ಬೆಂಗಳೂರು: ಮಗಳ ಮದುವೆ ಮಾಡಿಕೊಡುವುದು ತಂದೆಗೆ ಬಹುದೊಡ್ಡ ಜವಾಬ್ದಾರಿ. ಎಲ್ಲವೂ ಸುಸೂತ್ರವಾಗಿ ನಡೆದು,ಯಾವುದಕ್ಕೂ ಕೊರತೆ ಆಗದಂತೆ ನೋಡಿಕೊಳ್ಳಲು ತಂದೆ, ಹಲವು ತಿಂಗಳು ತಯಾರಿ ಮಾಡಿಕೊಂಡಿರುತ್ತಾನೆ.
ಆದರೆ, ಮಗಳ ಮದುವೆ ವೇಳೆ ಪರಿಸರ ಪ್ರೇಮ ಮೆರೆಯುತ್ತಿರುವ ವ್ಯಕ್ತಿಯೊಬ್ಬರು ಇದ್ದಿದ್ದಾರೆ. ಪರಿಸರ ಮತ್ತು ನೀರಿನ ಬಗ್ಗೆ ಜಾಗೃತಿ ಮೂಡಿಸಲು ಬಸವೇಶ್ವರ ನಗರದ ಪಿ.ಕೃಷ್ಣಮೂರ್ತಿ ಎಂಬವರು ಮುಂದಾಗಿದ್ದಾರೆ. ಅವರ ಮಗಳ ಮದುವೆಗೆ ಬರುವ ಬಂಧುಗಳಿಗೆ ಮಳೆ ನೀರು ಕೊಯ್ಲು ಕುರಿತು ಪ್ರತ್ಯಕ್ಷಿಕೆ ತೋರಿಸಲಿದ್ದಾರೆ.
ಪುತ್ರಿ ಮೇಘನಾ ಅವರ ವಿವಾಹ ಎಂ.ಡಿ.ಸುನೀಲ್‌ಕುಮಾರ್ ಜತೆ ಜೂ.16ರಂದು ಮಾಗಡಿ ರಸ್ತೆಯ ಕಲ್ಯಾಣ ಮಂಟಪವೊಂದರಲ್ಲಿ ನಡೆಯಲಿದೆ. ಈ ಮದುವೆಗೆ ಬರುವ ಅತಿಥಿಗಳಿಗೆ ಮದುವೆ ಮಂಟಪದಲ್ಲೇ ಮಳೆನೀರು ಕೊಯ್ಲು ಪಾಠ ನಡೆಯಲಿದೆ. ಇದರ ಜತೆಗೆ ಒಂದು ಸಾವಿರ ಜನಕ್ಕೆ ಸಸಿ ನೀಡಲಿದ್ದಾರೆ. ಮಳೆನೀರು ಕೊಯ್ಲಿನ ಬಗ್ಗೆ ಉಚಿತವಾಗಿ ಜಾಗೃತಿ ಮೂಡಿಸಲು ರೈನಿ ಫಿಲ್ಟರ್ ಹಾಗೂ ಫಾರ್ಮಲ್ಯಾಂಡ್ ರೈನ್‌ವಾಟರ್ ಹಾರ್ವೆಸ್ಟಿಂಗ್ ಸಿಸ್ಟಮ್ ಮುಂದಾಗಿದೆ.
“ಮಗಳ ಮದುವೆಗೆ ಅಂದಾಜು ಮೂರರಿಂದ ನಾಲ್ಕು ಸಾವಿರ ಜನ ಸೇರುವ ನಿರೀಕ್ಷೆ ಇದೆ. ಇಷ್ಟು ಜನರಲ್ಲಿ ಕೆಲವರಾದರೂ ಮಳೆನೀರು ಕೊಯ್ಲನ್ನು ಅಳವಡಿಸಿಕೊಳ್ಳಬಹುದು ಎನ್ನುವ ಆಶಯದಿಂದ ಮಳೆನೀರು ಕೊಯ್ಲಿನ ಬಗ್ಗೆ ಜಾಗೃತಿ ಮೂಡಿಸಲು ನಿರ್ಧರಿಸಿದ್ದೇವೆ’ ಎನ್ನುತ್ತಾರೆ ಕೃಷ್ಣಮೂರ್ತಿ.
“ಮಳೆ ನೀರು ಕೊಯ್ಲು ಬಗ್ಗೆ ಸಂಸ್ಥೆ 18 ವರ್ಷಗಳಿಂದ ಜಾಗೃತಿ ಮೂಡಿಸುತ್ತಾ ಬಂದಿದೆ. ಜತೆಗೆ ಸಂಸ್ಥೆಯಿಂದ 2 ಲಕ್ಷಕ್ಕೂ ಹೆಚ್ಚು ಕಡೆಗಳಲ್ಲಿ ಮಳೆ ನೀರು ಕೊಯ್ಲು ಪದ್ಧತಿ ಅಳವಡಿಸಲಾಗಿದೆ’ ಎನ್ನುತ್ತಾರೆ ಫಾರ್ಮಲ್ಯಾಂಡ್ ರೈನ್‌ವಾಟರ್ ಹಾರ್ವೆಸ್ಟಿಂಗ್ ಸಿಸ್ಟಮ್‌ನ ಸಹಭಾಗಿತ್ವ ಹೊಂದಿರುವ ವಿಜಯರಾಜ್.
ಮಳೆನೀರು ಕೊಯ್ಲು ಬಗ್ಗೆ ಹಲವು ಕಡೆ ಜಾಗೃತಿ ಮೂಡಿಸಲಾಗುತ್ತಿದೆ. ಮದುವೆ ಮನೆಯಲ್ಲಿ ಜಾಗೃತಿ ಮೂಡಿಸುವಂತೆ ಮನವಿ ಬಂದಿರುವುದು ಇದೇ ಮೊದಲು ಎಂದು ವಿಜಯ್ ಸಂತಸ ವ್ಯಕ್ತಪಡಿಸುತ್ತಾರೆ. ಜಾಗೃತಿ ಮೂಡಿಸುವುದಕ್ಕೆ ಸಂಸ್ಥೆ ಯಾವುದೇ ಶುಲ್ಕವನ್ನು ಪಡೆಯುತ್ತಿಲ್ಲ. ಹೆಚ್ಚಿನ ಮಾಹಿತಿಗೆ: 9448130524 ಸಂಪರ್ಕಿಸಿ.