ಗ‌ಳಿಗೆ ಮರುಜೀವ ನೀಡುವ ಕಾರ್ಯ ಈಗಾಗಲೇ ಆರಂಭವಾಗಲಿದೆ ಎಂದು ಆನೇಕಲ್‌ ತಾಲೂಕು ಮಡಸೂರು ಗ್ರಾ.ಪಂ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Advertisement

ಈಗಾಗಲೇ ಶಾಲೆ, ಕಾಲೇಜು ವಿದ್ಯಾರ್ಥಿಗಳ ಮೂಲಕ ಜಲ ಸಂರಕ್ಷಣಾ ಅಭಿಯಾನದ ಬಗ್ಗೆ ಜಾಗೃತಿ ಮೂಡಿಸಲಾಗಿದೆ. ಅಲ್ಲದೆ ವಿವಿಧ ಜಾತಿಯ ಸುಮಾರು 50 ಸಾವಿರ ಸಸಿಗಳನ್ನು ಜಿಲ್ಲಾದ್ಯಂತ ಸಾರ್ವಜನಿಕರಿಗೆ ವಿತರಿಸಲಾಗಿದೆ ಎಂದು ನಗರ ಜಿಲ್ಲೆಯ ಗ್ರಾಮೀಣ ಮತ್ತು ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.

ಕೆಲ ತಿಂಗಳ ಹಿಂದೆಯಷ್ಟೇ ಈ ಬಗ್ಗೆ ಪಂಚಾಯತ್‌ರಾಜ್‌ ಇಲಾಖೆ, ಗ್ರಾಮೀಣ ಮತ್ತು ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ವಿಭಾಗದ ಅಧಿಕಾರಿಗಳು, ಜಿಲ್ಲಾ ಯೋಜನಾ ನಿರ್ದೇಶಕರು, ತಾಲೂಕು ಕಾರ್ಯನಿರ್ವಾಹಕ ಅಧಿಕಾರಿಗಳು ಸಭೆ ನಡೆಸಿ ಯೋಜನೆ ಯಶಸ್ಸಿನ ಸಂಬಂಧ ಚರ್ಚೆ ನಡೆಸಿದ್ದರು.

ನೀರಿನ ಮೂಲಗಳ ಮರುಬಳಕೆ ಬಗ್ಗೆ ಈಗಾಗಲೇ ಗ್ರಾ.ಪಂ ವ್ಯಾಪ್ತಿಗಳಲ್ಲಿ ವಿಶೇಷ ಗ್ರಾಮ ಸಭೆ ನಡೆಸಲಾಗಿದೆ. ಸರ್ಕಾರಿ ಕಟ್ಟಡಗಳಲ್ಲಿ ಮಳೆ ನೀರಿನ ಕೊಯ್ಲು ಪದ್ಧತಿ ಅಳವಡಿಕೆಗೆ ತೀರ್ಮಾನಿಸಲಾಗಿದೆ.
-ಶಶಿಕಿರಣ್‌, ಮರಸೂರು ಗ್ರಾಪಂ ಪಿಡಿಒ

* ದೇವೇಶ ಸೂರಗುಪ್ಪ

Advertisement

Udayavani is now on Telegram. Click here to join our channel and stay updated with the latest news.

Next